ಎಮ್ಮೆಮಾಡು, ಕೊಳಕೇರಿ ಸೇರಿದಂತೆ ವಿವಿಧೆಡೆ ಸಂಭ್ರಮದ ಈದ್ ಮಿಲಾದ್ ಆಚರಣೆ:ಗಮನ ಸೆಳೆದ ಮಕ್ಕಳ ದಫ್ ಪ್ರದರ್ಶನ

ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು : ಪ್ರವಾದಿ ಮಹಮ್ಮದ್ ಪೈಗಂಬರ್ ರವರ 1500 ಜನ್ಮದಿನಾಚರಣೆಯ ಅಂಗವಾಗಿ ಆಚರಿಸಲ್ಪಡುವ ಈದ್ ಮಿಲಾದ್ ಕಾರ್ಯಕ್ರಮವು ನಾಪೋಕ್ಲು ಬಳಿಯ ಎಮ್ಮೆಮಾಡು,ಹಳೇ ತಾಲೂಕು, ಕೊಳಕೇರಿ, ಸೇರಿದಂತೆ ವಿವಿಧಡೆ ಮಸೀದಿ ಮದರಸಗಳ ಆಶ್ರಯದಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಎಮ್ಮೆಮಾಡುವಿನಲ್ಲಿ ಶುಕ್ರವಾರ ಫಜರ್ ನಮಾಜಿನ ಬಳಿಕ ಮಸೀದಿಯ ಖತೀಬರಾದ ರಾಝಿಕ್ ಫೈಝಿ ಹಾಗೂ ಮುದರ್ರಿಸ್ ಹಂಸ ಸಖಾಫಿ ಅವರ ನೇತೃತ್ವದಲ್ಲಿ ಮೌಲೂದ್ ಪಾರಾಯಣ ಹಾಗೂ ಸೂಫೀ ಶಹೀದ್ ಅವರ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಅದರಂತೆ ಕೊಳಕೇರಿಯ ಜುಮಾ ಮಸೀದಿಯಲ್ಲಿ ಖತೀಬರಾದ ಅಶ್ರಫ್ ಅಹ್ಸನಿ ಕಾಮಿಲ್ ಸಖಾಫಿ, ಹಳೇ ತಾಲೂಕಿನ ಬದ್ರಿಯಾ ಜುಮಾ ಮಸೀದಿಯಲ್ಲಿ ಖತೀಬರಾದ ಖಲೀಲ್ ಹಿಮಮಿ ಅವರ ನೇತೃತ್ವದಲ್ಲಿ ಮೌಲೂದ್ ಪಾರಾಯಣ ಹಾಗೂ ವಿಶೇಷ ಪ್ರಾರ್ಥನೆ ನಡೆಯಿತು. ಎಮ್ಮೆಮಾಡು ಬಳಿಯ ಪಡಿಯಾಣಿ,ಕೊಟ್ಟಮುಡಿ, ಕುಂಜಿಲ,ಹೊದವಾಡ ಆಜಾದ್ ನಗರದ ಜುಮಾ ಮಸೀದಿಗಳಲ್ಲಿ ಆಯಾ ಮಸೀದಿಗಳ ಖತೀಬರ ನೇತೃತ್ವದಲ್ಲಿ ಮೌಲುದ್ ಪಾರಾಯಣ ಹಾಗೂ ವಿಶೇಷ ಪ್ರಾರ್ಥನೆ ನಡೆಯಿತು. ಕಾರ್ಯಕ್ರಮದಲ್ಲಿ ವಿಶ್ವ ಪ್ರವಾದಿಯವರ ಸೌಹಾರ್ಧತೆಯ ಸಂದೇಶಗಳನ್ನು ಸಾರುವ ಜಾಥಾ ನಡೆಯಿತು. ಜಾಥಾದಲ್ಲಿ ವಿದ್ಯಾರ್ಥಿಗಳ, ಯುವಕರ, ಹಾಗೂ ಹಿರಿಯರ ದಫ್ ಪ್ರದರ್ಶನ ನೋಡುಗರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಮದರಸ ಹಾಗೂ ದರ್ಸ್ ವಿದ್ಯಾರ್ಥಿಗಳ ಗಾಯನ ಸ್ಪರ್ಧೆ, ಭಾಷಣ,ಕವಾಲಿ,ಬುರ್ದಾ,ಸೇರಿದಂತೆ ಪ್ರವಾದಿಯವರ ಸಂದೇಶ ಸಾರುವ ಹಲವಾರು ಕಾರ್ಯಕ್ರಮಗಳು ನಡೆದು ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭ ಆಯಾ ಜಮಾಅತ್ ನ ಅಧ್ಯಕ್ಷರು, ಆಡಳಿತ ಮಂಡಳಿ ಪದಾಧಿಕಾರಿಗಳು, ಮಸೀದಿಯ ಧರ್ಮ ಗುರುಗಳು, ಮದರಸ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಜಮಾಅತ್ ನ ಸರ್ವ ಸದಸ್ಯರು ಮತ್ತಿತರರು ಪಾಲ್ಗೊಂಡಿದ್ದರು.