ಮೈಸೂರಿನ ಅಂಗಡಿಗಳಲ್ಲಿ ಸರಣಿ ಕಳವು: ಅಕ್ಕಿ ಕದ್ದು, ಹಣಕ್ಕೆ ಹುಡುಕಾಡಿದ ಖದೀಮರು

ಮೈಸೂರು: ಅಂಗಡಿ ಮಳಿಗೆಗಳ ರೋಲಿಂಗ್ ಶೆಟರ್‌ಗಳನ್ನು ಮೀಟಿ ಸರಣಿ ಕಳ್ಳತನ ಮಾಡಿರುವ ಘಟನೆಗಳು ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿವೆ. ಒಂದೇ ತಂಡ ಮೂರು ಕಡೆ ಕಳ್ಳತನ ಮಾಡಲು ಯತ್ನಿಸಿದ್ದು, ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಮೈಸೂರು ಹೊರವಲಯದ ಬಂಡಿಪಾಳ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿರುವ ಎರಡು ಅಂಗಡಿಗಳನ್ನು ಕಬ್ಬಿಣದ ಸಲಾಕೆಯಿಂದ ಮೀಟಿ ತೆರೆಯಲಾಗಿದೆ. ಗೂಡ್ಸ್ ವಾಹನದಲ್ಲಿ ಬಂದ ನಾಲ್ವರು ಖದೀಮರು ಕೃತ್ಯ ನಡೆಸಿದ್ದಾರೆ. ಒಂದು ಅಂಗಡಿಯಲ್ಲಿ ಶೋಧ ನಡೆಸಿ ಹಣ ದೊರೆಯದ ಪರಿಣಾಮ ಅಕ್ಕಿ ಮೂಟೆಗಳನ್ನು ಹೊತ್ತೊಯ್ದಿದ್ದಾರೆ. ಪಕ್ಕದ ಅಂಗಡಿಯಲ್ಲಿ ವಿಫಲ ಯತ್ನ ನಡೆದಿದೆ. ಬಾಗಿಲು ಮೀಟಿದ್ದರೂ ಒಳಗೆ ಪ್ರವೇಶಿಸಲು ಸಾಧ್ಯವಾಗಿಲ್ಲ.
ತಾಜ್ ಎಂಟರ್ ಪ್ರೈಸಸ್‌ನಲ್ಲಿ ಸಾಕಷ್ಟು ಸಮಯ ಕಳೆದು ಹಣಕ್ಕಾಗಿ ಜಾಲಾಡಿದ್ದಾರೆ. ಹಣ ದೊರೆಯದ ಹಿನ್ನೆಲೆ ಅಕ್ಕಿ ಮೂಟೆಗಳನ್ನು ಹೊತ್ತೊಯ್ದಿದ್ದಾರೆ. ಹಣದ ಟೇಬಲ್ ಅನ್ನೇ ಕದ್ದೊಯುವ ಪ್ರಯತ್ನ ವಿಫಲವಾಗಿದೆ. ಪಕ್ಕದ ರಾಘವೇಂದ್ರ ಟ್ರೇಡಿಂಗ್ ಮಳಿಗೆಯ ರೋಲಿಂಗ್ ಶೆಟರ್ ಮೀಟಿದ್ದಾರೆ. ಆದರೆ ಒಳಗೆ ಪ್ರವೇಶಿಸಲು ಸಾಧ್ಯವಾಗಿಲ್ಲ. ಅಕ್ಕಿ ಮೂಟೆ ಸಾಗಿಸಲು ಬಳಸಿರುವ ಗೂಡ್ಸ್ ವಾಹನ ಸಹ ಕಳುವು ಮಾಡಿದ್ದಾರೆಂದು ಹೇಳಲಾಗಿದೆ. ಖದೀಮರ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಗಡೂರಿನ ಬಾರ್‌ನಲ್ಲಿ ಕಳವು
ನಂಜನಗೂಡು:ನಂಜನಗೂಡು ತಾಲೂಕು ತಗಡೂರು ಗ್ರಾಮದ ವೈನ್ ಸ್ಟೋರ್‌ನಲ್ಲಿ ಕಳವು ಮಾಡಲಾಗಿದೆ. ಕಬ್ಬಿಣದ ರಾಡ್‌ನಿಂದ ರೋಲಿಂಗ್ ಶೆಟರ್ ತೆರೆದಿರುವ ಮೂವರು ಖದೀಮರು, ಬಾರ್‌ನಲ್ಲಿದ್ದ ಹಣ ಕಳವು ಮಾಡಿದ್ದಾರೆ. ಗುರುವಾರ ರಾತ್ರಿ 10:30ರ ಸುಮಾರಿನಲ್ಲಿ ಸಂತೋಷ್ ವೈನ್ಸ್ ಸ್ಟೋರ್‌ನಲ್ಲಿ ಕಳ್ಳತನ ನಡೆದಿದ್ದು, ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. ಈ ಸಂಬಂಧ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.