ವಾರದ ಹಿಂದಷ್ಟೇ ಮದುವೆಯಾದ ನವಜೋಡಿಯನ್ನು ಬೇರ್ಪಡಿಸಿದ ಜಾತಿ: ಹೆಂಡತಿಯನ್ನು ಮರಳಿ ಒಪ್ಪಿಸುವಂತೆ ಎಸ್ಪಿಗೆ ಮೊರೆ
ಕೊಪ್ಪಳ, ಡಿ. 9: ಕೊಪ್ಪಳ ಜಿಲ್ಲೆಯಲ್ಲಿ ಕೇವಲ ಒಂದು ವಾರದ ಹಿಂದೆ ಪ್ರೀತಿಸಿ ಮದುವೆಯಾದ ನವಜೋಡಿಯನ್ನೇ ಯುವತಿಯ ಪೋಷಕರು ಮನೆಗೆ ಕರೆದುಕೊಂಡು ಹೋಗಿ ಬೇರ್ಪಡಿಸಿರುವ ಘಟನೆ ನಡೆದಿದೆ. ಹೆಂಡತಿಯನ್ನು ಮರಳಿಸಬೇಕೆಂದು ಯುವಕ ನೇರವಾಗಿ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ದೂರು ನೀಡಿದ್ದಾರೆ.
ಚುಕ್ಕನಕಲ್ ಗ್ರಾಮದ ಗಣೇಶ್ ಮತ್ತು ಉಷಾರಾಣಿ ಕಳೆದ ವಾರ ಹುಲಗೆಮ್ಮಾ ದೇವಾಲಯದಲ್ಲಿ ಮದುವೆಯಾಗಿದ್ದರು. ಮದುವೆಯೊಂದೇ ವಾರದೊಳಗೆ “ರಾಜೀ ಮಾತುಕತೆ” ಹೆಸರಿನಲ್ಲಿ ಉಷಾರಾಣಿ ಪೋಷಕರು ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿರುವುದಾಗಿ ಗಣೇಶ್ ಆರೋಪಿಸಿದ್ದಾರೆ.
ಗಣೇಶ್ ವಾಲ್ಮೀಕಿ ಸಮುದಾಯದವರಾಗಿದ್ದರೆ, ಉಷಾರಾಣಿ ರಡ್ಡಿ–ಲಿಂಗಾಯತ ಸಮುದಾಯಕ್ಕೆ ಸೇರಿದವರು. ಈ ಜಾತಿ ಭಿನ್ನತೆಯೇ ದಂಪತಿಗೆ ತೊಂದರೆ ತಂದಿದೆ ಎಂದು ಅವರು ಹೇಳಿದ್ದಾರೆ.
“ನಾವು ಪ್ರೀತಿಯಿಂದ ಮದುವೆಯಾಗಿದ್ದೇವೆ. ಹೆಂಡತಿಯ ಬಗ್ಗೆ ಜೀವಭಯವಿದೆ. ಆಕೆಯನ್ನು ಸುರಕ್ಷಿತವಾಗಿ ಮರಳಿ ಒಪ್ಪಿಸಬೇಕು” ಎಂದು ಗಣೇಶ್ ಎಸ್ಪಿ ಕಚೇರಿಯಲ್ಲಿ ಮನವಿ ಸಲ್ಲಿಸಿದರು.
ಗಣೇಶ್ ತಂದೆ ಸುರೇಶ ಮಾತನಾಡಿ, “ಮದುವೆ ಆದ ದಿನದಿಂದ ಇಂದಿನವರೆಗೂ ಮಗ ಹೆಂಡತಿಯ ಮುಖ ಕಂಡಿಲ್ಲ.ಪೋಷಕರು ಬಂದು ಮಗಳನ್ನು ಕರೆದುಕೊಂಡು ಹೋದರು. ಮಗಳಿಗೆ ಏನಾದರೂ ಆದರೆ ಯಾರು ಹೊಣೆ?” ಎಂದು ಪ್ರಶ್ನಿಸಿದರು.
