ಐಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಗಮನ ಸೆಳೆದ ವಿಜ್ಞಾನ ವಸ್ತು ಪ್ರದರ್ಶನ: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ‌ ಮನೋಭಾವ ಬೆಳೆಸಲು ಬಿಇಓ ಕೃಷ್ಣಪ್ಪ ಸಲಹೆ

ಐಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಗಮನ ಸೆಳೆದ ವಿಜ್ಞಾನ ವಸ್ತು ಪ್ರದರ್ಶನ:  ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ‌ ಮನೋಭಾವ ಬೆಳೆಸಲು ಬಿಇಓ ಕೃಷ್ಣಪ್ಪ ಸಲಹೆ

ಸೋಮವಾರಪೇಟೆ, ಡಿ.12: ಮಕ್ಕಳಿಗೆ ವಿಜ್ಞಾನದ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಕಲಿಕೆ ಬಹಳ ಮುಖ್ಯವಾಗಿದ್ದು, ಶಿಕ್ಷಕರು ವಿಜ್ಞಾನದ ಬಗ್ಗೆ ಮಕ್ಕಳಿಗೆ ಹೆಚ್ಚಿನ ತಿಳುವಳಿಕೆ ನೀಡುವ ಮೂಲಕ ಅವರಲ್ಲಿ ವೈಜ್ಞಾನಿಕ‌ ಮನೋಭಾವ ಹಾಗೂ ಸಂಶೋಧನಾ ಪ್ರವೃತ್ತಿ ಬೆಳೆಸಲು ವಿಶೇಷ ಗಮನ ಹರಿಸಬೇಕು. ಇದಕ್ಕಾಗಿ ಶಾಲೆಗಳಲ್ಲಿ ಶಿಕ್ಷಕರು ತಮ್ಮ ಬೋಧನೆಯಲ್ಲಿ ಪ್ರಾಯೋಗಿಕ ಸಲಕರಣೆ ಬಳಸುವ ಮೂಲಕ ಅವರಲ್ಲಿ ವಿಜ್ಞಾನ ಕಲಿಕೆಯಲ್ಲಿ ಹೆಚ್ಚಿನ‌ಆಸಕ್ತಿ ಬೆಳೆಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ಸಲಹೆ ನೀಡಿದರು.

 ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ 2025-26 ನೇ ಸಾಲಿನ ರಾಷ್ಟ್ರೀಯ‌ ಆವಿಷ್ಕಾರ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ತಾಲ್ಲೂಕಿನ ಐಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಸಂಘದ ಆಶ್ರಯದಲ್ಲಿ ಗುರುವಾರ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶಾಲೆಗಳಲ್ಲಿ ವಿಜ್ಞಾನ ವಸ್ತು ಪ್ರದರ್ಶನಗಳು ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಕಲಿಕೆಯ ಕುತೂಹಲ ವನ್ನು ಹುಟ್ಟುಹಾಕಿ ಪ್ರಾಯೋಗಿಕ ಕಲಿಕೆಯನ್ನು ಪ್ರೇರೇಪಿಸಿ ಬೆಳೆಸುವ ಮತ್ತು ವೈಜ್ಞಾನಿಕ ಚಿಂತನೆಯನ್ನು ಉತ್ತೇಜಿಸುವ ಪ್ರಮುಖ ಚಟುವಟಿಕೆಗಳಾಗಿ ರೂಪುಗೊಳ್ಳುತ್ತವೆ ಎಂದು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ಹೇಳಿದರು.

 ವಿದ್ಯಾರ್ಥಿಗಳಿಗೆ ವಿಜ್ಞಾನದ ಪ್ರಾಯೋಗಿಕ ಕಲಿಕೆ ಮುಖ್ಯ.ಶಿಕ್ಷಕರು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಮೂಲಕ ಸಮಾಜದಲ್ಲಿ ಬೇರೂರಿರುವ ಮೌಢ್ಯ, ಕಂದಾಚಾರದಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಧ್ವನಿ ಎತ್ತಿ ಸಮಾಜದಲ್ಲಿ ವೈಜ್ಞಾರಿಕತೆ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು. ಮಕ್ಕಳ ವಿಜ್ಞಾನ ಪ್ರದರ್ಶನಗಳು ಕೇವಲ ಯೋಜನೆಗಳ ಪ್ರದರ್ಶನಗಳಲ್ಲ; ಅವುಗಳು ಹೊಸ ಹೊಸ ನಾವೀನ್ಯತೆ, ಪ್ರಯೋಗಶೀಲತೆ ಮತ್ತು ನೈಜ-ಪ್ರಪಂಚದ ಸನ್ನಿವೇಶಗಳಲ್ಲಿ ವೈಜ್ಞಾನಿಕ ತತ್ವಗಳ ಅನ್ವಯವನ್ನು ಪ್ರೋತ್ಸಾಹಿಸುವ ವೇದಿಕೆಗಳಾಗಿ ರೂಪುಗೊಂಡಿವೆ ಎಂದರು.

 ರಾಷ್ಟ್ರೀಯ‌ ಆವಿಷ್ಕಾರದ ಮುಖ್ಯ ಉದ್ದೇಶ ಕುರಿತು ಮಾಹಿತಿ ನೀಡಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯ ನಿಕಟ ಪೂರ್ವ ಅಧ್ಯಕ್ಷಕರೂ ಆದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ,ವಿಜ್ಞಾನ ವಿಜ್ಞಾನ ತಂತ್ರಜ್ಞಾನ ಬಳಸಿ ಕಲಿಕೋಪಕರಣ ಬಳಸಿದರೆ ಮಕ್ಕಳು ಹೆಚ್ಚು ಆಸಕ್ತಿ ವಹಿಸಿ ಓದುತ್ತಾರೆ. ಅವರಲ್ಲಿ ಸೃಜನಾತ್ಮಕ ಚಿಂತನಶೀಲ ವೈಜ್ಞಾನಿಕ ಮನೋಭಾವ ಬೆಳೆಸಲು ಇಂತಹ ವಸ್ತು ಪ್ರದರ್ಶನಗಳು ಸಹಕಾರಿ ಎಂದರು.

 ವಿದ್ಯಾರ್ಥಿಗಳು ವಿಜ್ಞಾನಿಗಳ‌ ಸಂಶೋಧನೆ ಮತ್ತು ಅವರ ಸಾಧನೆಗಳ ಬಗ್ಗೆ ಹೆಚ್ಚಿನ ಜ್ಞಾನ ಬೆಳೆಸಿಕೊಂಡರೆ ಭವಿಷ್ಯದಲ್ಲಿ ವಿಜ್ಞಾನಿಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ಇಂತಹ ವಿಜ್ಞಾನ ಆವಿಷ್ಕಾರಗಳ ಪ್ರಾಯೋಗಿಕ ಪ್ರದರ್ಶನಗಳು ಮಕ್ಕಳಲ್ಲಿ ವಿಜ್ಞಾನ ಕಲಿಕೆಗೆ ಹೆಚ್ಚಿನ ಪ್ರೇರೇಪಣೆ ನೀಡುತ್ತವೆ ಎಂದರು.

 ಈ ವಸ್ತು ಪ್ರದರ್ಶನದಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ಮಕ್ಕಳು ಉತ್ತಮ ವಿಜ್ಞಾನ ಮಾದರಿ ಹಾಗೂ ಪ್ರಾತ್ಯಕ್ಷಿಕೆಗಳನ್ನು ಉತ್ಯಮವಾಗಿ ಮಾಡಿರುವುದನ್ನು ಟಿ.ಜಿ.ಪ್ರೇಮಕುಮಾರ್ ಪ್ರಶಂಸಿದರು. ಮಕ್ಕಳ ವಿಜ್ಞಾನ ಮಾದರಿ ಪ್ರದರ್ಶನದ ಬಗ್ಗೆ ಸಂತಸ ವ್ಯಕ್ತಪಡಿಸಿ ಮಾತನಾಡಿದ ಜಿಲ್ಲಾ ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷ ಎಸ್.ಎ.ಮುರಳೀಧರ್, ವಿಜ್ಞಾನ ವಿಷಯವು ನಮ್ಮ ದಿನನಿತ್ಯದ ಅನುಭವಗಳನ್ನು ಪರೀಕ್ಷಿಸಿ ವೀಕ್ಷಿಸುವ ಅವಕಾಶ ನೀಡುತ್ತದೆ. ಇದಕ್ಕೆ ಪೂರಕವಾಗಿ ಪರಿಸರದಲ್ಲಿ ಇರುವ ಸಂಬಂಧಗಳಿಗೆ ಮತ್ತು ಚಟುವಟಿಕೆಗಳಿಗೆ ಯೋಜನಾ ಕಾರ್ಯ ರೂಪವಾಗಿ ಮಕ್ಕಳ ಮುಂದೆ ಪ್ರದರ್ಶಿಸಿ ಅನ್ವೇಷಣೆಯ ಕಲಿಕೆಗೆ ಜ್ಞಾನ ಕಟ್ಟಿಕೊಟ್ಟರೆ ಅವರು ಭವಿಷ್ಯದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯ ಎಂದರು.

ತಾಲ್ಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಆರ್.ರತ್ನಕುಮಾರ್ ಮಾತನಾಡಿ, ಇಂತಹ ವಿಜ್ಞಾನ ಪ್ರದರ್ಶನಗಳು ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನ ಕಲಿಕೆಗೆ ಪ್ರೇರೇಣೆ ನೀಡುವುದರೊಂದಿಗೆ ಅವರಲ್ಲಿ ಭವಿಷ್ಯದಲ್ಲಿ ವೈಜ್ಞಾನಿಕ ಅನ್ವೇಷಣೆ ಕೈಗೊಳ್ಳಲು ಸಹಕಾರಿಯಾಗಿವೆ ಎಂದರು. ಶಾಲಾ ಮುಖ್ಯ ಶಿಕ್ಷಕ ಎಂ.ಎಂ. ಯಶವಂತ್ ಕುಮಾರ್, ಮಾತನಾಡಿ, ಈ ವಸ್ತು ಪ್ರದರ್ಶನವು ಮಕ್ಕಳ ಪ್ರತಿಭೆ ಅನಾವರಣಕ್ಕೊಂದು ಉತ್ತಮ ವೇದಿಕೆಯಾಗಿದೆ. ಮಕ್ಕಳು ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

 ಪ್ರಾಸ್ತಾವಿಕವಾಗಿ ಮಾತನಾಡಿದ ವಿಜ್ಞಾನ ಶಿಕ್ಷಕಿ ಎಸ್ ಎಸ್ ರಂಜಿನಿ, ಈ ವಸ್ತು ಪ್ರದರ್ಶನದಲ್ಲಿ ಮಕ್ಕಳೇ ವಿವಿಧ ಯೋಜನಾ ಮಾದರಿಗಳನ್ನು ತಯಾರಿಸಿ ಪ್ರದರ್ಶನಕ್ಕಿಟ್ಟಿದ್ದು, ಇದು ಮಕ್ಕಳಲ್ಲಿ ವಿಜ್ಞಾನ ಕಲಿಕೆಗೆ ಸಹಕಾರಿಯಾಗಿದೆ ಎಂದರು. ಎಸ್ ಡಿ ಎಂ ಸಿ ಅಧ್ಯಕ್ಷ ಬಿ.ಎನ್. ವಸಂತ್ ಅಧ್ಯಕ್ಷತೆ ವಹಿಸಿದ್ದರು. ಎಸ್ ಡಿ ಎಂ ಸಿ ಸದಸ್ಯ ಮಂಜುನಾಥ್, ದೈಹಿಕ ಶಿಕ್ಷಣ ಶಿಕ್ಷಕ ಎಚ್.ಬಿ.ಕೃಷ್ಣಪ್ಪ, ಕಾಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎಂ.ಟಿ.ಸರಳಕುಮಾರಿ, ಕಿರಗಂದೂರು ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ರಶ್ಮಿ ಸೇರಿದಂತೆ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಸ್ತು ಪ್ರದರ್ಶನದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಪರಮಾಣುಗಳ ರಚನೆ, ವಿದ್ಯುತ್ಕಾಂತೀಯ ಕ್ರೇನ್‌, ಪರಿಸರ ಮಾಲಿನ್ಯ ನಿಯಂತ್ರಣ, ರಕ್ತ ಶುದ್ಧೀಕರಣ, ಸ್ವಯಂ ಚಾಲಿತ ಗಡಿ ಕಾಯುವ ಯಂತ್ರ, ಸೌರಶಕ್ತಿ ಬಳಕೆ, ಜಲಶಕ್ತಿ, ಬಾಹ್ಯಾಕಾಶ ಕ್ಷೇತ್ರ, ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣ, ಸ್ವಯಂ ಚಾಲಿತ ಹನಿ ನೀರಾವರಿ ಪದ್ಧತಿ, ಜೀವಶಾಸ್ತ್ರ ಸೇರಿದಂತೆ ನಾನಾ ಬಗೆಯ ವಿಜ್ಞಾನ ಮಾದರಿ ಪ್ರದರ್ಶನ ಆಕರ್ಷಕವಾಗಿತ್ತು ಮತ್ತು ವಿದ್ಯಾರ್ಥಿಗಳು, ಪೋಷಕರು ಹಾಗೂ ವೀಕ್ಷಕರ ಗಮನ ಸೆಳೆಯಿತು.