ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಹೃದಯಾಘಾತಕ್ಕೆ ಬಲಿಯಾದವರು ಎಷ್ಟು!!

ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಹೃದಯಾಘಾತಕ್ಕೆ ಬಲಿಯಾದವರು ಎಷ್ಟು!!

(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ: ಕೊಡಗು ಜಿಲ್ಲೆಯ ನೆರೆಯ ಜಿಲ್ಲೆ ಹಾಸನದಲ್ಲಿ ಸರಣಿ ಹೃದಯಾಘಾತದಿಂದ ಯುವಕ-ಯುವತಿಯರು ಸಾವನ್ನಪ್ಪುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿದ್ದಂತೆ ರಾಜ್ಯದಲ್ಲೆಡೆ ಹೃದಯಾಘಾತದ ಬಗ್ಗೆ ಮತ್ತಷ್ಟು ಆತಂಕವುಂಟಾಗಿದೆ.ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಒಟ್ಟು 59 ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.62 ಮಂದಿಯ ವಯೋಮಾನದ ಮಾಹಿತಿ ಜಿಲ್ಲೆಯ ಆರೋಗ್ಯ ‌ಇಲಾಖೆಯ ಬಳಿ‌ ಇಲ್ಲ.

ಜಿಲ್ಲೆಯಲ್ಲಿ 2023-24 ನೇ ಸಾಲಿನಲ್ಲಿ 27 ಮಂದಿ, 2024-25ನೇ ಸಾಲಿನಲ್ಲಿ 32 ಹಾಗೂ ಪ್ರಸಕ್ತ ವರ್ಷ ಹೃದಯಾಘಾತದಿಂದ 03 ಮೂವರು ಸಾವನ್ನಪ್ಪಿದ್ದಾರೆ.ಕೊಡಗು ಜಿಲ್ಲೆಯಲ್ಲಿ ಕೂಡ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಕಡಿಮೆಯೇನೂ ಇಲ್ಲ.ಹಾಸನದಲ್ಲಿ ಹೃದಯಾಘಾತದ ಪ್ರಕರಣಗಳ ಅಸಲಿ ಕಾರಣ ತಿಳಿಯಲು ರಾಜ್ಯ ಸರ್ಕಾರ ಮುಂದಾಗಿದ್ದು,ತಜ್ಞರ ಸಮಿತಿ ರಚಿಸಿದೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರ ನೇತೃತ್ವದಲ್ಲಿ ಸಮಿತಿ ರಚನೆಯಾಗಿದ್ದು,ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರು ಮತ್ತು ಜಯದೇವ ಹೃದ್ರೋಗ ಸಂಸ್ಥೆಯ ತಜ್ಞರು ಸೇರಿದಂತೆ ಒಟ್ಟು ಹತ್ತು ಜನರ ತಂಡವನ್ನು ರಚನೆಗೆ ರಾಜ್ಯ ಸರ್ಕಾರದ ಆದೇಶಿಸಲಾಗಿದೆ.

ದಾರಿ ಮಧ್ಯದಲ್ಲೇ ಉಸಿರು ಚೆಲ್ಲುತ್ತಿರುವ ಜೀವಗಳು!

ಕೊಡಗು ಜಿಲ್ಲೆಯಲ್ಲಿ ಹೃದಯ ಸಂಬಂಧಿತ ರೋಗಗಳಿಗೆ ಚಿಕಿತ್ಸೆ ನೀಡಲು ಹೃದ್ರೋಗ ತಜ್ಞರು ಸಂಖ್ಯೆ ಕಡಿಮೆ ಇದೆ.ಕೊಡಗು ಜಿಲ್ಲಾ ವೈದ್ಯಕೀಯ ಕಾಲೇಜಿನಲ್ಲಿ ಹೃದ್ರೋಗ ಸಂಬಂಧಿಸಿದ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಆಧುನಿಕ ತಂತ್ರಜ್ಞಾನದ ವ್ಯವಸ್ಥೆಗಳಿಲ್ಲ.ಕಡಗು ಜಿಲ್ಲೆಯ ಜನತೆ ಹೃದಯ ಸಂಬಂಧಿಸಿದ‌ ಕಾಯಿಲೆಗೆ ಪಕ್ಕದ ಮೈಸೂರು ಮತ್ತು ಮಂಗಳೂರು (ದಕ್ಷಿಣ ಕನ್ನಡ) ಜಿಲ್ಲೆಯ ಆಸ್ಪತ್ರೆಯನ್ನೇ ಅವಲಂಬಿಸಬೇಕಾಗಿದೆ.ಹೃದಯಾಘಾತ ಸಂಬಂಧವಿಸಿದರೆ ಜಿಲ್ಲೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೆ, ಪಕ್ಕದ ಮೈಸೂರು ಮತ್ತು ಮಂಗಳೂರು ಆಸ್ಪತ್ರೆಗೆ ರವಾನಿಸುವ ದಾರಿ ಮಧ್ಯದಲ್ಲೇ‌ ಅನೇಕ ಮಂದಿ ಸಾವನ್ನಪ್ಪಿರುವ ಹಲವಾರು ನಿದರ್ಶನಗಳು ಜಿಲ್ಲೆಯಲ್ಲಿ ಇದೆ.ಹೃದಯಾಘಾತವುಂಟಾದರೆ ಸಕಾಲದಲ್ಲಿ ಚಿಕಿತ್ಸೆ ಸಿಗಬೇಕು ಇಲ್ಲದಿದ್ದರೆ,ಜೀವಕ್ಕೆ ಅಪಾಯ ಗ್ಯಾರಂಟಿ.

ಆದರೆ ಕೊಡಗು ಜಿಲ್ಲೆಯಲ್ಲಿ ಹೃದಯಾಘಾತ ಸಂಭವಿಸಿದರೆ ಮೈಸೂರು ಮತ್ತು ಮಂಗಳೂರು ಆಸ್ಪತ್ರೆಯೇ ಆಸರೆ.ಸಕಾಲದಲ್ಲಿ ಚಿಕಿತ್ಸೆ ಸಿಗದೇ,ರೋಗಿಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆಯಲ್ಲಿ ದಾರಿ‌ ಮಧ್ಯದಲ್ಲೇ ಹಲವು ಮಂದಿ ಉಸಿರು ಚೆಲ್ಲಿದ್ದಾರೆ.ಕೊಡಗು ಜಿಲ್ಲೆಯಲ್ಲಿ ಕಳೆದ ಹಲವರು ವರ್ಷಗಳಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಬೇಕೆಂಬ ಕೂಗು ಇದೆ‌.ಆದರೆ ಕನಸು ಕೇವಲ ಕನಸಾಗಿಯೇ ಉಳಿದಿದೆ.ಹೃದಯಾಘಾತ ಉಂಟಾದರೆ ಜಿಲ್ಲಾಸ್ಪತ್ರೆಯಲ್ಲೇ ಸಕಾಲದಲ್ಲಿ ಚಿಕಿತ್ಸೆ ಸಿಗುವ ಆಧುನಿಕ ತಂತ್ರಜ್ಞಾನದ ವ್ಯವಸ್ಥೆ ಪ್ರಸ್ತುತ ದಿನಗಳಲ್ಲಿ ಅತ್ಯಗತ್ಯವಾಗಿದೆ.

ಕಾರ್ಯರೂಪಕ್ಕೆ ಬಾರದ ಅತ್ಯಾಧುನಿಕ ಹೃದ್ರೋಗ ಘಟಕ:

2024ರ ರಾಜ್ಯ ಬಜೆಟ್‌ ನಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಅವರ ಮುತುವರ್ಜಿಯಿಂದ ಕೊಡಗು ಜಿಲ್ಲಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಹೃದ್ರೋಗ ಘಟಕ ಆರಂಭಿಸುವುದಾಗಿ ಘೋಷಣೆ ಮಾಡಲಾಗಿತ್ತು.ಆದರೆ ಈ ಯೋಜನೆ ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ.ಖಾಸಗಿ ಸಹ ಭಾಗಿತ್ವದಲ್ಲಿ (ಪಿಪಿಪಿ ಮಾದರಿ)ಹೃದ್ರೋಗ ಘಟಕ ಆರಂಭಿಸುವುದಾಗಿ 2024ರ ಬಜೆಟ್ ನಲ್ಲಿ ಘೋಷಿಸಲಾಗಿತ್ತು.ಆದರೆ ಜಿಲ್ಲಾಸ್ಪತ್ರೆಯಲ್ಲಿ ಇದುವರೆಗೂ ಕೂಡಾ ಅತ್ಯಾಧುನಿಕ ಹೃದ್ರೋಗ ಘಟಕ ಆರಂಭಗೊಂಡಿಲ್ಲ.ಹೃದ್ರೋಗ ಘಟಕದ ಆರಂಭಗೊಂಡರೆ ಜಿಲ್ಲೆಯ ಜನತೆಗೆ ಸ್ಟಂಟ್ ಅಳವಡಿಕೆವರೆಗಿನ ಹೃದಯ ಸಂಬಂಧಿತ ಚಿಕಿತ್ಸೆ ಮಡಿಕೇರಿಯಲ್ಲಿ ಲಭ್ಯವಿರುತ್ತಿತ್ತು.ಇಂದಿಗೂ ಕೂಡ ಹೃದಯಾಘಾತ ಸಂಭವಿಸಿದರೆ ಜಿಲ್ಲೆಯ ಜನತೆ ಮೈಸೂರು ,ಮಂಗಳೂರು ಆಸ್ಪತ್ರೆಗಳ ಮಾರ್ಗಮಧ್ಯದಲ್ಲಿ ಉಸಿರು ಚೆಲ್ಲುತ್ತಿದ್ದಾರೆ.

ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಸ್ಟೆಮಿ ಯೋಜನೆ!

ರಾಜ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಘಟನೆಗಳು ವರದಿಯಾಗುತ್ತಿದ್ದಂತೆ ಸದ್ಯ 86 ತಾಲ್ಲೂಕು ಆಸ್ಪತ್ರೆಗಳಲ್ಲಿರುವ ಸ್ಟೆಮಿ ಯೋಜನೆಯನ್ನು ಇನ್ನೂ ಮುಂದೆ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಯೋಜನೆಯನ್ನು ದೊರೆಯುವಂತೆ ಆದೇಶಿಸಲಾಗಿದೆ.

ಸ್ಟೆಮಿ ಯೋಜನೆಯು ಹೃದಯಾಘಾತದಿಂದ ಆಗುವ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ರೂಪಿಸಲಾದ ಚಿಕಿತ್ಸಾ ವಿಧಾನ. ಹೃದಯಾಘಾತದ ಲಕ್ಷಣಗಳಾದ ಎದೆನೋವು,ಉಸಿರಾಟ ತೊಂದರೆ ಇರುವ ರೋಗಿಗಳು ತಾಲ್ಲೂಕು ಆಸ್ಪತ್ರೆಗೆ ತೆರಳಿದಾಗ ತಕ್ಷಣವೇ ಇಸಿಜಿ ಪರೀಕ್ಷೆ ನಡೆಸಿ,ಆ ಮಾಹಿತಿಯನ್ನು ಜಯದೇವ ಆಸ್ಪತ್ರೆಯ ಹೃದ್ರೋಗ ತಜ್ಞರಿಗೆ ರವಾನಿಸಲಾಗುತ್ತದೆ.ರಾಜ್ಯದಲ್ಲಿ ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತಕ್ಕೆ ಕೋವಿಡ್ ಲಸಿಕೆಯ‌ ಪರಿಣಾಮ ಎಂದು ಹೇಳಲಾಗುತ್ತಿದೆ.ಮತ್ತೊಂದೆಡೆ ಜೀವನ ಶೈಲಿಯಲ್ಲಿನ‌ ಬದಲಾವಣೆಗಳು,ಆಹಾರ ಕ್ರಮದಲ್ಲಿ ಬದಲಾವಣೆಗಳು ಎಂಬಿತ್ಯಾದಿ ನಾನಾ ವಿಶ್ಲೇಷಣೆಗಳನ್ನು ಮಾಡಲಾಗುತ್ತಿದೆ.ಇತ್ತೀಚಿನ ದಿನಗಳಲ್ಲಿ ಯುವ ಜನತೆಯಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಸಾವಿನ ಬಗ್ಗೆ ಎಲ್ಲರಲ್ಲೂ ಆತಂಕವುಂಟು ಮಾಡಿದೆ.

ಕೊಡಗು ಜಿಲ್ಲಾ ವೈದ್ಯಕೀಯ ಕಾಲೇಜಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಅತ್ಯಾಧುನಿಕ ಹೃದ್ರೋಗ ಘಟಕ ಸ್ಥಾಪನೆಗೆ ಸರ್ಕಾರ ಹತ್ತು ಕೋಟಿ ರೂ ಮೀಸಲಿಟ್ಟಿದೆ.ಸದ್ಯದಲ್ಲೇ ಹೃದ್ರೋಗ ಘಟಕ ಸ್ಥಾಪನೆಯಾಗಲಿದೆ.ಹೃದಯ ಸಂಭಂದಿಸಿದ ರೋಗಗಳಿಗೆ ವೈದ್ಯಕೀಯ ಕಾಲೇಜಿನಲ್ಲಿ ಮುಂದಿನ ದಿನಗಳಲ್ಲಿ ಚಿಕಿತ್ಸೆ ಸಿಗಲಿದೆ.

ಡಾ.ಲೋಕೇಶ್ ಕುಮಾರ್, ಡೀನ್ ಮತ್ತು ನಿರ್ದೇಶಕರು, ಕೋಯಿಮ್ಸ್