ಮದಲಾಪುರ ಶಾಲೆಯಲ್ಲಿ ಅನಾವರಣಗೊಂಡ ಮಕ್ಕಳ ಪ್ರತಿಭಾ ಕಾರಂಜಿ: ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಅಗತ್ಯ:ಬಿಇಓ ಕೃಷ್ಣಪ್ಪ ಕರೆ

ಮದಲಾಪುರ ಶಾಲೆಯಲ್ಲಿ ಅನಾವರಣಗೊಂಡ ಮಕ್ಕಳ ಪ್ರತಿಭಾ ಕಾರಂಜಿ:  ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಅಗತ್ಯ:ಬಿಇಓ ಕೃಷ್ಣಪ್ಪ ಕರೆ

ಕೂಡಿಗೆ/ಕುಶಾಲನಗರ, ನ.22: ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ, ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಕೂಡಿಗೆ ಕ್ಲಸ್ಟರ್ ಕೇಂದ್ರದ ವತಿಯಿಂದ ಕುಶಾಲನಗರ ತಾಲ್ಲೂಕಿನ ಕೂಡಿಗೆ ಸಮೀಪದ ಮದಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ( ನ.22 ರಂದು) ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸಾಂಸ್ಕೃತಿಕ ಸ್ಪರ್ಧೆ ಏರ್ಪಡಿಸಲಾಗಿತ್ತು.

ವಿವಿಧ ವೇಷಭೂಷಣಗಳನ್ನು ತೊಟ್ಟು ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ ವಿದ್ಯಾರ್ಥಿ ಗಳು ಪ್ರೇಕ್ಷಕರ ಗಮನ ಸೆಳೆದರು.

ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳ ಜತೆಗೆ ಕ್ರೀಡೆ, ಪ್ರತಿಭಾ ಕಾರಂಜಿಯಂತಹ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಜ್ಞಾನ ಸಂಪಾದನೆ ಜತೆಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು. ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಲು ಶಿಕ್ಷಕರು ಹಾಗೂ ಪೋಷಕರ ಪ್ರೋತ್ಸಾಹ ಅಗತ್ಯ ಎಂದು ಸಲಹೆ ನೀಡಿದರು. 

ವಿದ್ಯಾರ್ಥಿಗಳಿಗೆ ಕಲಿಕೆ ಜತೆಗೆ ಸಂಸ್ಕೃತಿ, ಸಂಸ್ಕಾರ ಕಲಿಸುವುದು ಮುಖ್ಯ. ವಿದ್ಯಾರ್ಥಿಗಳು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇಂತಹ ವೇದಿಕೆಗಳು ಸಹಕಾರಿಯಾಗಿವೆ ಎಂದರು. ಶಿಶು ಕೇಂದ್ರೀತ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರು ಮಕ್ಕಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಕಲಿಸುವುದರೊಂದಿಗೆ ಮಕ್ಕಳ ಪ್ರತಿಭೆಯನ್ನು ಅನಾವರಣ ಗೊಳಿಸುತ್ತಿರುವುದನ್ನು ಬಿಇಓ ಕೃಷ್ಣಪ್ಪ ಶ್ಲಾಘಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲೆಯ ಹಳೆಯ ವಿದ್ಯಾರ್ಥಿಯೂ ಆದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಎಂ.ವಿ.ಮಂಜೇಶ್, ಕಳೆದ 23 ವರ್ಷಗಳ ಹಿಂದೆ ಆರಂಭಗೊಂಡ ಮಕ್ಕಳ ಪ್ರತಿಭಾ ಕಾರಂಜಿ ಸ್ಪರ್ಧೆಯು ಮಕ್ಕಳಲ್ಲಿ ಕಲಾ ಪ್ರತಿಭೆಯನ್ನು ಹೊರ ತರಲು ಸೂಕ್ತ ವೇದಿಕೆ ಒದಗಿಸುತ್ತಿದೆ. ಮಕ್ಕಳ ಇಂತಹ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಹಾಗೂ ಪೋಷಕರ ಸಹಕಾರ ಅನನ್ಯವಾದುದು ಎಂದರು.

 ಕೂಡಿಗೆ ಡಯಟ್ ಸಂಸ್ಥೆಯ ಉಪನ್ಯಾಸಕ ವಿ. ವಿಜಯ್ ಮಾತನಾಡಿ, ಪ್ರತಿಭೆಯು ಮಕ್ಕಳಲ್ಲಿ ಸಹಜವಾಗಿ ಹುದುಗಿರುತ್ತದೆ. ಶಿಕ್ಷಕರು ಮತ್ತು ಪೋಷಕರು ಮಕ್ಕಳ ಇಂತಹ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡಿ ಬೆಳೆಸಿ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾದುದು ಎಂದರು.

ಸಿ ಆರ್ ಪಿ ಕೆ.ಶಾಂತಕುಮಾರ್ , ಪ್ರತಿಭಾ ಕಾರಂಜಿ ಸ್ಪರ್ಧೆಯ ಉದ್ದೇಶ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಎಸ್ ಡಿ ಎಂ ಸಿ ಅಧ್ಯಕ್ಷ ಎಚ್.ಪಿ.ಗಣೇಶ್ ಮಾತನಾಡಿದರು.

ಕೂಡಿಗೆ ಗ್ರಾ.ಪಂ.ಸದಸ್ಯೆ ಲಕ್ಷ್ಮಿ, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಚಿಮ್ಮಿ, ಶಾಲಾ ಮುಖ್ಯ ಶಿಕ್ಷಕಿ ಎಂ. ರೇಣುಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಮಿತಿಯ ಉಪಾಧ್ಯಕ್ಷ ಎಸ್.ಎ.ಯೋಗೇಶ್, ಪ್ರೌಢಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ದಯಾನಂದ ಪ್ರಕಾಶ್, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಬಿ.ಆರ್.ಪಿ. ಎಸ್.ಎಸ್.ಶಿವಕುಮಾರ್, ನಿವೃತ್ತ ಮುಖ್ಯ ಶಿಕ್ಷಕರಾದ ಯು.ಹರೀಶ್, ಎಂ.ಎನ್.ರಾಮೇಗೌಡ, ನಿವೃತ್ತ ಚಿತ್ರಕಲಾ ಶಿಕ್ಷಕ ಉ.ರಾ.ನಾಗೇಶ್, ಶ್ರೀ ಬಸವೇಶ್ವರ ಗ್ರಾಮ ದೇವಾಲಯ ಸಮಿತಿಯ ಅಧ್ಯಕ್ಷ ದಿನೇಶ್, ಉಪಾಧ್ಯಕ್ಷ ವಿಜಯಕುಮಾರ್, ಮಾಜಿ ಅಧ್ಯಕ್ಷ ಕುಶಾಲಪ್ಪ, ದಾನಿ ಜಿ.ಎಲ್. ನಾರಾಯಣ, ಜ್ಞಾನೋದಯ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ರಾಜೇಗೌಡ, ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ಎಚ್.ಎಲ್.ಪ್ರಕಾಶ್, ಸದಸ್ಯರು, ಪೋಷಕರು, ವಿವಿಧ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

ಶಿಕ್ಷಕ ಎಸ್.ಸುಂದರ್ ವಂದಿಸಿದರು. ಸಿ ಆರ್ ಪಿ ಕೆ.ಶಾಂತಕುಮಾರ್ ಸ್ವಾಗತಿಸಿದರು. ಶಿಕ್ಷಕಿ ಕೆ.ಕೆ.ಗಾಯತ್ರಿ ನಿರ್ವಹಿಸಿದರು. ವಿದ್ಯಾರ್ಥಿ ಅಮೂಲ್ಯ ಪ್ರಾರ್ಥಿಸಿದರು.

 ಮಕ್ಕಳ ಪ್ರತಿಭಾ ಅನಾವರಣ: ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಶಾಲಾ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಕಲಾ ಪ್ರತಿಭೆಯನ್ನು ಅನಾವರಣಗೊಳಿಸಿ ಪ್ರೇಕ್ಷಕರ ಗಮನ ಸೆಳೆದರು. ವಿದ್ಯಾರ್ಥಿಗಳು ಛದ್ಮವೇಷ ಸ್ಪರ್ಧೆ, ರಂಗೋಲಿ, ಚಿತ್ರಕಲೆ,ಅಭಿನಯ, ಕವನ ವಾಚನ, ಕವ್ವಾಲಿ, ಗಝಲ್, ಧಾರ್ಮಿಕ ಪಠಣ, ಜಾನಪದ ಗೀತೆ, ಆಶುಭಾಷಣ, ಪ್ರಬಂಧ, ಭಾಷಣ, ಚರ್ಚಾಸ್ಪರ್ಧೆ ಮತ್ತು ರಸಪ್ರಶ್ನೆ , ಜಾನಪದ ನೃತ್ಯ ಹಾಗೂ ಭರತ ನಾಟ್ಯ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದರು. ಕ್ಲೇ ಮಾಡಲಿಂಗ್ ಸ್ಪರ್ಧೆಯಲ್ಲಿ ಮಕ್ಕಳು ಮಣ್ಣಿನಿಂದ ವಿವಿಧ ಕಲಾಕೃತಿಗಳನ್ನು ರಚಿಸಿ ಗಮನ ಸೆಳೆದರು.