ಹಾವೇರಿ | ಮದುವೆಯಾಗುವುದಾಗಿ ಭರವಸೆ ನೀಡಿ ವಂಚನೆ: ಯುವತಿ ಆತ್ಮಹತ್ಯೆ | ಆರೋಪಿ ಯುವಕನ ಮನೆ ಎದುರು ಮೃತದೇಹವಿಟ್ಟು ಪ್ರತಿಭಟನೆ; ದೂರು ಸ್ವೀಕರಿಸದೇ ರಾಜಿ ಮಾಡಿದ್ದ ಪೊಲೀಸರು!
ಹಾವೇರಿ: ಮದುವೆಯಾಗುವುದಾಗಿ ಭರವಸೆ ನೀಡಿ ಯುವಕನೊಬ್ಬ ವಂಚಿಸಿದ್ದರಿಂದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಕುದರಿಹಾಳ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಸಿಂಧೂರಿ ಪರಮೇಶಪ್ಪ ಪರಣ್ಣನವರ (26) ಎಂದು ಗುರುತಿಸಲಾಗಿದೆ.
ಮೃತ ಯುವತಿಯ ಬಂಧುಬಳಗ ಹಾಗೂ ಗ್ರಾಮಸ್ಥರು ಆರೋಪಿ ಯುವಕ ಶರತ್ ನೀಲಪ್ಪನವರ ಮನೆ ಎದುರು ಮೃತದೇಹವಿಟ್ಟು ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಸಂಬಂಧಿಕರ ಪ್ರಕಾರ, ಸಿಂಧೂರಿ ಮತ್ತು ಶರತ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಶರತ್ ಮದುವೆಯಾಗುವುದಾಗಿ ಭರವಸೆ ನೀಡಿದ್ದರೂ, ಇತ್ತೀಚೆಗೆ ಅಂತರ ಕಾಯ್ದುಕೊಂಡು ಮದುವೆಗೆ ನಿರಾಕರಿಸಿದ್ದ. ಇದರಿಂದ ಮನನೊಂದ ಯುವತಿ ಮನೆಯವರಿಗೆ ವಿಷಯ ತಿಳಿಸಿದ್ದು, ನಂತರ ಇಬ್ಬರ ಕುಟುಂಬಗಳು ರಾಣೆಬೆನ್ನೂರು ಗ್ರಾಮೀಣ ಠಾಣೆಗೆ ದೂರು ಸಲ್ಲಿಸಲು ತೆರಳಿದ್ದವು ಎನ್ನಲಾಗಿದೆ.
“ಆರೋಪಿ ಶರತ್ ಹಾಗೂ ಆತನ ಕುಟುಂಬ ಮರಳು ವ್ಯಾಪಾರ ಸೇರಿದಂತೆ ವಿವಿಧ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಿಗೆ ಪೊಲೀಸರ ಪರಿಚಯವಿದ್ದ ಕಾರಣ, ದೂರು ಸ್ವೀಕರಿಸಲು ಪೊಲೀಸರು ನಿರಾಕರಿಸಿ, ಠಾಣೆಯಲ್ಲಿಯೇ ರಾಜಿ ಸಂಧಾನ ಮಾಡಲು ಸೂಚಿಸಿದ್ದರು. ನ್ಯಾಯ ಸಿಗಲಿಲ್ಲವೆಂದು ಬೇಸರದಿಂದ ಸಿಂಧೂರಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಸಂಬಂಧಿಕರು ದೂರಿದರು.
“ಪೊಲೀಸರು ಆರೋಪಿಗಳಿಂದ ಹಣ ಪಡೆದು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ ಎಂಬ ಅನುಮಾನವಿದೆ. ಮಹಿಳಾ ಎಸ್‌ಪಿ ಇರುವ ಜಿಲ್ಲೆಯಲ್ಲಿಯೇ ಯುವತಿಗೆ ಅನ್ಯಾಯವಾಗಿದೆ. ಕರ್ತವ್ಯಲೋಪ ತೋರಿದ ಪೊಲೀಸರನ್ನು ಅಮಾನತು ಮಾಡಿ, ಶರತ್ ಮತ್ತು ಆತನ ಕುಟುಂಬದವರನ್ನು ಬಂಧಿಸಬೇಕು” ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಹಾವೇರಿ ಜಿಲ್ಲಾ ಹೆಚ್ಚುವರಿ ಎಸ್‌ಪಿ ಎಲ್.ವೈ. ಶಿರಕೋಳ ಹೇಳಿದರು, “ಯುವತಿ ಹಾಗೂ ಯುವಕನ ಕುಟುಂಬಗಳು ಠಾಣೆಗೆ ಬಂದಿದ್ದರು. ತಮ್ಮಲ್ಲಿಯೇ ರಾಜಿ ಮಾಡಿಕೊಂಡು ವಾಪಸು ಹೋದ ಮಾಹಿತಿ ಇದೆ. ಈಗ ಆತ್ಮಹತ್ಯೆ ಪ್ರಕರಣ ವರದಿಯಾಗಿದೆ. ಸತ್ಯಾಂಶ ಪತ್ತೆ ಮಾಡಲು ಡಿವೈಎಸ್ಪಿ ಅವರನ್ನು ಸ್ಥಳಕ್ಕೆ ಕಳುಹಿಸಲಾಗಿದೆ” ಎಂದರು.
