ಎದೆಹಾಲು ಕುಡಿಯುವಾಗ ಉಸಿರುಗಟ್ಟಿ ಹೆಣ್ಣು ಮಗು ಸಾವು
ಕೊಯಮತ್ತೂರು, ಜ.9: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ತಾಯಿಯ ಎದೆಹಾಲು ಕುಡಿಯುವ ವೇಳೆ ಕೆಮ್ಮಿನಿಂದ ಉಸಿರುಗಟ್ಟಿ ಹೆಣ್ಣು ಮಗು ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ರಾಮನಾಥಪುರಂ ನಿವಾಸಿ ಮುರಳಿ ಹಾಗೂ ಅವರ ಪತ್ನಿ ವರದಲಕ್ಷ್ಮಿ ದಂಪತಿಗೆ ಡಿಸೆಂಬರ್ 20ರಂದು ಕೊಯಮತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿತ್ತು. ಹೆರಿಗೆ ಬಳಿಕ ತಾಯಿ–ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮನೆಗೆ ಕಳುಹಿಸಲಾಗಿತ್ತು.
ಮಗುವಿಗೆ ಹೊಟ್ಟೆ ನೋವು ಸೇರಿದಂತೆ ಕೆಲ ಆರೋಗ್ಯ ಸಮಸ್ಯೆಗಳಿದ್ದ ಹಿನ್ನೆಲೆಯಲ್ಲಿ ಪೋಷಕರು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿಸಿದ್ದರು. ಬಳಿಕ ಮನೆಗೆ ಮರಳಿದಾಗ ಮಗು ಜೋರಾಗಿ ಅಳುತ್ತಿದ್ದ ಕಾರಣ ತಾಯಿ ವರದಲಕ್ಷ್ಮಿ ಎದೆಹಾಲು ಕುಡಿಸಿದ್ದಾರೆ. ಈ ವೇಳೆ ಮಗು ಕೆಮ್ಮುತ್ತಾ ಇದ್ದಕ್ಕಿದ್ದಂತೆ ಚಲನರಹಿತವಾಗಿರುವುದು ಗಮನಕ್ಕೆ ಬಂದಿದೆ.
ತಕ್ಷಣ ಮಗುವನ್ನು ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಪರಿಶೀಲನೆ ಬಳಿಕ ಮಗು ಮೃತಪಟ್ಟಿದೆ ಎಂದು ಘೋಷಿಸಿದ್ದಾರೆ. ಎದೆಹಾಲು ಕುಡಿಯುವ ವೇಳೆ ಕೆಮ್ಮಿನಿಂದ ಉಸಿರುಗಟ್ಟಿದ ಕಾರಣ ಸಾವು ಸಂಭವಿಸಿದೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ.
ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ಕುಟುಂಬದಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ತೀವ್ರ ಶೋಕವನ್ನುಂಟುಮಾಡಿದೆ.