ಒನ್ ಸೈಡ್ ಲವ್ ಸ್ಟೋರಿ;34ವರ್ಷದ ಮಹಿಳಾ ಟೆಕ್ಕಿಯನ್ನು ಹತ್ಯೆಗೈದ ವಿರಾಜಪೇಟೆ ಮೂಲದ ಪಿಯುಸಿ ವಿದ್ಯಾರ್ಥಿ
ಬೆಂಗಳೂರು: ಕಳೆದ ಜನವರಿ 03ರಂದು ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದ ಮಹಿಳಾ ಟೆಕ್ಕಿ ಶರ್ಮಿಳಾ(34) ಸಾವಿಗೆ ಸಂಬಂಧಿಸಿದಂತೆ ವೀರಾಜಪೇಟೆಯ ಅರಸು ನಗರ ಮೂಲದ ಯುವಕ ಕರ್ಣನ್ ಕುರೈ (18) ಎಂಬಾತನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಯು ಬೆಂಗಳೂರು ನೆರೆ ಮನೆಯ ವಾಸಿಯಾಗಿದ್ದು ಆಕೆ ಮೇಲೆ ಹಲ್ಲೆ ನಡೆಸಿ ಬಳಿಕ ಬೆಂಕಿ ಹಚ್ಚಿ ಪರಾರಿಯಾಗಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮನೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳೂರಿನ ಕಾವೂರು ಮೂಲದ ಶರ್ಮಿಳಾ ಒಂದೂವರೆ ವರ್ಷದಿಂದ ಸುಬ್ರಹ್ಮಣ್ಯ ಲೇಔಟ್‌ನ ಅಪಾರ್ಟ್ಮೆಂಟ್‌ನಲ್ಲಿ ಸ್ನೇಹಿತೆ ಜತೆ ವಾಸವಾಗಿದ್ದರು.
ಸಮೀಪದ ಸಾಫ್ಟ್ವೇರ್ ಕಂಪೆನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದರು. ಆವತ್ತು “ವೀಕೆಂಡ್'' ರಜೆಯಿದ್ದುದರಿಂದ ಈಕೆಯ ಸ್ನೇಹಿತೆ ಊರಿಗೆ ತೆರಳಿದ್ದರು. ಹೀಗಾಗಿ ಮನೆಯಲ್ಲಿ ಒಬ್ಬರೇ ಇದ್ದರು. ಪಕ್ಕದ ಫ್ಲ್ಯಾಟ್‌ನಲ್ಲಿ ತಾಯಿ ಜತೆ ವಾಸವಾಗಿದ್ದ ಆರೋಪಿಗೆ ಶರ್ಮಿಳಾ ಮತ್ತು ಆಕೆ ಸ್ನೇಹಿತೆಯ ಪರಿಚಯವಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೆರೆ ಮನೆಯಲ್ಲೇ ವಾಸವಿದ್ದ ಆರೋಪಿ ನೋಡಲು ಸುಂದರಿಯಾಗಿದ್ದ ಶರ್ಮಿಳಾ ಮೇಲೆ ವಿಪರೀತ ಮೋಹ ಬೆಳೆಸಿಕೊಂಡು ಆಕೆಯನ್ನು ಏಕಮುಖವಾಗಿ ಪ್ರೀತಿಸುತಿದ್ದ. ಆದರೆ ಆಕೆಗೆ ಇದು ಗೊತ್ತಿರಲೇ ಇಲ್ಲ.
ಶನಿವಾರ ಬೆಳಿಗ್ಗೆ ಸ್ನೇಹಿತೆ ಲಗೇಜ್‌ನೊಂದಿಗೆ ಹೋಗುತ್ತಿರುವುದನ್ನು ಗಮನಿಸಿದ ಆರೋಪಿ ಶರ್ಮಿಳಾ ಮನೆಯಲ್ಲಿ ಒಬ್ಬರೇ ಇರುವುದನ್ನು ಗಮನಿಸಿ ರಾತ್ರಿ ೧೦.೧೫ ಘಂಟೆಗೆ ಸ್ಲೈಡ್ ಕಿಟಕಿ ಮೂಲಕ ಮನೆ ಪ್ರವೇಶಿಸಿ ಶರ್ಮಿಳಾರನ್ನು ತಬ್ಬಿಕೊಂಡಿದ್ದ. ಗಾಬರಿಗೊಂಡ ಆಕೆ ಜೋರಾಗಿ ಕೂಗಿಕೊಂಡು ಆತನನ್ನು ದೂರ ತಳ್ಳಿದ್ದರು. ಆದರೂ ಆತ ದೈಹಿಕವಾಗಿ ತನಗೆ ಸಹಕಾರ ನೀಡುವಂತೆ ಪೀಡಿಸಿದ್ದ. ಆಗ ಕೋಪಗೊಂಡ ಶರ್ಮಿಳಾ ಆರೋಪಿಗೆ ಎಚ್ಚರಿಕೆ ನೀಡಿ ಮನೆಯಿಂದ ಹೊರಗಡೆ ಹೋಗುವಂತೆ ಎಚ್ಚರಿಕೆ ನೀಡಿದ್ದರು.
ಆಕೆ ಭಯ ಗಾಬರಿಯಿಂದ ಜೋರಾಗಿ ಕಿರುಚುತ್ತಿದ್ದಂತೆ ಆರೋಪಿ ಆಕೆಯ ಮೂಗು ಮತ್ತು ಬಾಯಿಯನ್ನು ಬಲವಾಗಿ ಮುಚ್ಚಿದ್ದ. ಕ್ಷಣಾರ್ಧದಲ್ಲೇ ಆಕೆ ಮೂಗಿನಿಂದ ರಕ್ತಸ್ರಾವ ಉಂಟಾಗಿ ಮೃತಪಟ್ಟಿದ್ದರು. ರಕ್ತ ಆಕೆ ಬಟ್ಟೆ ಮೇಲೆ ಬಿದ್ದಿತ್ತು. ಗಾಬರಿಗೊಂಡ ಆರೋಪಿ, ರಕ್ತವಾಗಿದ್ದ ಬಟ್ಟೆ ಹಾಗೂ ಇತರ ಬಟ್ಟೆಗಳನ್ನು ಹಾಸಿಗೆ ಮೇಲೆ ಹಾಕಿ ಬೆಂಕಿ ಹಚ್ಚಿ, ಸ್ಲೈ ಕಿಟಕಿ ಮೂಲಕ ಪರಾರಿಯಾಗಿದ್ದ.
ರಾತ್ರಿ ೧೧ ಘಂಟೆಗೆ ಮನೆಯಿಂದ ಹೊಗೆ ಬರುತ್ತಿದ್ದುದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ಅಗ್ನಿ ಶಾಮಕ ದಳಕ್ಕೆ ಫೋನ್ ಮಾಡಿ, ಅವರು ಆಗಮಿಸಿ ಬೆಂಕಿ ನಂದಿಸಿದ್ದರು. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಬೆಂಕಿಯಿಂದ ಉಸಿರುಗಟ್ಟಿ ಶರ್ಮಿಳಾ ಮೃತಪಟ್ಟಿರಬಹುದು ಎಂದು ಪೊಲೀಸರು ಭಾವಿಸಿದ್ದರು. ಹಾಗೆಯೇ ಪ್ರಕರಣ ದಾಖಲಿಸಿದ್ದರು.
ಆದರೆ, ಬುಧವಾರ ಪೊಲೀಸರ ಕೈ ಸೇರಿದ ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಕುತ್ತಿಗೆ ಭಾಗ, ಕೈಗಳ ಮೇಲೆ ಬಲವಾದ ಗಾಯಗಳಾಗಿರುವುದು ಪತ್ತೆಯಾಗಿತ್ತು. ವರದಿಯಲ್ಲಿ ಶರ್ಮಿಳಾ ಬೆಂಕಿಯ ಹೊಗೆಯಿಂದ ಉಸಿರುಕಟ್ಟಿ ಸಾವು ಸಂಭವಿಸಿಲ್ಲ. ಕುತ್ತಿಗೆ ಹಿಸುಕಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದರು. ಅದಕ್ಕಿಂತ ಮೊದಲೇ ಈಕೆ ಮೇಲೆ ಹಲ್ಲೆ ನಡೆಸಲಾಗಿದೆ ಜತೆಗೆ ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನ ನಡೆದಾಗ ಹಲ್ಲೆ ಆಗಿರುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದ್ದರು.
ಈ ಕುರಿತು ಮಾಹಿತಿ ನೀಡಿದ ರಾಮಮೂರ್ತಿ ನಗರ ಪೊಲೀಸ್ ಇನ್ಸ್ಪೆಕ್ಟರ್ ವಿ.ಜೆ. ಸತೀಶ್ ಅವರು ಕೊಲೆ ಎಂದ ಕೂಡಲೇ ನಾವು ಅಕ್ಕಪಕ್ಕದ ಸಿಸಿ ಕ್ಯಾಮರಾ ಪರಿಶೀಲಿಸಿದೆವು. ಆದರೆ ಏನೂ ಮಾಹಿತಿ ಸಿಗಲಿಲ್ಲ. ಆ ಸಮಯದಲ್ಲಿ ಯಾವುದೇ ಅನುಮಾನಾಸ್ಪದ ವ್ಯಕ್ತಿ ಬಂದು ಹೋಗಿರಲಿಲ್ಲ ಎಲ್ಲಕ್ಕಿಂತ ಮುಖ್ಯವಾಗಿ ಈ ಮನೆಗೆ ಎದುರಾಗಿ ಯಾವುದೇ ಕ್ಯಾಮರಾ ಇರಲಿಲ್ಲ. ನಂತರ ಅದೇ ಕಟ್ಟಡದ ಫ್ಲ್ಯಾಟ್‌ನಲ್ಲಿದ್ದ ಕೆಲ ಅಸ್ಸಾಂ ಮೂಲದ ನಾಲ್ಕೈದು ಮಂದಿ ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆವು ಅದರೆ ಯಾವುದೇ ಸುಳಿವು ದೊರೆಯಲಿಲ್ಲ.
ಕಾಲೇಜೊಂದರಲ್ಲಿ ಎರಡನೇ ಪಿಯುಸಿ ಓದುತಿದ್ದ ಇವನ ಬಗ್ಗೆ ನಮಗೆ ಯಾವುದೇ ಅನುಮಾನ ಇರಲಿಲ್ಲ. ಯಾವುದೇ ಸುಳಿವು ಸಿಗದಾಗ ಇವನ ಬಗ್ಗೆಯೇ ಅನುಮಾನ ಬಂದು ಕರ್ಣನ್ ಕುರೈನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಾಯಿಬಿಟ್ಟಿದ್ದ. ನನಗೆ ಆಕೆಯ ಮೇಲೆ ಪ್ರೇಮಾಂಕುರವಾಗಿತ್ತು. ಆಕೆ ನಿರಾಕರಿಸಿದಳು ಎಂದು ಹೇಳಿದ್ದಾನೆ ಎಂದು ತಿಳಿಸಿದರು.
ಆರೋಪಿಗೆ ತಂದೆ ಇಲ್ಲ, ತಾಯಿ ಬೆಂಗಳೂರಿನಲ್ಲೇ ಮಾರ್ಕೆಟಿಂಗ್ ಕಂಪೆನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತಿದ್ದಾರೆ. ಅರೋಪಿಗೆ ಈಗ ೧೮ ವರ್ಷ ಎರಡು ತಿಂಗಳಾಗಿದ್ದು ಎರಡು ತಿಂಗಳ ಹಿಂದೆ ಈ ಹೀನ ಕೃತ್ಯ ಎಸಗಿದ್ದಿದ್ದರೆ ಬಾಲಾಪರಾಧಿ ಆಗಿ ಕಾನೂನಿನ ಕುಣಿಕೆಯಿಂದ ಪಾರಾಗುತಿದ್ದ. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದ ರಾಮಮೂರ್ತಿನಗರ ಠಾಣೆ ಪೊಲೀಸರು, ಇದೀಗ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.