ಕೊಡಗು ಜಿಲ್ಲೆಯ ಪ್ರಪ್ರಥಮ ರಾಷ್ಟ್ರ ಮಟ್ಟದ ಫುಟ್ಬಾಲ್ ತೀರ್ಪುಗಾರನಾಗಿ ಧೀರಜ್ ರೈ ಶ್ರೀನಿವಾಸ್; ಬೆಂಗಳೂರು ಜಿಲ್ಲೆಯ ನಂತರ ರಾಜ್ಯದ ಮೊದಲ ರೆಫ್ರಿ ಧೀರಜ್ ರೈ
(ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ:ಕ್ರೀಡಾ ತವರೂರು ಕೊಡಗು ಜಿಲ್ಲೆಯ ಇತಿಹಾಸದಲ್ಲೇ ಪ್ರಪ್ರಥಮ ರಾಷ್ಟ್ರೀಯ ಮಟ್ಟದ ಫುಟ್ಬಾಲ್ ತೀರ್ಪುಗಾರರಾಗಿ ಜಿಲ್ಲೆಯ ಸಿದ್ದಾಪುರದ 26 ವರ್ಷದ ಯುವಕ ಧೀರಜ್ ರೈ ಶ್ರೀನಿವಾಸ್ ಆಯ್ಕೆಯಾಗುವುದರ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.ತನ್ನ 19ನೇ ವರ್ಷದಲ್ಲಿ ರಾಜ್ಯ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಧೀರಜ್ ರೈ ಕಳೆದ ಏಳು ವರ್ಷಗಳಿಂದ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ರಾಷ್ಟ್ರೀಯ ಮಟ್ಟದ ಫುಟ್ಬಾಲ್ ತೀರ್ಪುಗಾರ ಪರೀಕ್ಷೆಗೆ ಅರ್ಹತೆ ಪಡೆದ ಬಳಿಕ ಸತತ ಮೂರು ವರ್ಷಗಳ ಕಠಿಣ ಪರಿಶ್ರಮದಿಂದ ಧೀರಜ್ ರೈ ಶ್ರೀನಿವಾಸ್ ರಾಷ್ಟ್ರ ಮಟ್ಟದ ತೀರ್ಪುಗಾರರಾಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರು ಜಿಲ್ಲೆಯ ನಂತರ ರಾಜ್ಯದ ಮೊಟ್ಟ ಮೊದಲ ಫುಟ್ಬಾಲ್ ರೆಫ್ರಿ;
ಸಾಮಾನ್ಯವಾಗಿ ರಾಜ್ಯ ರಾಜ್ಯಧಾನಿ ಬೆಂಗಳೂರಿನಲ್ಲೇ ಅತೀ ಹೆಚ್ಚು ರಾಷ್ಟ್ರೀಯ ಮಟ್ಟದ ಫುಟ್ಬಾಲ್ ತೀರ್ಪುಗಾರರು ಕಾರ್ಯನಿರ್ವಹಿಸುತ್ತಿದ್ದಾರೆ.ಆದರೆ ಬೆಂಗಳೂರು ಜಿಲ್ಲೆಯ ನಂತರ ಮೊಟ್ಟ ಮೊದಲ ಫುಟ್ಬಾಲ್ ರೆಫ್ರಿ ಎಂಬ ಹೆಗ್ಗಳಿಕೆ ಕೊಡಗಿನ ಧೀರಜ್ ರೈ ಶ್ರೀನಿವಾಸ್ ಪಾತ್ರರಾಗಿದ್ದಾರೆ.
ಬೆಂಗಳೂರು ಬಳಿಕ ಮೈಸೂರು ಮತ್ತು ಧಾರವಾಡ ಜಿಲ್ಲೆಯ ಇಬ್ಬರು ರಾಷ್ಟ್ರ ಮಟ್ಟದ ಅಸಿಸ್ಟೆಂಟ್ ತೀರ್ಪುಗಾರರಾಗಿ ಆಯ್ಕೆಯಾಗಿದ್ದರು.ಆದರೆ ಮುಖ್ಯ ತೀರ್ಪುಗಾರರಾಗಿ ಬೆಂಗಳೂರಿನವರೇ ಆಯ್ಕೆಯಾಗುತ್ತಿದ್ದರು.ಇದೀಗ ಧೀರಜ್ ರಾಜ್ಯ ಫುಟ್ಬಾಲ್ ಹೊಸ ಇತಿಹಾಸ ಸೃಷ್ಟಿಸುವ ಮೂಲಕ ಬೆಂಗಳೂರು ಜಿಲ್ಲೆಯ ನಂತರ ಮೊಟ್ಟ ಮೊದಲ ರಾಜ್ಯದ ಫುಟ್ಬಾಲ್ ಮುಖ್ಯ ತೀರ್ಪುಗಾರ ಎಂಬ, ಕೊಡಗಿನ ಕ್ರೀಡಾ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.
ಕೊಡಗಿನ ಇತಿಹಾಸದಲ್ಲಿ ಅತ್ಯುತ್ತಮ ತೀರ್ಪುಗಾರ ಧೀರಜ್ ರೈ:
ಕೊಡಗು ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಫುಟ್ಬಾಲ್ ತೀರ್ಪುಗಾರರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.ಬಹುತೇಕರು ತೀರ್ಪುಗಾರರಾಗಿ ಆಯ್ಕೆಯಾದ ಬಳಿಕ ಜಿಲ್ಲೆಗೆ ಮಾತ್ರ ಸೀಮಿತಗೊಂಡಿದ್ದಾರೆ.ಆದರೆ ಧೀರಜ್ ರೈ ಅವರು 2019ರಿಂದಲೇ ರಾಜ್ಯ ಮಟ್ಟದ ಫುಟ್ಬಾಲ್ ತೀರ್ಪುಗಾರರಾಗಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸಿ ಅನುಭವ ಹೊಂದಿದ್ದಾರೆ.
ಅದಲ್ಲದೇ ಬೆಂಗಳೂರು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಫುಟ್ಬಾಲ್ ಪಂದ್ಯಾವಳಿಯ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಅಂಡರ್ 17 ಐ-ಲೀಗ್,ಜೈಪುರದಲ್ಲಿ ನಡೆದ ಖೇಲೋ ಇಂಡಿಯಾ ಯೂನಿವರ್ಸಿಟಿ ಪಂದ್ಯಾವಳಿ ಹಾಗೇ
ರಾಜ್ಯ ಫುಟ್ಬಾಲ್ ಸಂಸ್ಥೆಯ ಮಹಿಳೆಯರ ಸೂಪರ್ ಡಿವಿಷನ್,ಸಿ ಡಿವಿಷನ್,ಬೇಬಿ ಲೀಗ್ ಸೇರಿ ಹಲವು ಆಲ್ ಇಂಡಿಯಾ ಫುಟ್ಬಾಲ್ ಪಂದ್ಯಾವಳಿಯ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿ ಸಣ್ಣ ಪ್ರಾಯದಲ್ಲೇ ಉತ್ತಮ ತೀರ್ಪುಗಾರ ಎಂಬ ಹೆಸರುಗಳಿಸಿದ್ದಾರೆ.ತನ್ನ ನಿಷ್ಠೆ, ಪ್ರಾಮಾಣಿಕತೆ ಮತ್ತು ಶಿಸ್ತುಬದ್ಧ ತೀರ್ಪಿನ ಮೂಲಕ ಹಲವಾರು ಪಂದ್ಯಾವಳಿಗಳನ್ನು ಧೀರಜ್ ರೈ ಯಶಸ್ಸುಗೊಳಿಸಿದ್ದಾರೆ.ಫುಟ್ಬಾಲ್ ಅಸೋಸಿಯೇಷನ್ ಸಹಯೋಗದಲ್ಲಿ ನಡೆಯುವ ಫುಟ್ಬಾಲ್ ಪಂದ್ಯಾವಳಿಯ ತೀರ್ಪುಗಾರರಾಗಿ ಮಾತ್ರ ಕಾರ್ಯನಿರ್ವಹಿಸುವ ಮೂಲಕ ,ಫುಟ್ಬಾಲ್ ಸಂಸ್ಥೆಯ ನಿಯಮಗಳನ್ನು ಪಾಲಿಸುತ್ತಾ ಬಂದಿದ್ದಾರೆ.
ಪ್ರತೀ ವರ್ಷ ಫುಟ್ಬಾಲ್ ಆಟದ ನಿಯಮಗಳಲ್ಲಿ ಬದಲಾವಣೆ ಮಾಡುವ ಫಿಫಾ ನಿಯಮಗಳ ಬಗ್ಗೆ ಅರಿವು ಹೊಂದಿರುವ ಧೀರಜ್ ರೈ ಅವರು ಪ್ರಸ್ತುತ ಯುವ ತೀರ್ಪುಗಾರರಿಗೆ ಮಾದರಿಯಾಗಿದ್ದಾರೆ.
ಫುಟ್ಬಾಲ್ ರೆಫ್ರಿಗೂ ಸೈ,ಆಟಕ್ಕೂ ಜೈ;
ಧೀರಜ್ ರೈ ಕೇವಲ ಫುಟ್ಬಾಲ್ ರೆಫ್ರಿಗೆ ಮಾತ್ರ ಸೀಮಿತಗೊಂಡವರಲ್ಲ.ಉತ್ತಮ ಫುಟ್ಬಾಲ್ ಪಟು.ನಾಲ್ಕು ಬಾರಿ ಮಂಗಳೂರು ವಿಶ್ವವಿದ್ಯಾಲಯ ಫುಟ್ಬಾಲ್ ತಂಡವನ್ನು ಧೀರಜ್ ರೈ ಶ್ರೀನಿವಾಸ್ ಪ್ರತಿನಿಧಿಸಿದ್ದಾರೆ.ಒಂದು ಬಾರಿ ಮಂಗಳೂರು ವಿಶ್ವವಿದ್ಯಾಲಯದ ಫುಟ್ಬಾಲ್ ನಾಯಕ ಸ್ಥಾನವನ್ನು ಕೂಡ ವಹಿಸಿಕೊಂಡಿದ್ದರು.
ಮೂಲತಃ ಪಾಲಿಬೆಟ್ಟ ನಿವಾಸಿ ದಿ.ಶ್ರೀನಿವಾಸ್ ಹಾಗೂ ದೇವಕಿ(ದುಗ್ಗು) ಅವರ ಎರಡನೇ ಪುತ್ರನಾಗಿರುವ ಧೀರಜ್ ರೈ ತನ್ನ ಪ್ರಾಥಮಿಕ ಶಿಕ್ಷಣವನ್ನು ಪಾಲಿಬೆಟ್ಟ ಲೂರ್ಡ್ಸ್ ಕಾನ್ವೆಂಟ್ ನಲ್ಲಿ ಪೂರೈಸಿದ ಬಳಿಕ ಪ್ರೌಢಶಾಲಾ ಶಿಕ್ಷಣವನ್ನು ಬೆಂಗಳೂರಿನಲ್ಲಿರುವ ಡಿವೈಇಎಸ್ ಕ್ರೀಡಾ ಹಾಸ್ಟೆಲ್ ನಲ್ಲಿ ಶಿಕ್ಷಣ ಪಡೆದಿದ್ದರು.ಬಳಿಕ ಬೆಂಗಳೂರಿನ ಅಲ್-ಅಮೀನ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣವನ್ನು ಪಡೆದಿದ್ದಾರೆ.
2013ರಿಂದ 2018ರವರೆಗೆ ಬೆಂಗಳೂರಿನ DYES ಮತ್ತು ಸಾಯಿ ಕ್ರೀಡಾ ಹಾಸ್ಟೆಲ್ ನಲ್ಲಿದ್ದ ಧೀರಜ್ ರೈ ಪ್ರೌಢ ಶಾಲೆ ಮತ್ತು ಕಾಲೇಜು ಮಟ್ಟದ ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ.ಪದವಿ ಶಿಕ್ಷಣವನ್ನು ಪುತ್ತೂರಿನ ಸಂತ ಫಿಲೋಮಿನ ಕಾಲೇಜಿನಲ್ಲಿ BSW ಪದವಿ ಪಡೆದಿರುವ ಧೀರಜ್ ರೈ ಅವರು MSW ಶಿಕ್ಷಣವನ್ನು ಮಂಗಳೂರಿನ ಸ್ಕೂಲ್ ಆಫ್ ಸೊಷಲ್ ವರ್ಕ್ ರೋಶಿನಿ ನಿಲಯ ಮಂಗಳೂರಿನಲ್ಲಿ ಪೂರೈಸಿದ್ದರು.ಪ್ರಸ್ತುತ ಚಿಕ್ಕಮಗಳೂರಿನ ಸಂತ ಮೇರಿ ಇಂಟರ್ನ್ಯಾಷನಲ್ ಶಾಲೆ ಫುಟ್ಬಾಲ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
2019ರಿಂದ ನಾನು ಫುಟ್ಬಾಲ್ ತೀರ್ಪುಗಾರಿಕೆಗೆ ಆರಂಭಿಸಿದ್ದೆ.ಡಿವೈಇಎಸ್ಫುಟ್ಬಾಲ್ ಕೋಚ್ ಹಾಗೂ ನನ್ನ ಕೋಚ್ ಕೂಡ ಆಗಿದ್ದ ಕೃಷ್ಣ ಅವರು ನನಗೆ ಫುಟ್ಬಾಲ್ ರೆಫ್ರಿ ಬಗ್ಗೆ ಹೇಳಿಕೊಟ್ಟಿದ್ದರು.ಅಲ್ಲಿಂದೀಚೆಗೆ ನನಗೆ ರೆಫ್ರಿ ಬಗ್ಗೆ ಆಸಕ್ತಿ ಮೂಡಿತ್ತು.ಕಳೆದ ಮೂರು ವರ್ಷಗಳಿಂದ ರಾಷ್ಟ್ರೀಯ ಮಟ್ಟದ ಫುಟ್ಬಾಲ್ ತೀರ್ಪುಗಾರ ಪರೀಕ್ಷೆಯಲ್ಲಿ ಭಾಗವಹಿಸುತ್ತಿದ್ದೆ.ಇದೀಗ ಬೆಂಗಳೂರು ಜಿಲ್ಲೆ ಹೊರತುಪಡಿಸಿ ರಾಜ್ಯದ ಪ್ರಥಮ ಮುಖ್ಯ ಫುಟ್ಬಾಲ್ ರೆಫ್ರಿಯಾಗಿ ಆಯ್ಕೆಯಾಗಿದ್ದೇನೆ.ಕೊಡಗಿನಲ್ಲಿ ಅಶ್ವಥ್ ಸರ್ ಅವರ ಸಹಕಾರದಿಂದ ಫುಟ್ಬಾಲ್ ತೀರ್ಪುಗಾರಿಕೆ ಆರಂಭಿಸಿದ್ದೆ.
ಕೊಡಗು ಫುಟ್ಬಾಲ್ ಅಸೋಸಿಯೇಷನ್ ಸರ್ವ ಪದಾಧಿಕಾರಿಗಳು ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ.ನನ್ನ ಕುಟುಂಬಸ್ಥರು, ರಾಜ್ಯ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರರ ಸಮಿತಿ, ರಾಜ್ಯ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರರಾದ ದರ್ಶನ್ ಸುಕುಮಾರ್,ಇಸ್ಮಾಯಿಲ್ ಕಂಡಕರೆ ಸೇರಿ ಎಲ್ಲರ ಬೆಂಬಲದಿಂದ ನಾನು ರಾಷ್ಟ್ರಮಟ್ಟದ ಫುಟ್ಬಾಲ್ ತೀರ್ಪುಗಾರನಾಗಿ ಆಯ್ಕೆಯಾಗಲು ಸಾಧ್ಯವಾಯಿತು.
ಧೀರಜ್ ರೈ ಶ್ರೀನಿವಾಸ್, ಕೊಡಗು ಜಿಲ್ಲೆಯ ಪ್ರಪ್ರಥಮ ರಾಷ್ಟ್ರ ಮಟ್ಟದ ಫುಟ್ಬಾಲ್ ತೀರ್ಪುಗಾರ.
------------------------------------------------------------------------------------------
ಧೀರಜ್ ರೈ ಅವರು,ತನ್ನ ಕಠಿಣ ಪರಿಶ್ರಮ ಮತ್ತು ಶಿಸ್ತಿನ ಮೂಲಕ ಕೊಡಗು ಜಿಲ್ಲೆಯ ಪ್ರಥಮ ರಾಷ್ಟ್ರೀಯ ಮಟ್ಟದ ಫುಟ್ಬಾಲ್ ತೀರ್ಪುಗಾರರಾಗಿ ಆಯ್ಕೆಯಾಗಿದ್ದಾರೆ.ಇತರೆ ಕ್ರೀಡಾ ತೀರ್ಪುಗಾರರಂತೆ ಫುಟ್ಬಾಲ್ ತೀರ್ಪುಗಾರಿಕೆಯಲ್ಲಿ ರಾಷ್ಟ್ರ ಮಟ್ಟದ ಫುಟ್ಬಾಲ್ ರೆಫ್ರಿಯಾಗಿ ಆಗುವುದು ಕಠಿಣ ಹಾದಿ.ಫಿಫಾ ನಿಯಮಗಳಿಗೆ ಬದ್ಧರಾಗಿ ತೀರ್ಪುಗಾರಿಕೆ ನೀಡಿದರೆ ಮಾತ್ರ ರಾಷ್ಟ್ರ ಮಟ್ಟದ ತೀರ್ಪುಗಾರ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯ.ಧೀರಜ್ ರೈ ಎಲ್ಲರಿಗೂ ಮಾದರಿಯಾಗಿದ್ದಾರೆ.ಮುಂದಿನ ದಿನಗಳಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ, ಧೀರಜ್ ಅವರು,ಫಿಫಾ ರೆಫ್ರಿಯಾಗಿ ಆಯ್ಕೆಯಾಗಲಿ ಎಂದು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಪರವಾಗಿ ಹಾರೈಸುತ್ತಿದ್ದೇನೆ.
ಪಿ.ಎ ನಾಗೇಶ್(ಈಶ್ವರ್),ಕಾರ್ಯದರ್ಶಿ,ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್.