ರಿಲೀಸ್‌ಗೆ ಸಿದ್ದವಾಗಿದ್ದ ಸಿನಿಮಾದ ಹಾರ್ಡ್ ಡಿಸ್ಕ್ ಕಳವು

ರಿಲೀಸ್‌ಗೆ ಸಿದ್ದವಾಗಿದ್ದ ಸಿನಿಮಾದ ಹಾರ್ಡ್ ಡಿಸ್ಕ್ ಕಳವು
Photo credit: Etv bharath

ಬೆಂಗಳೂರು: ರಿಲೀಸ್‌ಗೆ ಸಜ್ಜಾಗಿದ್ದ ಸಿನಿಮಾದ ದೃಶ್ಯಗಳನ್ನು ಹೊಂದಿದ್ದ ಹಾರ್ಡ್ ಡಿಸ್ಕ್‌ನ್ನು ಕಾರಿನ ಗಾಜು ಒಡೆದು ಕಳ್ಳತನ ಮಾಡಿದ ಪ್ರಕರಣದಲ್ಲಿ ತಮಿಳುನಾಡಿನ ಕುಖ್ಯಾತ ‘ರಾಮ್‌ಜೀ ಗ್ಯಾಂಗ್’ ಸದಸ್ಯನೊಬ್ಬನನ್ನು ವಿಜಯನಗರ ಪೊಲೀಸರು ಬಂಧಿಸಿದರು. ಜಯಶೀಲನ್ ಬಂಧಿತ ಆರೋಪಿ ಎಂಬುದು ಪೊಲೀಸರು ತಿಳಿಸಿದ್ದಾರೆ. ಕೃತ್ಯಕ್ಕೆ ನೆರವಾದ ಆತನ ಪುತ್ರ ಪರಾರಿಯಾಗಿದ್ದು, ಶೋಧ ಮುಂದುವರಿದಿದೆ.

ಅಕ್ಟೋಬರ್ 4ರಂದು ವಿಜಯನಗರದ ಕಾಫಿ ಡೇ ಬಳಿ ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಹಾರ್ಡ್ ಡಿಸ್ಕ್, ಟ್ಯಾಬ್ ಮತ್ತು ಬ್ಯಾಗ್‌ನ್ನು ಕಳವು ಮಾಡಿದ ಘಟನೆ ನಡೆದಿದೆ. ರವಿ ಗೌಡ ಎಂಬುವವರು ‘ಐ ಆ್ಯಮ್ ಗಾಡ್’ ಎಂಬ ಚಿತ್ರದ ನಿರ್ಮಾಪಕ ಮತ್ತು ನಟ. ಅವರು ಕಾರನ್ನು ನಿಲ್ಲಿಸಿ ಚಹಾ ಕುಡಿಯಲು ತೆರಳಿದ್ದ ವೇಳೆ ಕೃತ್ಯ ನಡೆದಿದೆ.

ಘಟನೆಯ ನಂತರ ವಿಜಯನಗರ ಠಾಣೆಗೆ ದೂರು ಸಲ್ಲಿಸಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ವಿಶ್ಲೇಷಿಸಿ ಆರೋಪಿಗಳ ಗುರುತು ಪತ್ತೆಹಚ್ಚಿದರು. ನಂತರ ತಂಡವೊಂದು ತಮಿಳುನಾಡಿಗೆ ತೆರಳಿ ಜಯಶೀಲನ್‌ನ್ನು ಬಂಧಿಸಿ, ಕಳವಾಗಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದೆ. 

ಈ ಕುರಿತು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್ ಮಾತನಾಡಿ, “ಇನ್ನೊಬ್ಬ ಆರೋಪಿ ಬಂಧನ ಬಾಕಿಯಿದೆ. ಇವರ ವಿರುದ್ಧ ಇನ್ನಷ್ಟು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ವಿಶೇಷವಾಗಿ ಜಯನಗರ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ವ್ಯಾಪ್ತಿಯಲ್ಲಿಯೂ ಇದೇ ಗ್ಯಾಂಗ್ ಕಳವು ಮಾಡಿರುವುದು ದೃಢಪಟ್ಟಿದೆ,” ಎಂದು ತಿಳಿಸಿದರು.