ಡಿಡಿಪಿಐ ರಂಗಧಾಮಪ್ಪ ಅವರಿಗೆ ಆತ್ಮೀಯ ಬೀಳ್ಕೊಡುಗೆ: ಶಿಕ್ಷಣ ಇಲಾಖೆಯ ಸೇವೆಯು ಅನನ್ಯವಾದ ಸೇವೆ:ಡಿಡಿಪಿಐ ರಂಗಧಾಮಪ್ಪ

ಮಡಿಕೇರಿ:ಮಡಿಕೇರಿ ನಗರದ ಶಾಲಾ ಶಿಕ್ಷಣ ಇಲಾಖೆಯಲ್ಲಿ ಉಪ ನಿರ್ದೇಶಕ (ಆಡಳಿತ ) ರಾಗಿ ಸೇವೆ ಸಲ್ಲಿಸುತ್ತಿದ್ದು ವರ್ಗಾವಣೆಗೊಂಡ ಡಿಡಿಪಿಐ ಸಿ.ರಂಗಧಾಮಪ್ಪ ಅವರನ್ನು ಶಿಕ್ಷಣ ಇಲಾಖೆಯ ವತಿಯಿಂದ ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು. ಡಿಡಿಪಿಐ ಕಛೇರಿಯಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ನಿರ್ಗಮಿತ ಡಿಡಿಪಿಐ ಸಿ.ರಂಗಧಾಮಪ್ಪ ಅವರನ್ನು ಕಛೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ವರ್ಗಾವಣೆಗೊಂಡ ಡಿಡಿಪಿಐ ಸಿ.ರಂಗಧಾಮಪ್ಪ ಮಾತನಾಡಿ, ಶಿಕ್ಷಣ ಇಲಾಖೆಯ ಸೇವೆಯು ಅನನ್ಯವಾದ ಸೇವೆ. ಇದನ್ನು ಶ್ರದ್ಧೆ, ಪ್ರಾಮಾಣಿಕತೆಯಿಂದ ನಿರ್ವಹಿಸುವ ಮೂಲಕ ಎಲ್ಲರೂ ಇಲಾಖೆಯ ಘನತೆ ಮತ್ತು ವೃತ್ತಿಗೌರವವನ್ನು ಹೆಚ್ಚಿಸಬೇಕು ಎಂದರು. ಜಿಲ್ಲೆಯಲ್ಲಿ ಈ ಹಿಂದಿನ ಎರಡು ವರ್ಷಗಳಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಕೊಡಗು ಜಿಲ್ಲೆಯು 4 ನೇ ಸ್ಥಾನ ಗಳಿಸಿದೆ. ಇದಕ್ಕೆ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಕರ ವಿಶೇಷ ಕಾಳಜಿ ಮತ್ತು ಪರಿಶ್ರಮ ಕೂಡ ಕಾರಣವಾಗಿದೆ ಎಂದರು. ಪ್ರಸಕ್ತ ಸಾಲಿನಲ್ಲಿ ಕೂಡ ಜಿಲ್ಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶವನ್ನು ಉತ್ತಮಪಡಿಸಲು ಉತ್ತಮ ಯೋಜನೆಗಳನ್ನು ರೂಪಿಸಿ ಅವುಗಳ ಅನುಷ್ಠಾನಕ್ಕೆ ಅವಿರತ ಶ್ರಮ ವಹಿಸಬೇಕಿದೆ ಎಂದರು. ತಮಗೆ ಈ ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕರು ನೀಡಿದ ಪ್ರೀತಿ- ವಿಶ್ವಾಸ ಅನನ್ಯವಾದುದು ಎಂದು ರಂಗಧಾಮಪ್ಪ ಹೇಳಿದರು. ಸರ್ಕಾರಿ ಸೇವೆಯಲ್ಲಿ ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ, ಸಮಯ ಪಾಲನೆ ಮಾಡುವ ಮೂಲಕ ವೃತ್ತಿ ಗೌರವವನ್ನು ಕಾಪಾಡಬೇಕಿದೆ ಎಂದರು.
ನೂತನ ಡಿಡಿಪಿಐ ಬಸವರಾಜು ಮಾತನಾಡಿ, ಶೈಕ್ಷಣಿಕವಾಗಿ ಉತ್ತಮ ಹೆಸರು ಪಡೆದಿರುವ ಕೊಡಗಿನಲ್ಲಿ ಈ ಹಿಂದಿನ ಡಿಡಿಪಿಐ ರಂಗಧಾಮಪ್ಪ ಅವರು ಕೈಗೊಂಡ ಶೈಕ್ಷಣಿಕ ಯೋಜನೆಗಳನ್ನು ಎಲ್ಲರ ಸಹಕಾರದಿಂದ ಮುಂದುವರೆಸುವ ಮೂಲಕ ಪ್ರಸಕ್ತ ಸಾಲಿನಲ್ಲಿ ಕೂಡ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸುಧಾರಣೆ ತರುವ ಮೂಲಕ ರಾಜ್ಯಮಟ್ಟದಲ್ಲಿ ಉತ್ತಮ ಸ್ಥಾನ ಪಡೆಯಲು ತಾವು ಶ್ರಮಿಸುವುದಾಗಿ ತಿಳಿಸಿದರು. ಡಿಡಿಪಿಐ ರಂಗಧಾಮಪ್ಪ ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಮತ್ತು ಶಿಕ್ಷಕರ ಜತೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿ ಮೆಚ್ಚುಗೆ ಗಳಿಸಿರುವುದು ಅಧಿಕಾರಿಗಳ ಸೇವೆಗೆಕೈಗನ್ನಡಿ ಹಿಡಿದಂತೆ ಆಗಿದೆ ಎಂದರು.
ಕೂಡಿಗೆ ಡಯಟ್ ಪ್ರಾಂಶುಪಾಲ ಡಿ.ಉದಯ್ ಕುಮಾರ್ ಮಾತನಾಡಿ, ಇಲಾಖೆಯಲ್ಲಿ ಎಲ್ಲರೂ ಜತೆಗೂಡಿ ಕಾರ್ಯನಿರ್ವಹಿಸುವ ಮೂಲಕ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕಿದೆ ಎಂದರು. ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಸಿ.ಟಿ.ಸೋಮಶೇಖರ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಡಿಡಿಪಿಐ ಆಗಿ ಉತ್ತಮ ಸೇವೆ ಸಲ್ಲಿಸುವ ಮೂಲಕ ಜಿಲ್ಲೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶವನ್ನು ಸುಧಾರಿಸಲು ಡಿಡಿಪಿಐ ರಂಗಧಾಮಪ್ಪ ಅವರು ಕೈಗೊಂಡ ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳು ಮಾದರಿಯಾದುದು ಎಂದರು. ಡಿಡಿಪಿಐ ರಂಗಧಾಮಪ್ಪ ಅವರು ಜಿಲ್ಲೆಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಕೈಗೊಂಡ ಉತ್ತಮ ಸೇವೆ ಸಲ್ಲಿಸಿದ ಕುರಿತು ಡಿವೈಪಿಸಿಗಳಾದ ಎಂ.ಕೃಷ್ಣಪ್ಪ, ಸೌಮ್ಯ ಪೊನ್ನಪ್ಪ, ನಿವೃತ್ತ ಶಿಕ್ಷಣಾಧಿಕಾರಿ ಎಂ.ಮಹಾದೇವಸ್ವಾಮಿ ಅವರು ಮಾತನಾಡಿದರು.
ಅಕ್ಷರ ದಾಸೋಹ ಯೋಜನೆಯ ಶಿಕ್ಷಣಾಧಿಕಾರಿ ಹೇಮಂತ್ ರಾಜ್, ಜಿಲ್ಲಾ ಶಿಕ್ಷಣಾಧಿಕಾರಿ ಡಾ ಸದಾಶಿವಯ್ಯ ಎಸ್.ಪಲ್ಲೇದ್, ನಿವೃತ್ತ ಶಿಕ್ಷಣಾಧಿಕಾರಿ ಶಿವಕುಮಾರ್, ಕಛೇರಿಯ ಪತ್ರಾಂಕಿತ ಅಧಿಕಾರಿ ಪಿ.ಎಸ್. ನಟರಾಜ್, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಜಿ.ಕುಮಾರ್, ಮಾಜಿ ಅಧ್ಯಕ್ಷ ಸಿ.ಟಿ.ಸೋಮಶೇಖರ್, ಪ್ರಮುಖರಾದ ಎಂ.ಟಿ.ದಯಾನಂದ ಪ್ರಕಾಶ್, ಪಿ.ನವೀನ್ ಕುಮಾರ್, ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕ ಕೆ.ಪಿ.ಗುರುರಾಜ್, ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಚ್.ಕೆ.ಕುಮಾರ್ , ಶಿಕ್ಷಕರ ಸಂಘಟನೆಯ ಶರತ್ ಕುಮಾರ್, ಷಫಿ ಉಲ್ಲಾ ಷರೀಫ್, ಶಿವಲಿಂಗ ಇತರರು ಇದ್ದರು. ವರ್ಗಾವಣೆಗೊಂಡ ಡಿಡಿಪಿಐ ರಂಗಧಾಮಪ್ಪ ಅವರನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿ ಹೂಗುಚ್ಛ ನೀಡಿ ಅಭಿನಂದಿಸಿ ಸನ್ಮಾನಿಸಿ ಬೀಳ್ಕೊಟ್ಟರು.