ಮೈಸೂರು | ಬೈಕ್‌ಗೆ ಹಿಂಬದಿಯಿಂದ ಬಸ್ ಡಿಕ್ಕಿ; ದಂಪತಿ, ಮಗ ಮೃತ್ಯು
ಮೈಸೂರು, ನ. 3: ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಪತಿ, ಪತ್ನಿ ಹಾಗೂ ಮಗ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಭಾನುವಾರ ರಾತ್ರಿ ಮೈಸೂರು ನಗರದ ರೈಲ್ವೆ ಮೇಲ್ಸೇತುವೆ ಸಮೀಪದ ಚಾಮುಂಡಿ ಟೌನ್‌ಶಿಪ್ ಬಳಿ ನಡೆದಿದೆ.
ಮೃತರನ್ನು ಚಾಮರಾಜನಗರ ಜಿಲ್ಲೆಯ ಉದ್ದನೂರು ಗ್ರಾಮದ ನಿವಾಸಿಗಳಾದ ಶಿವಮೂರ್ತಿ (52), ಅವರ ಪತ್ನಿ ಚೆನ್ನಾಜಮ್ಮ (46) ಹಾಗೂ ಪುತ್ರ ಸಿದ್ದಾರ್ಥ (15) ಎಂದು ಗುರುತಿಸಲಾಗಿದೆ.
ಮೈಸೂರಿಗೆ ಕೆಲಸದ ನಿಮಿತ್ತ ತೆರಳಿದ್ದ ಕುಟುಂಬವು ವಾಪಸ್ ಊರಿಗೆ ಮರಳುತ್ತಿದ್ದ ವೇಳೆ ನಂಜನಗೂಡು ಪ್ರವೇಶ ದ್ವಾರದ ಬಳಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಚಾಮುಂಡಿ ಟೌನ್‌ಶಿಪ್ ಮುಂಭಾಗದಲ್ಲಿ ದ್ವಿಚಕ್ರ ವಾಹನ ಚಲಿಸುತ್ತಿದ್ದ ವೇಳೆ, ಗುಂಡ್ಲುಪೇಟೆ ಕಡೆಗೆ ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಸಿದ್ದಾರ್ಥ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರ ಗಾಯಗೊಂಡಿದ್ದ ಶಿವಮೂರ್ತಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟರು. ಚಿಕಿತ್ಸೆ ಫಲಕಾರಿಯಾಗದೇ ಚೆನ್ನಾಜಮ್ಮ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತಕ್ಕೆ ಸಂಬಂಧಿಸಿದಂತೆ ನಂಜನಗೂಡು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸ್ ಹಾಗೂ ಬೈಕ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಯ ಬಳಿಕ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
