ನಂದಿನಿ ಡೇರಿಯ ಸಿಇಒಗಳ ಆಟೋಟ ಸ್ಪರ್ಧೆಯ ಸಂಭ್ರಮ

ಮೈಸೂರು: ಒಬ್ಬರಿಗೊಬ್ಬರೂ ಸ್ಪರ್ಧೆಗಿಳಿದು ಹಗ್ಗ ಹಿಡಿದೆಳೆದು ತಮ್ಮ ತಂಡ ಗೆದ್ದು ಕೂಗಿ ಸಂಭ್ರಮಿಸುತ್ತಿದ್ದು ಒಂದೆಡೆಯಾದರೆ ಮತ್ತೊಂದೆಡೆ ಅದೇ ಹಗ್ಗ ಹಿಡಿದು ಕೆಳಗೆ ಬಿದ್ದು ನಕ್ಕು ನಲಿದಿದ್ದು ಮತ್ತೊಂದು ತಂಡದಲ್ಲಿ ಸಂಭ್ರಮದ ನಗೆ ಬೀರಿತು. ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರಿಗೆ ಸಿದ್ಧಾರ್ಥನಗರದ ಶಿಕ್ಷಕರ ಭವನದಲ್ಲಿ ಆಯೋಜಿಸಿದ್ದ ಆಟೋಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಚಿತ್ರಣವಿದು. ತಾಲ್ಲೂಕು ಮಟ್ಟದಲ್ಲಿ ವಿಜೇತರಾದ ತಂಡಗಳು ಜಿಲ್ಲಾಮಟ್ಟದಲ್ಲಿ ಭಾಗವಹಿಸಿದ್ದವು.
ವಿಜೇತರಿಗೆ ಬಹುಮಾನ ವಿತರಿಸಿದ ಮೈಮುಲ್ ಅಧ್ಯಕ್ಷ ಚೆಲುವರಾಜು ಮಾತನಾಡಿ, ಸೊಸೈಟಿ ಬೆಳವಣಿಗೆಯನ್ನು ವೈಯುಕ್ತಿಕ ಬದುಕಿನಷ್ಟೇ ಪ್ರೀತಿಸುತ್ತಿರುವವರು ಡೇರಿ ಕಾರ್ಯದರ್ಶಿಗಳಾಗಿದ್ದಿರಿ. ಇದೊಂದು ಮಾದರಿ ಕಾರ್ಯಕ್ರಮ ಆಗಿದ್ದು, ಮುಂದಿನ ದಿನಗಳಲ್ಲಿ ನಾಲ್ಕು ದಿನಗಳ ಕಾಲ 10 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸುವ ಗುರಿ ಹೊಂದಿದ್ದೇವೆ.ನೀವೂ ಸಹ ಒಕ್ಕೂಟದ ಭಾಗವಾಗಿದ್ದಿರಿ. ಒಕ್ಕೂಟದಲ್ಲಿ 10 ಲಕ್ಷಕ್ಕೂ ಹೆಚ್ಚು ಲೀಟರ್ ಸಂಗ್ರಹಣೆಯಲ್ಲಿ ನಿಮ್ಮೆಲ್ಲರ ಪರಿಶ್ರಮವಿದೆ. ನಿಮ್ಮ ಸಂಘಗಳು ಬೆಳೆಯಬೇಕು. ರೈತರ ಕೆಲಸ ಎಲ್ಲರಿಗೂ ಸಿಗುವುದಿಲ್ಲ. ನಿಮಗೆ ಸಿಕ್ಕಿದೆ. ರೈತರ ಸಂಸ್ಥೆಯಾಗಿರುವ ಕಾರಣಕ್ಕೆ ಮನೆಗೂ ಹಾಲು ಇಟ್ಟುಕೊಳ್ಳದೇ ಹಾಲು ಹಾಕುವವರು ಇದ್ದಾರೆಂದರು. ಇಂದು ಪ್ರತಿ ಬೆಲೆಯೂ ಏರಿಕೆ ಆಗುತ್ತಿದೆ. ಪಶು ಆಹಾರ, ಔಷಧಿ ಹಾಗೂ ರೈತರ ದಿನಬಳಕೆಯ ಪ್ರತಿಯೊಂದರ ಬೆಲೆಯೂ ಜಾಸ್ತಿ ಆಗುತ್ತಿದೆ. ಈ ಹೈನುಗಾರಿಕೆ ಎಲ್ಲರೂ ಉಪಕಸುಬಿನಂತೆ ಬೆಳೆಸಿಕೊಂಡು ಹೋಗುತ್ತಿದ್ದಾರೆ. ಇದೊಂದು ಉದ್ಯೋಗವಾಗಿ ಬೆಳೆಯಬೇಕಾದರೆ ಹಾಲಿನ ದರ ಸಹ ಹೆಚ್ಚಳ ಆಗಬೇಕಿದೆ. ಇಡೀ ಕರ್ನಾಟಕ ದಕ್ಷಿಣ ಕನ್ನಡ ಬಿಟ್ಟರೆ ಅತಿಹೆಚ್ಚು ಹಾಲಿನದರವನ್ನು ಕೊಡುವುದಿದ್ದರೆ ಅದು ಮೈಮುಲ್ ಹಾಲು ಒಕ್ಕೂಟ ಆಗಿದೆ. ಇದರ ರೈತರ ಸಮಸ್ಯೆ ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಸಹಕಾರದಿಂದ ಅತಿಹೆಚ್ಚು ಹಾಲಿನ ದರ ಕೊಡುವ ಕೆಲಸಮಾಡೋಣ ಎಂದು ಹೇಳಿದರು.
ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್ ಮಾತನಾಡಿ, ಒಕ್ಕೂಟದ ಇತಿಹಾಸದಲ್ಲೇ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ಅತ್ಯಂತ ಒತ್ತಡದಲ್ಲಿ ಕೆಲಸ ಮಾಡುವವರು ಸಿಬ್ಬಂದಿಗಳಾಗಿದ್ದಿರಿ. ನಿಮಗೆ ನೆಮ್ಮದಿ, ಒಕ್ಕೂಟದಲ್ಲಿಯೂ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಕಾರ್ಯಕ್ರಮ ಆಯೋಜಿಸಿದ್ದೇವೆ.ಮುಂದೆ ಎಲ್ಲಾ ರೀತಿಯ ಆಟೋಟ ಗಳನ್ನು ಆಡಿಸಲು ಕ್ರಮವಹಿಸಲಾಗುವುದು. ಆರೋಗ್ಯ ವೃದ್ಧಿಗೆ ನಶಿಸುತ್ತಿರುವ ಗ್ರಾಮೀಣ ಆಟಗಳನ್ನು ಮರು ಚಾಲನೆ ನೀಡಬೇಕಿದೆ.ಗುಣಮಟ್ಟದ ಹಾಲಿನ ಸರಬರಾಜಿಗೆ ಕ್ರಮವಹಿಸಿ ಎಂದರು.
ನಿರ್ದೇಶಕರಾದ ಬಿ.ಎನ್.ಸದಾನಂದ ಮಾತನಾಡಿ, ಹೊಸ ಆವಿಷ್ಕಾರಕ್ಕೆ ಮಾರುಹೋಗಿ ಹೊಸ ಕಾಯಿಲೆಗೆ ಹೋಗುತ್ತಿದ್ದೇವೆ. ಗ್ರಾಮೀಣ ಕ್ರೀಡೆಗಳನ್ನು ಮರೆತಿದ್ದೇವೆಂದರು. ಮೈಮುಲ್ ಆಡಳಿತ ಮಂಡಳಿಯ ನಿರ್ದೆಶಕರಾದ ಕೆ.ಜಿ.ಮಹೇಶ್, ಕೆ.ಉಮಾಶಂಕರ್, ಸಿ.ಓಂ.ಪ್ರಕಾಶ್, ಪಿ.ಎಂ.ಪ್ರಸನ್ನ, ಕೆ.ಈರೇಗೌಡ, ಕೆ.ಎಸ್.ಕುಮಾರ್, ದ್ರಾಕ್ಷಯಿಣಿ ಬಸವರಾಜಪ್ಪ, ಲೀಲಾ ಬಿಕೆ ನಾಗರಾಜು, ನೀಲಾಂಬಿಕೆ ಮಹೇಶ್ ಕುರಹಟ್ಟಿ, ಶಿವಗಾಮಿ ಷಣ್ಮುಗಂ, ಬಿ.ಗುರುಸ್ವಾಮಿ, ಬಿ.ಎ.ಪ್ರಕಾಶ್, ಎ.ಬಿ.ಮಲ್ಲಿಕಾ ರವಿಕುಮಾರ್, ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಸುರೇಶ್ ನಾಯ್ಕ್, ಮಾರ್ಕೇಟಿಂಗ್ ಮ್ಯಾನೇಜರ್ ಎಚ್.ಕೆ.ಜಯಶಂಕರ್, ಕರಿಬಸವರಾಜು ಇನ್ನಿತರರು ಉಪಸ್ಥಿತರಿದ್ದರು. ಜಿಲ್ಲೆಯ 1200 ಮಂದಿ ಕಾರ್ಯನಿರ್ವಾಹಕ ಅಧಿಕಾರಿಗಳ ಪೈಕಿ ತಾಲ್ಲೂಕು ಮಟ್ಟದಲ್ಲಿ ವಿಜೇಯರಾದ 195ಮಂದಿ ಗೆ ಪದಕಗಳ ನೀಡಿ ಸನ್ಮಾನಿಸಲಾಯಿತು. ಜಿಲ್ಲಾ ಮಟ್ಟದ ಹಗ್ಗಾ ಜಗ್ಗಾಟದಲ್ಲಿ ಪಿರಿಯಾಪಟ್ಟಣ ಮೊದಲ ಹಾಗೂ ಹುಣಸೂರು ದ್ವಿತೀಯ ಸ್ಥಾನ ಪಡೆದು ಪ್ರಶಸ್ತಿ ಪಡೆದುಕೊಂಡಿತು. ರಂಗೋಲಿ ಸ್ಪರ್ಧೆಯಲ್ಲಿ ಮೈಸೂರು ತಾಲ್ಲೂಕು ಮೈದಾನಹಳ್ಳಿ ಸುಮಲತಾ( ಪ್ರಥಮ) ಎಚ್.ಡಿ.ಕೋಟೆ ಮುದ್ದಯ್ಯನಹುಂಡಿ ರೇಣುಕಾ(ದ್ವಿತೀಯ), ಹುಣಸೂರು ತಾಲ್ಲೂಕಿನ ಹಂಚ್ಯಾದ ಕವಿತ(ತೃತೀಯ) ಬಹುಮಾನ ಪಡೆದುಕೊಂಡರು.
ಖಾಸಗಿ ಸ್ಪರ್ಧೆ ಬಗ್ಗೆ ಜಾಗೃತರಾಗಿ ಮೈಮುಲ್ ರೈತರ ಸಂಸ್ಥೆಯಾಗಿದ್ದು ಇದನ್ನು ಬೆಳೆಸಲು ಎಲ್ಲರ ಪ್ರಯತ್ನ ಮುಖ್ಯವಾಗಿದೆ. ಈ ದಿಸೆಯಲ್ಲಿ ಗ್ರಾಮಾಂತರ ಭಾಗದಲ್ಲಿ ನೀವು ಹಾಲು ಶೇಖರಣೆ ಮಾಡಿದರಷ್ಟೇ ಸಾಲದು. ಹಾಲಿನ ಗುಣಮಟ್ಟ ಉಳಿಸಿಕೊಳ್ಳಿ. ಪ್ರಮುಖವಾಗಿ ಗ್ರಾಮಾಂತರ ಭಾಗದ ಜನರಿಗೆ ಅತಿಹೆಚ್ಚು ನಂದಿನಿ ಉತ್ಪನ್ನಗಳನ್ನೇ ಬಳಸುವಂತೆ ಅರಿವು ಮೂಡಿಸಿ, ಆಗ ಮಾತ್ರವೇ ನಾವು ನೀವು ಹಾಗೂ ರೈತರೆಲ್ಲರೂ ಉಳಿಯಲು ಸಾಧ್ಯ. -ಬಿ.ಎನ್.ಸದಾನಂದ,ಮೈಮುಲ್ ನಿರ್ದೇಶಕ