ಸೋಮವಾರಪೇಟೆ ಭಾಗದಲ್ಲಿ ಮಳೆರಾಯನ ಆರ್ಭಟ

ಸೋಮವಾರಪೇಟೆ ಭಾಗದಲ್ಲಿ ಮಳೆರಾಯನ ಆರ್ಭಟ

ಸೋಮವಾರಪೇಟೆ: ತಾಲ್ಲೂಕಿನಾದ್ಯಂತ ಮಳೆಯ ಆರ್ಭಟ ಭಾನುವಾರವೂ ಮುಂದುವರಿದಿದ್ದು, ಗ್ರಾಮೀಣ ಭಾಗದ ಬಹುತೇಕ ಗ್ರಾಮಗಳು ಕತ್ತಲೆಯಲ್ಲಿವೆ. ವಿದ್ಯುತ್ ಮಾರ್ಗದ ಮೇಲೆ ಮರಗಳು ಬಿದ್ದಿದ್ದು ಕಂಬಗಳು ನೆಲಕ್ಕುರುಳಿವೆ. ಸೋಮವಾರಪೇಟೆ, ಶಾಂತಳ್ಳಿ, ಸಕಲೇಶಪುರ ರಾಜ್ಯ ಹೆದ್ದಾರಿಯ ಶಾಂತಳ್ಳಿ-ಜೇಡಿಗುಂಡಿ ಬಳಿಯಲ್ಲಿ ರಸ್ತೆಯ ಮೇಲೆ ಬರೆ ಕುಸಿದಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಗೌಡಳ್ಳಿ ಗ್ರಾಮ ಪಂಚಾಯಿತಿಯ ಗ್ರಂಥಾಲಯ ಶೀಟ್‌ಗಳು ಗಾಳಿಗೆ ಹಾರಿಹೋಗಿವೆ. ಬಳಗುಂದ ಗ್ರಾಮದ ಮಣಿ ಎಂಬವರ ಮನೆಯ ತಡೆಗೋಡೆ ಕುಸಿದು ಹಾನಿಯಾಗಿದೆ.

 ಸೋಮವಾರಪೇಟೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಸಮೀಪ ಬರೆ ಕುಸಿಯಲು ಪ್ರಾರಂಬಿಸಿದ್ದು, ಪಟ್ಟಣ ಪಂಚಾಯಿತಿ ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಅಂಗಡಿಯವರು ಸೂಕ್ತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದ್ದಾರೆ. ಚಿಕ್ಕತೋಳೂರು ಗ್ರಾಮದ ಸಿ.ಎನ್.ಪ್ರಕಾಶ್ ಅವರ ಕೊಟ್ಟಿಗೆಯ ಮೇಲೆ ವಿದ್ಯುತ್ ಕಂಬ ಬಿದ್ದು ಹಾನಿಯಾಗಿದೆ. ಸಿ.ಈ.ಸುಬ್ಬಯ್ಯ ಅವರ ಮನೆ ಮೇಲೆ ಬೈನೆ ಮರ ಬಿದ್ದಿದೆ. ಯಡೂರು ಗ್ರಾಮದ ಎಂ.ಎಸ್. ಹೊನ್ನಪ್ಪ ಅವರ ಮನೆ ಸಮೀಪದ ಬರೆಕುಸಿದಿದೆ. ಸೂರ್ಲಬ್ಬಿ ಪ್ರೌಢಶಾಲೆಯ ವೇದಿಕೆ ಕಟ್ಟಡದ ಮೇಲ್ಚಾವಣಿ ಹಾರಿ ಹೋಗಿದೆ. ಹರಗ ಗ್ರಾಮದ ಶರಣ್ ಎಂಬವರು ಜೇಡಿಗುಂಡಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾನ್ ಮೇಲೆ ಮರ ಬಿದ್ದು ಜಖಂಗೊಂಡಿದೆ.