ಮಾಸ್ಕ್‌ಮ್ಯಾನ್ ಚಿನ್ನಯ್ಯ–ಸ್ವಾಮೀಜಿ ಭೇಟಿಯ ರಹಸ್ಯ ಭೇಟಿ ನಡೆದಿತ್ತು: ಮಹೇಶ್ ಶೆಟ್ಟಿ ತಿಮರೋಡಿ ಗಂಭೀರ ಆರೋಪ

ಮಾಸ್ಕ್‌ಮ್ಯಾನ್ ಚಿನ್ನಯ್ಯ–ಸ್ವಾಮೀಜಿ ಭೇಟಿಯ ರಹಸ್ಯ ಭೇಟಿ ನಡೆದಿತ್ತು: ಮಹೇಶ್ ಶೆಟ್ಟಿ ತಿಮರೋಡಿ ಗಂಭೀರ ಆರೋಪ

ಮಂಗಳೂರು, ಡಿ. 8: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಕ್‌ಮ್ಯಾನ್ ಚಿನ್ನಯ್ಯ ಹಾಗೂ ಪ್ರಭಾವಿ ಸ್ವಾಮೀಜಿಯೊಬ್ಬರ ನಡುವೆ ನಡೆದಿದ್ದ ಗುಪ್ತ ಮಾತುಕತೆಯ ವಿವರಗಳನ್ನು ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ ಬಹಿರಂಗಪಡಿಸಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. 

ಪುತ್ತೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ನಾನು, ಚಿನ್ನಯ್ಯ ಹಾಗೂ ಸೌಜನ್ಯದ ಮನೆಯವರು ಮಠಕ್ಕೆ ಹೋದದ್ದು ನಿಜ. ಅಲ್ಲಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಚಿನ್ನಯ್ಯ ಸಂಪೂರ್ಣ ವಿಷಯವನ್ನೂ ಸ್ವಾಮೀಜಿಗಳ ಮುಂದೆ ಪ್ರಾಮಾಣಿಕವಾಗಿ ವಿವರಿಸಿದ್ದ,” ಎಂದು ಹೇಳಿದರು.

“ನಾನು ಬಿಡುಗಡೆ ಮಾಡಿದ ಒಂದೂವರೆ ಗಂಟೆಯ ವಿಡಿಯೋದಲ್ಲಿರುವುದಕ್ಕಿಂತ ಹೆಚ್ಚು ವಿಷಯ ಚಿನ್ನಯ್ಯ ಮಠದಲ್ಲೇ ಹೇಳಿದ್ದ. ಯಾರು ಅತ್ಯಾಚಾರ ಎಸಗಿದ್ದಾರೆ, ಯಾರು ಮಾಡಿಸಿದ್ದಾರೆ—ಎಲ್ಲವನ್ನೂ ಸ್ಪಷ್ಟವಾಗಿ ವಿವರಿಸಿದ್ದಾನೆ,” ಎಂದು ತಿಮರೋಡಿ ಮಾಹಿತಿ ನೀಡಿದರು.

ಸ್ವಾಮೀಜಿಗಳ ಮೌನವನ್ನು ಪ್ರಶ್ನಿಸಿದ ಅವರು, “ಈ ವಿಚಾರವನ್ನು ಸ್ವಾಮೀಜಿಗಳು ಸಮಾಜದ ಮುಂದೆ ಯಾಕೆ ಹೇಳುತ್ತಿಲ್ಲ? ಮುಖ್ಯಮಂತ್ರಿಗಳಿಗೆ ವಿಷಯ ತಿಳಿಸಿ ನ್ಯಾಯ ಕೊಡಿಸುವೆನೆಂದು ಸ್ವತಃ ಸ್ವಾಮೀಜಿಗಳು ಭರವಸೆ ನೀಡಿದ್ದರು. ಮಹಾಕಾಳನ ಮೇಲೆ ಪ್ರಮಾಣವನ್ನೂ ಮಾಡಿದ್ದರು. ಈಗ ನ್ಯಾಯ ಒದಗಿಸುವ ಜವಾಬ್ದಾರಿ ಅವರದ್ದೇ. ಮಠದಲ್ಲಿ ಕುಳಿತು ರಾಜಕೀಯ ಮಾಡುವುದು ಸೂಕ್ತವಲ್ಲ,” ಎಂದು ಟೀಕಿಸಿದರು.

ತಮ್ಮ ನಿಲುವಿನ ಬಗ್ಗೆ ಸ್ಪಷ್ಟಪಡಿಸುತ್ತಾ, “ನಾವು ಸನಾತನ ಧರ್ಮದ ಪ್ರತಿಪಾದಕರು; ಹಿಂದೂ ಧರ್ಮದ ವಿರೋಧಿಗಳಲ್ಲ. ಇದನ್ನು ಹಿಂದೆಯೂ ಹೇಳಿದ್ದೇನೆ, ಇಂದೂ ಹೇಳುತ್ತೇನೆ,” ಎಂದು ತಿಮರೋಡಿ ಹೇಳಿದರು.

ಎಸ್‌ಐಟಿ ತನಿಖೆಯ ಮೇಲೂ ತಿಮರೋಡಿ ಅವರು ಅನುಮಾನ ವ್ಯಕ್ತಪಡಿಸಿದರು. “ತನಿಖೆ ನೈಜವಾಗಿ ಆರಂಭವಾಗಿಲ್ಲ. ಆರೋಪಿಗಳ ವಿಚಾರಣೆ ಇನ್ನಷ್ಟೇ ನಡೆಯಬೇಕು. ಬರೀ ನಾಟಕದಂತಾಗಿದೆ. ಎಸ್‌ಐಟಿ ಒಳಗೇ ಷಡ್ಯಂತ್ರ ನಡೆಯುತ್ತಿದೆ,” ಎಂದು ಗಂಭೀರ ಆರೋಪ ಮಾಡಿದರು.

“ನಮಗೆ ಈಗ ದೇಶದ ಕಾನೂನಿನ ಮೇಲಷ್ಟೇ ನಂಬಿಕೆ ಉಳಿದಿದೆ. ಕಾರ್ಯಾಂಗ, ಮಾಧ್ಯಮ ಯಾರ ಮೇಲೂ ನಂಬಿಕೆ ಇಲ್ಲ. ಕಾನೂನು ಹೋರಾಟ ಮುಂದುವರಿಸುತ್ತೇವೆ. ಮುಂದಿನ ದಿನಗಳಲ್ಲಿ ಎಲ್ಲಾ ಸತ್ಯವೂ ಹೊರಬರುತ್ತದೆ,” ಎಂದು ತಿಮರೋಡಿ ಸ್ಪಷ್ಟಪಡಿಸಿದರು.