ಕೌಟುಂಬಿಕ ಕಲಹ: 11 ತಿಂಗಳ ಮಗುವಿಗೆ ವಿಷ ನೀಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಕೌಟುಂಬಿಕ ಕಲಹ: 11 ತಿಂಗಳ ಮಗುವಿಗೆ ವಿಷ ನೀಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಮಹಿಳೆ
Photo credit: TV09 (Sushmitha with baby)

ಹೈದರಾಬಾದ್, ಜ.10: ಪತಿ ಜೊತೆಗಿನ ದೀರ್ಘಕಾಲದ ಕೌಟುಂಬಿಕ ಕಲಹದಿಂದ ಮನನೊಂದ ಮಹಿಳೆಯೊಬ್ಬರು ತಮ್ಮ 11 ತಿಂಗಳ ಮಗುವಿಗೆ ವಿಷ ನೀಡಿ, ನಂತರ ತಾವೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ನಡೆದಿದೆ.

ಮೀರಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಹಸ್ತಿನಾಪುರಂ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತ ಮಹಿಳೆಯನ್ನು ಸುಷ್ಮಿತಾ (27) ಎಂದು ಗುರುತಿಸಲಾಗಿದ್ದು, ಆಕೆಯ 11 ತಿಂಗಳ ಮಗ ನಂದನ್ ಕೂಡ ಸಾವನ್ನಪ್ಪಿದ್ದಾನೆ. ಸುಷ್ಮಿತಾ ಪತಿ ಯಶವಂತ್ ರೆಡ್ಡಿ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ರಾತ್ರಿ ಕೆಲಸದಿಂದ ಮನೆಗೆ ಮರಳಿದ ಯಶವಂತ್ ರೆಡ್ಡಿ ಅವರಿಗೆ ಬೆಡ್‌ರೂಂ ಒಳಗಿನಿಂದ ಲಾಕ್ ಆಗಿರುವುದು ಗಮನಕ್ಕೆ ಬಂದಿದೆ. ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ ಪತ್ನಿ ಮತ್ತು ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ಮೃತ ಮಹಿಳೆಯ ಕುಟುಂಬಸ್ಥರು ಈ ಘಟನೆಯನ್ನು ಆತ್ಮಹತ್ಯೆ ಎಂದು ಒಪ್ಪಲು ನಿರಾಕರಿಸಿ, ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಮದುವೆಯಾದ ಬಳಿಕ ಸುಷ್ಮಿತಾಗೆ ನಿರಂತರ ಕಿರುಕುಳ ನೀಡಲಾಗುತ್ತಿತ್ತು ಎಂದು ಅವರು ಆರೋಪಿಸಿದ್ದಾರೆ.