ನಾಪೋಕ್ಲು:ಧಾರಾಕಾರ ಮಳೆಗೆ ಹಲವೆಡೆ ಮನೆಗೆ ಹಾನಿ: ನಾಪೋಕ್ಲು-ಮೂರ್ನಾಡು ಸಂಪರ್ಕ ರಸ್ತೆ ಸಂಚಾರ ಸ್ಥಗಿತ

ನಾಪೋಕ್ಲು:ಧಾರಾಕಾರ ಮಳೆಗೆ ಹಲವೆಡೆ ಮನೆಗೆ ಹಾನಿ:  ನಾಪೋಕ್ಲು-ಮೂರ್ನಾಡು ಸಂಪರ್ಕ ರಸ್ತೆ ಸಂಚಾರ ಸ್ಥಗಿತ

ವರದಿ:ಝಕರಿಯ ನಾಪೋಕ್ಲು

 ನಾಪೋಕ್ಲು :ನಾಪೋಕ್ಲು ಭಾಗದಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ವಿಭಾಗದ ಹಲವೆಡೆ ಮನೆಗಳಿಗೆ ಹಾನಿ ಸಂಭವಿಸಿದ್ದು ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿ ನಾಪೋಕ್ಲು ಮೂರ್ನಾಡು ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ಬೊಳಿಬಾಣೆ ಎಂಬಲ್ಲಿ ಕಾವೇರಿ ನದಿ ಪ್ರವಾಹ ಬಂದು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

 ನಾಪೋಕ್ಲು ವಿಭಾಗದಲ್ಲಿ ಶನಿವಾರ ಸುರಿದ ಭಾರೀ ಗಾಳಿ-ಮಳೆಗೆ ಕಾವೇರಿ ನದಿ ನೀರಿನ ಮಟ್ಟ ದಿಢೀರನೆ ಏರಿಕೆಯಾಗಿದೆ.ಇದರಿಂದ ನಾಪೋಕ್ಲು-ಮೂರ್ನಾಡು ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ಹೊದವಾಡ ಗ್ರಾಮದ ಬೊಳಿಬಾಣೆ ಎಂಬಲ್ಲಿ ರಸ್ತೆಗೆ ಕಾವೇರಿ ನದಿ ಪ್ರವಾಹ ಬಂದು ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.ಅಲ್ಲದೆ ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆರಿಯಪರಂಬು ಕಲ್ಲುಮೊಟ್ಟೆ ಗ್ರಾಮದ ರಸ್ತೆಯಲ್ಲೂ ಕಾವೇರಿ ನದಿ ಪ್ರವಾಹ ಆವರಿಸಿ ಸಂಚಾರ ಸ್ಥಗಿತಗೊಂಡಿದೆ.

 ಬೇತು ಗ್ರಾಮದಿಂದ ಬಲಮುರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮಕ್ಕಿಕಡವು ಎಂಬಲ್ಲಿ ಪ್ರವಾಹ ಆವರಿಸಿದ್ದು ಸಂಚಾರ ಕಡಿತಗೊಂಡಿದೆ.ನಾಪೋಕ್ಲು ವ್ಯಾಪ್ತಿಯ ಕಾವೇರಿ ನದಿ ಹಾಗೂ ಉಪನದಿ,ತೊರೆ ಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಇದರಿಂದ ಗದ್ದೆ ತೋಟಗಳಿಗೆ ಪ್ರವಾಹ ಆವರಿಸಿ ಜನರು ಸಮಸ್ಯೆ ಎದುರಿಸುವಂತಾಗಿದೆ. ಪ್ರವಾಹ ಆವರಿಸಿ ಸಂಚಾರ ಸ್ಥಗಿತಗೊಂಡಿರುವ ನಾಪೋಕ್ಲು ಮೂರ್ನಾಡು ರಸ್ತೆಗೆ ಹೊದ್ದೂರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ನಾಪೋಕ್ಲು ಪೊಲೀಸರು ಬ್ಯಾರಿಗೇಟ್ ಅಳವಡಿಸಿ ಜನರು ಸಂಚರಿಸಿದಂತೆ ಕ್ರಮ ಕೈಗೊಂಡಿದ್ದಾರೆ.

ನಾಪೋಕ್ಲು ವಿಭಾಗದಲ್ಲಿ ವಿಪರೀತ ಗಾಳಿ ಮಳೆಯಿಂದ ಹಲವೆಡೆ ಮನೆಗಳಿಗೆ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿದೆ.ನಾಪೋಕ್ಲು ಬಳಿಯ ಎಮ್ಮೆಮಾಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸುರಿದ ಧಾರಾಕಾರ ಗಾಳಿ ಮಳೆಗೆ ಗ್ರಾಮದ ನಿವಾಸಿ ಟಿ. ಎ.ಕರೀಂ ಎಂಬುವವರ ವಾಸದ ಮನೆಯ ಮುಂಭಾಗದ ಗೋಡೆ ಕುಸಿದಿದ್ದು ಹಾನಿಯಾಗಿ ನಷ್ಟ ಸಂಭವಿಸಿದೆ. ಗೋಡೆಕುಸಿದ ಪರಿಣಾಮ ಮನೆ ಮಂದಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯು ಸಂಪೂರ್ಣವಾಗಿ ಕುಸಿದು ಬೀಳುವ ಸಾಧ್ಯತೆಯಿದ್ದು ಮನೆ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕಂದಾಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ. ಅದರಂತೆ ಸ್ಥಳಕ್ಕೆ ನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮ ಲೆಕ್ಕಿಗೆ ಲೇಖನ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರೂರು ಗ್ರಾಮದಲ್ಲಿ ಗಾಳಿ ಮಳೆಗೆ ಗ್ರಾಮದ ನಿವಾಸಿ ಆನೇಡ ಬೆಳ್ಯವ್ವ ಎಂಬುವವರ ವಾಸದ ಮನೆಯ ಶೀಟ್ ಗಳು ಹಾರಿಹೋಗಿ ನಷ್ಟ ಸಂಭವಿಸಿದೆ. ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಯಕೋಲ್ ಗ್ರಾಮದಲ್ಲಿ ಸುರಿದ ವಿಪರೀತ ಮಳೆಗೆ ಗ್ರಾಮದ ನಿವಾಸಿ ಆಶ್ರಫ್ ಎಂಬುವವರ ಮನೆಯ ಪಕ್ಕದ ಬರೆ ಬರೆ ಜರಿದು ಹಾನಿಯಾಗಿದೆ.

ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೇ ತಾಲೂಕುವಿನಲ್ಲಿ ಶನಿವಾರ ರಾತ್ರಿ ಸುರಿದ ಗಾಳಿ ಮಳೆಗೆ ಗ್ರಾಮದ ನಿವಾಸಿ ಕುಲ್ಲೇಟಿರ ಸಾಮ್ರಾಟ್ ಮೊಣ್ಣಪ್ಪ ಎಂಬುವವರ ಲೈನ್ ಮನೆ ಕುಸಿದು ಬಿದ್ದು ನಷ್ಟ ಸಂಭವಿಸಿದೆ. ಕುಂಜಿಲ ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಜಿಲ ಗ್ರಾಮದಲ್ಲಿ ಧಾರಾಕಾರ ಗ್ರಾಮದ ನಿವಾಸಿ ಉಮ್ಮರ್ ಎಂಬುವವರ ವಾಸದ ಮನೆಯ ಅಡುಗೆ ಕೋಣೆಯ ಗೋಡೆ ಕುಸಿದು ಹಾನಿಯಾಗಿ ನಷ್ಟ ಸಂಭವಿಸಿದೆ.ಕುಂಜಿಲ ಗ್ರಾಮದ ನಿವಾಸಿ ಹಸನ್ ಎಂಬುವವರ ವಾಸದ ಮನೆ ಮುಂಭಾಗದಲ್ಲಿ ಅಳವಡಿಸಲಾದ ಶೀಟ್ ಗಳು ಗಾಳಿ ಮಳೆಗೆ ಹಾರಿಹೋಗಿ ಹಾನಿಯಾಗಿ ನಷ್ಟ ಸಂಭವಿಸಿದೆ.ಹಾನಿಯಾದ ಸ್ಥಳಕ್ಕೆ ನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್,ಆಯಾ ಗ್ರಾಮದ ಗ್ರಾಮ ಲೆಕ್ಕಿಗರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಾಪೋಕ್ಲು ವಿಭಾಗದಲ್ಲಿ ಸುರಿದ ಗಾಳಿ ಮಳೆಗೆ ನಾಪೋಕ್ಲು ವಿವಿಧಡೆ ತೋಟಗಳಲ್ಲಿ ಮರದ ಕೊಂಬೆಗಳು ಬಿದ್ದು ವಿದ್ಯುತ್ ಕಂಬಗಳು ಧರೆಗುರುಳಿ ನಾಪೋಕ್ಲು ಪಟ್ಟಣ ಸೇರಿದಂತೆ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆಯಿಂದ ಜನರು ಕತ್ತಲಲ್ಲಿ ಕಾಲಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾಪೋಕ್ಲುವಿನ ಸೆಸ್ಕ್ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಹರಸಾಹಸ ಪಟ್ಟು ವಿದ್ಯುತ್ ಒದಗಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಶನಿವಾರ ಹಬ್ಬರಿಸಿದ ಮಳೆರಾಯ ಭಾನುವಾರ ಕೊಂಚ ಬಿಡುವು ನೀಡಿದ್ದು ಜನರಲ್ಲಿ ಕೊಂಚ ನೆಮ್ಮದಿ ತಂದಿದೆ.