ಉದ್ಯಮಿ ಅಪಹರಣ ಪ್ರಕರಣ | ಒಂದು ಕೋಟಿಗೆ ಬೇಡಿಕೆ ಇಟ್ಟಿದ್ದ ನಾಲ್ವರ ಬಂಧನ; ಮೈಸೂರಿನಲ್ಲಿ ಪೊಲೀಸರ ಮಿಂಚಿನ ಕಾರ್ಯಾಚರಣೆ
ಮೈಸೂರು, ಡಿ.08: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ಉದ್ಯಮಿ ಅಪಹರಣ ಪ್ರಕರಣಕ್ಕೆ ಕೇವಲ ಕೆಲವೇ ಗಂಟೆಗಳಲ್ಲಿ ತೆರೆ ಬಿದ್ದಿದೆ. ರಿಯಲ್ ಎಸ್ಟೇಟ್ ಉದ್ಯಮಿ ಲೋಕೇಶ್ ರನ್ನು ಅಪಹರಣ ಮಾಡಿ ಒಂದು ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದ ನಾಲ್ವರು ಆರೋಪಿಗಳನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಂತೋಷ್, ಅಭಿಷೇಕ್, ಪ್ರಜ್ವಲ್ ಮತ್ತು ದರ್ಶನ್ ಎಂದು ಗುರುತಿಸಲಾದ ಆರೋಪಿಗಳು ಈಗ ಪೊಲೀಸರು ಅತಿಥಿಯಾಗಿದ್ದಾರೆ.
ಡಿ.06ರ ರಾತ್ರಿ 8.15ರ ಸುಮಾರಿಗೆ ವಿಜಯನಗರ 3ನೇ ಹಂತದ ಹೆರಿಟೇಜ್ ಕ್ಲಬ್ ನಿಂದ ಮನೆಗೆ ತೆರಳಲು ಹೊರಟಿದ್ದ ಲೋಕೇಶ್ ಮೇಲೆ ಆರೋಪಿಗಳು ದಾಳಿ ನಡೆಸಿದರು. ಕಣ್ಣಿಗೆ ಖಾರದ ಪುಡಿ ಎರಚಿ, ಬಲವಂತವಾಗಿ ಟಾಟಾ ಸುಮೋ ವಾಹನದಲ್ಲಿ ಎತ್ತಿಕೊಂಡು ಹೋಗಿ ಒತ್ತೆಯಾಳಾಗಿರಿಸಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆರಂಭದಲ್ಲಿ ಒಂದು ಕೋಟಿಯನ್ನು ಕೇಳಿದ್ದ ಆರೋಪಿಗಳು , ಬಳಿಕ 30 ಲಕ್ಷ ರೂಪಾಯಿ ಕೊಡಬೇಕೆಂದು ಒತ್ತಾಯಿಸಿದ್ದರು.
ಘಟನೆಯ ನಂತರ ಲೋಕೇಶ್ ಪತ್ನಿಯ ದೂರಿನ ಮೇರೆಗೆ ವಿಜಯನಗರ ಪೊಲೀಸರು ತಕ್ಷಣ ಐದು ತಂಡಗಳನ್ನು ರಚಿಸಿ ತನಿಖೆ ಕೈಗೊಂಡರು. ಆರೋಪಿ ಪ್ರೀತಂ ಮೂಲಕ ಹಣ ನೀಡುವ ನೆಪದಲ್ಲಿ ಮಾಹಿತಿ ಸಂಗ್ರಹಿಸಿದ ಪೊಲೀಸರು, ಟವರ್ ಲೊಕೇಶನ್ ಆಧಾರದಲ್ಲಿ ಲೋಕೇಶ್ ಅವರನ್ನು ಕೆ.ಆರ್.ನಗರದ ಹಂಪಾಪುರ ಬಳಿ ಇರಿಸಿಕೊಂಡಿರುವುದು ಪತ್ತೆಹಚ್ಚಿದರು. ಬಳಿಕ ಸಿನಿಮೀಯ ಶೈಲಿಯಲ್ಲಿ ನಡೆಸಿದ ದಾಳಿಯಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು ಉದ್ಯಮಿಯನ್ನು ರಕ್ಷಿಸಿದರು.
ತನಿಖೆಯಿಂದ ಹೊರಬಿದ್ದ ಮಾಹಿತಿಯಂತೆ, ಪ್ರಕರಣದ ಕಿಂಗ್‌ಪಿನ್ ಸಂತೋಷ್ ಲೋಕೇಶ್ ರಿಗೆ ನಾಲ್ಕು ತಿಂಗಳಿಂದ ಪರಿಚಯವಾಗಿದ್ದ. ಉದ್ಯಮಿಯ ಹಣಕಾಸು ವ್ಯವಹಾರಗಳು ಹಾಗೂ ರಿಯಲ್ ಎಸ್ಟೇಟ್ ಚಟುವಟಿಕೆಗಳನ್ನು ಗಮನಿಸಿದ ಆತ, ತನ್ನ ಸ್ನೇಹಿತರನ್ನು ಸೇರಿಸಿಕೊಂಡು ಅಪಹರಣಕ್ಕೆ ಸಂಚು ರೂಪಿಸಿದ್ದ. ಸುಲಭವಾಗಿ ಹಣ ಗಳಿಸಬೇಕೆಂಬ ಆಸೆಯಿಂದ ಗಾರೆ ಕೆಲಸ ಮತ್ತು ಸಣ್ಣ ಪುಟ್ಟ ಕೂಲಿ ಕೆಲಸ ಮಾಡುತ್ತಿದ್ದ ಆರೋಪಿಗಳು ಈ ಅಪರಾಧಕ್ಕೆ ಮುಂದಾಗಿದ್ದರು.
ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
