ಸೆಪ್ಟೆಂಬರ್ 01ರಂದು ಕೊಡಗು ಜಿಲ್ಲಾ ಬಿಜೆಪಿಯಿಂದ ಧರ್ಮಸ್ಥಳ ಚಲೋ ಕಾರ್ಯಕ್ರಮ

ಮಡಿಕೇರಿ:ಹಿಂದೂಗಳ ಪವಿತ್ರ ಪುಣ್ಯ ಕ್ಷೇತ್ರವಾದ ಶ್ರೀ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಇತ್ತೀಚಿನ ವರ್ಷಗಳಿಂದ ಸುಳ್ಳು ಕಥೆಗಳನ್ನು ಸೃಷ್ಟಿಸಿ ದೇವಾಲಯ ಮತ್ತು ಆಡಳಿತ ಮಂಡಳಿ ಗಳ ಮುಖ್ಯಸ್ಥರುಗಳ ವಿರುದ್ದ ಹೇಳಿಕೆಗಳನ್ನು ನೀಡುತ್ತಾ ಯೂಟ್ಯೂಬ್ ಚ್ಯಾನಲ್ ಗಳನ್ನು ಬಳಸಿಕೊಂಡು ಪವಿತ್ರ ಕ್ಷೇತ್ರದ ಹೆಸರುನ್ನು ಹಾಳು ಮಾಡಿ ಹಿಂದೂಗಳ ಧರ್ಮ ದೇವರುಗಳನ್ನು ಅವಹೇಳನ ಮಾಡುತ್ತಿರುವ ಷಡ್ಯಂತ್ರವನ್ನು ಬಯಲಿಗೆಳೆದು ಈ ಸಂಚಿನ ಹಿಂದಿರುವ ಕೈಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ರಾಜ್ಯ ಬಿಜೆಪಿ ಕರೆ ನೀಡಿರುವ ಹಿನ್ನಲೆ ಯಲ್ಲಿ ಕೊಡಗು ಬಿಜೆಪಿಯಿಂದ ಸಾವಿರಾರು ಸಂಖ್ಯೆಯಲ್ಲಿ ಸೋಮವಾರ ದಿನ ಧರ್ಮಸ್ಥಳದತ್ತ ತೆರಳಲು ಪಕ್ಷ ಈಗಾಗಲೇ ಪೂರ್ವ ತಯಾರಿಯಲ್ಲಿ ತೊಡಗಿದೆ ಎಂದು ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ತಿಳಿಸಿದ್ದಾರೆ.
ಮಡಿಕೇರಿ ನಗರ ಗ್ರಾಮಾಂತರ ಮಂಡಲ ವಿರಾಜಪೇಟೆ ಮತ್ತು ಸೋಮವಾರಪೇಟೆ ಮಂಡಲಗಳಲ್ಲಿ ಈಗಾಗಲೇ ಪೂರ್ವ ತಯಾರಿ ಸಭೆಗಳಾಗಿದ್ದು ಬಿಜೆಪಿ ಕಾರ್ಯಕರ್ತರು ಅಲ್ಲದೆ ಶ್ರೀ ಧರ್ಮಸ್ಥಳ ಕ್ಷೇತ್ರದ ಭಕ್ತರು ಕೂಡ ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ರವಿ ಕಾಳಪ್ಪರವರು ಮಾಹಿತಿ ನೀಡಿದ್ದಾರೆ.
ಸೆಪ್ಟೆಂಬರ್ 1 ರಂದು ಸೋಮವಾರ ಬೆಳ್ಳಿಗೆ 8 ಗಂಟೆಗೆ ಕೊಡಗಿನ ಕಾರ್ಯಕರ್ತರು ಮತ್ತು ಭಕ್ತರು ಕೊಯಿನಾಡಿನ ಶ್ರೀ ಮಹಾ ಗಣಪತಿ ದೇವಾಲಯದಲ್ಲಿ ಸೇರಿ ಧರ್ಮಸ್ಥಳಕ್ಕೆ ತೆರಳಲಿದ್ದಾರೆ. ಅಂದು ಮಧ್ಯಾಹ್ನ 2 ಗಂಟೆಗೆ ಸಾರ್ವಜನಿಕ ಪ್ರತಿಭಟನಾ ಸಭೆ ನಡೆಯಲಿದೆ. ಈ ಪ್ರತಿಭಟನೆಗೆ ರಾಜ್ಯದ ಮೂಲೆ ಮೂಲೆಗಳಿಂದ ಅಂದಾಜು1ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಮತ್ತು ಭಕ್ತ ವೃಂದ ಭಾಗವಹಿಸಲ್ಲಿದ್ದು ಕೊಡಗಿನಿಂದ ಸುಮಾರು 400 ರಿಂದ 500 ವಾಹನಗಳಲ್ಲಿ ಸುಮಾರು 2000ಕ್ಕೂ ಮೇಲ್ಪಟ್ಟು ಕಾರ್ಯಕರ್ತರು ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತಿಭಟನೆಯ ನೇತೃತ್ವವನ್ನು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಹಿಸಲಿದ್ದು.ಪಕ್ಷದ ಸಂಸದರು ನಾಯಕರು, ಶಾಸಕರು ರಾಜ್ಯ ಹಾಗೂ ಜಿಲ್ಲೆಯ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗ ವಹಿಸಲಿದ್ದಾರೆ ಎಂದು ನಾಪಂಡ ರವಿ ಕಾಳಪ್ಪ ತಿಳಿಸಿದ್ದಾರೆ.