ಎರಡು ವರ್ಷದೊಳಗಿನ ಮಕ್ಕಳಿಗೆ ಕೆಮ್ಮು, ಶೀತದ ಸಿರಪ್ ನೀಡಬೇಡಿ: ರಾಜ್ಯ ಸರ್ಕಾರದ ಮಾರ್ಗಸೂಚಿ | ಸ್ವಯಂ ಔಷಧೋಪಚಾರದಿಂದ ದೂರವಿರುವಂತೆ ಸಲಹೆ
ಬೆಂಗಳೂರು: ರಾಜ್ಯ ಸರ್ಕಾರವು ಶಿಶುಗಳ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಮಹತ್ವದ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಎರಡು ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಅಥವಾ ಶೀತದ ಸಿರಪ್ ನೀಡಬಾರದು ಎಂದು ಸೂಚನೆ ನೀಡಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಮವಾರ ಪ್ರಕಟಿಸಿದ ಮಾರ್ಗಸೂಚಿಯ ಪ್ರಕಾರ, 2ರಿಂದ 5 ವರ್ಷ ವಯಸ್ಸಿನ ಮಕ್ಕಳಿಗೆ ವೈದ್ಯಕೀಯ ಪರೀಕ್ಷೆಯ ನಂತರ ವೈದ್ಯರ ಸಲಹೆಯ ಮೇರೆಗೆ ಮಾತ್ರ ಔಷಧಿ ನೀಡಬೇಕು. ಹಿರಿಯ ಮಕ್ಕಳಲ್ಲಿಯೂ ಸಹ ಕೆಮ್ಮಿನ ಸಿರಪ್‌ಗಳ ಬಳಕೆ ವೈದ್ಯರ ನಿರ್ದೇಶನದಡಿ, ಕನಿಷ್ಠ ಅವಧಿಗೆ ಹಾಗೂ ಅಗತ್ಯವಿರುವ ಪ್ರಮಾಣದಲ್ಲಿ ಮಾತ್ರ ಮಾಡಬೇಕೆಂದು ಸಲಹೆ ನೀಡಲಾಗಿದೆ.
ಬಹು ಔಷಧಿಗಳ ಸಂಯೋಜನೆ ಹೊಂದಿರುವ ಸಿರಪ್‌ಗಳನ್ನು ಬಳಕೆ ಮಾಡುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮಾರ್ಗಸೂಚಿಯಲ್ಲಿ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕೆಮ್ಮು ಮತ್ತು ಶೀತ ಸಾಮಾನ್ಯವಾಗಿ ಸೌಮ್ಯ ಸ್ವರೂಪದ್ದಾಗಿದ್ದು, ಸ್ವಯಂ ಗುಣಮುಖವಾಗುತ್ತದೆ ಎಂದು ಹೇಳಿದೆ. ಪೋಷಕರು ಮಕ್ಕಳಿಗೆ ಸಾಕಷ್ಟು ದ್ರವಪದಾರ್ಥ, ಪೌಷ್ಟಿಕ ಆಹಾರ, ವಿಶ್ರಾಂತಿ ಹಾಗೂ ಸಮರ್ಪಕ ನಿದ್ರೆ ನೀಡುವುದೇ ಉತ್ತಮ ಚಿಕಿತ್ಸೆ ಎಂದು ಸೂಚಿಸಲಾಗಿದೆ.
ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಕೆಮ್ಮಿನ ಸಿರಪ್ ಖರೀದಿಸುವುದು ಅಥವಾ ಹಿಂದಿನ ಸಲ ಬಳಸಿ ಉಳಿದ ಔಷಧಿಗಳನ್ನು ನೀಡುವುದು ಅಪಾಯಕಾರಿಯಾಗಿದೆ ಎಂದು ಇಲಾಖೆ ಎಚ್ಚರಿಸಿದೆ.
ಇತರರಿಂದ ಶಿಫಾರಸು ಮಾಡಲ್ಪಟ್ಟ ಔಷಧಿಗಳನ್ನು ಬಳಸುವುದನ್ನು ನಿಲ್ಲಿಸುವಂತೆ ಸೂಚಿಸಲಾಗಿದೆ. ಯಾವುದೇ ಅಸಹಜ ಪ್ರತಿಕ್ರಿಯೆ, ನಿದ್ರಾವಸ್ಥೆ, ವಾಂತಿ, ಉಸಿರಾಟದ ತೊಂದರೆ ಅಥವಾ ಅಸಾಮಾನ್ಯ ವರ್ತನೆ ಕಂಡುಬಂದರೆ ತಕ್ಷಣ ವೈದ್ಯಕೀಯ ನೆರವಿಗಾಗಿ ಸಂಪರ್ಕಿಸಬೇಕು ಎಂದು ಸಲಹೆ ನೀಡಿದೆ.
ಮಕ್ಕಳಲ್ಲಿ ಉಸಿರಾಟದ ವೇಗ ಹೆಚ್ಚಳ, ಉಲ್ಬಣಗೊಳ್ಳುತ್ತಿರುವ ಕೆಮ್ಮು, ತೀವ್ರ ಜ್ವರ, ಆಹಾರ ತಿರಸ್ಕಾರ ಅಥವಾ ಅಸಹಜ ನಿದ್ರಾವಸ್ಥೆ ಕಂಡುಬಂದಲ್ಲಿ ಹತ್ತಿರದ ಆರೋಗ್ಯ ಕೇಂದ್ರವನ್ನು ತಕ್ಷಣ ಸಂಪರ್ಕಿಸಬೇಕು ಎಂದು ಇಲಾಖೆಯು ಸೂಚಿಸಿದೆ. ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಔಷಧಿಗಳ ತರ್ಕಬದ್ಧ ಬಳಕೆಯನ್ನು ಉತ್ತೇಜಿಸುವುದು, ಹಾಗೂ ಕೆಮ್ಮಿನ ಸಿರಪ್‌ಗಳ ಅನುಚಿತ ಬಳಕೆಯಿಂದ ಉಂಟಾಗುವ ಹಾನಿಯನ್ನು ತಡೆಯುವುದು ಮುಖ್ಯವೆಂದು ಸರ್ಕಾರ ತಿಳಿಸಿದೆ.
ಕೆಮ್ಮು ಸಿರಪ್‌ನಿಂದ ಉಂಟಾಗುವ ಪ್ರತಿಕೂಲ ಘಟನೆ, ಸಾವು, ಹಾಗೆಯೇ ಕೆಮ್ಮಿನ ಅಸಾಮಾನ್ಯ ಪ್ರಮಾಣದ ಹೆಚ್ಚಳ ಕಂಡುಬಂದರೆ, ಅದನ್ನು ತಕ್ಷಣ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯದ ಸಮಗ್ರ ರೋಗ ಕಣ್ಗಾವಲು ವಿಭಾಗದ ಐಎಚ್‌ಐಪಿ ಪೋರ್ಟಲ್‌ನಲ್ಲಿ ವರದಿ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.