ಹುಬ್ಬಳ್ಳಿ | ಟ್ರಯಾಂಗಲ್ ಲವ್ ಸ್ಟೋರಿ ರಕ್ತಪಾತಕ್ಕೆ ಅಂತ್ಯ ; ಬರ್ತ್‌ಡೇ ಪಾರ್ಟಿಯಲ್ಲಿ ಇಬ್ಬರಿಗೆ ಚಾಕು ಇರಿತ; ಏಳು ಮಂದಿ ಬಂಧನ

ಹುಬ್ಬಳ್ಳಿ | ಟ್ರಯಾಂಗಲ್ ಲವ್ ಸ್ಟೋರಿ ರಕ್ತಪಾತಕ್ಕೆ ಅಂತ್ಯ ;   ಬರ್ತ್‌ಡೇ ಪಾರ್ಟಿಯಲ್ಲಿ ಇಬ್ಬರಿಗೆ ಚಾಕು ಇರಿತ; ಏಳು ಮಂದಿ ಬಂಧನ

ಹುಬ್ಬಳ್ಳಿ: ಕಾಲೇಜು ವಿದ್ಯಾರ್ಥಿಗಳ ನಡುವಿನ ಪ್ರೀತಿ-ಪ್ರೇಮದ ವಿವಾದ ಹುಬ್ಬಳ್ಳಿಯಲ್ಲಿ ರಕ್ತಪಾತಕ್ಕೆ ಕಾರಣವಾದ ಘಟನೆ ಕಳೆದ ರಾತ್ರಿ ನಡೆದಿದೆ. ಬರ್ತ್‌ಡೇ ಪಾರ್ಟಿ ನೆಪದಲ್ಲಿ ಇಬ್ಬರು ಯುವಕರು ಚಾಕು ಇರಿತಕ್ಕೊಳಗಾಗಿ ಗಾಯಗೊಂಡಿದ್ದು, ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.

ನಗರದ ಗ್ಲೋಬಲ್ ಕಾಲೇಜು ಮುಂಭಾಗದಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡವರು ದೇಶಪಾಂಡೆ ನಗರದ ನಿವಾಸಿಗಳಾದ ಅಭಿಷೇಕ್ ಬಂಡಿವಂಡರ್ ಮತ್ತು ಮಾರುತಿ ಬಂಡಿವಂಡರ್ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಆಟೋ ಚಾಲಕರಾಗಿದ್ದು, ಪ್ರಸ್ತುತ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಣಿಕಂಠ ಮತ್ತು ಪವನ್ ಇಬ್ಬರೂ ಗ್ಲೋಬಲ್ ಕಾಲೇಜಿನ ಬಿಬಿಎ ಮೊದಲ ವರ್ಷದ ವಿದ್ಯಾರ್ಥಿಗಳು. ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದ ಇಬ್ಬರ ನಡುವೆ ಕಳೆದ ತಿಂಗಳುಗಳಲ್ಲೇ ಜಗಳ ಉಂಟಾಗಿತ್ತು ಎಂದು ತಿಳಿದುಬಂದಿದೆ.

ನಿನ್ನೆ ರಾತ್ರಿ ಮಣಿಕಂಠ ತನ್ನ ಜನ್ಮದಿನ ಪಾರ್ಟಿಗೆ ಪವನ್‍ನನ್ನು ಆಹ್ವಾನಿಸಿದ್ದ. ಪವನ್ ಒಬ್ಬನೇ ಹೋಗದೇ ತನ್ನ ಸ್ನೇಹಿತರಾದ ಅಭಿಷೇಕ್ ಮತ್ತು ಮಾರುತಿಯನ್ನು ಜೊತೆಗೆ ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ. ಆದರೆ ಪಾರ್ಟಿಯಲ್ಲಿ ಮಾತುಕತೆಯ ಬದಲು ವಾಗ್ವಾದ ತೀವ್ರಗೊಂಡು, ಮಣಿಕಂಠ ಮತ್ತು ಆತನ ಸ್ನೇಹಿತರು ಪವನ್ ಹಾಗೂ ಜೊತೆಗಿದ್ದವರ ಮೇಲೆ ಹಲ್ಲೆ ನಡೆಸಿದರು. ಈ ವೇಳೆ ಚಾಕು ಇರಿತಕ್ಕೊಳಗಾಗಿ ಅಭಿಷೇಕ್ ಮತ್ತು ಮಾರುತಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸ್ಥಳೀಯರು ಮಧ್ಯಪ್ರವೇಶಿಸಿದ ಬಳಿಕ ಆರೋಪಿಗಳು ಅಲ್ಲಿಂದ ಪರಾರಿಯಾದರು. ಮಾಹಿತಿ ತಿಳಿದ ತಕ್ಷಣ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಕಿಮ್ಸ್ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಸ್ಥಿತಿ ವಿಚಾರಿಸಿದರು.

ಘಟನೆಯ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪ್ರಮುಖ ಆರೋಪಿ ಮಣಿಕಂಠ ಸೇರಿ ಏಳು ಮಂದಿಯನ್ನು ಬಂಧಿಸಲಾಗಿದೆ.