ಸಿದ್ದಾಪುರ:ಹುತ್ತರಿ ಹಬ್ಬದಂದು ಬೇರೊಬ್ಬರಿಗೆ ಸೇರಿದ ಬಂದೂಕನ್ನು ಪಡೆದುಕೊಂಡು ಪಾದಚಾರಿಗಳ ಮೇಲೆ ಗುಂಡು ಹಾರಿಸಿದ ವ್ಯಕ್ತಿಯ ಬಂಧನ

ಸಿದ್ದಾಪುರ:ಹುತ್ತರಿ ಹಬ್ಬದಂದು ಬೇರೊಬ್ಬರಿಗೆ ಸೇರಿದ ಬಂದೂಕನ್ನು ಪಡೆದುಕೊಂಡು ಪಾದಚಾರಿಗಳ ಮೇಲೆ ಗುಂಡು ಹಾರಿಸಿದ ವ್ಯಕ್ತಿಯ ಬಂಧನ
ಸಾಂದರ್ಭಿಕ ಚಿತ್ರ

ಸಿದ್ದಾಪುರ; ಪಾದಚಾರಿಗಳ ಮೇಲೆ ಆಕಸ್ಮಿಕವಾಗಿ ಬಂದೂಕಿನ ಗುಂಡು ತಗುಲಿದ ಪ್ರಕರಣಕ್ಕೆ ಸಂಬಧಿಸಿದಂತೆ ಆರೋಪಿಯೊಬ್ಬನನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ಅಭ್ಯತ್‌ಮಂಗಲ ಗ್ರಾಮದ ನಿವಾಸಿ ಶಶಿ (47) ಬಂಧಿತ ಆರೋಪಿ.

 ಡಿ.4ರಂದು ಹುತ್ತರಿ ಹಬ್ಬದ ದಿನದಂದು ರಾತ್ರಿ 7 ಗಂಟೆ ಸುಮಾರಿಗೆ ಅತ್ತಿಮಂಗಲ ಸಮೀಪದ ಸಂಪಿಗೆಕೊಲ್ಲಿಯ ಖಾಸಗಿ ತೋಟದ ಲೈನ್‌ಮನೆ ನಿವಾಸಿ ಸತೀಶ್ ಹಾಗೂ ಗುಡ್ಡೆಹೊಸೂರಿನ ಮಿಟ್ಟು ಹಾಗೂ ಮತ್ತೊಬ್ಬರು ಅತ್ತಿಮಂಗಲದಿಂದ ಮುಖ್ಯರಸ್ತೆಯ ಮೂಲಕ ರಾತ್ರಿ ಅಂಗಡಿಗೆಂದು ತೆರಳುತ್ತಿದ್ದ ಸಂದರ್ಭ ತೋಟದ ಒಳಗಿನಿಂದ ಬಂದೂಕಿನಿಂದ ಗುಂಡು ಸಿಡಿದ ಶಬ್ದ ಕೇಳಿಬಂದಿದ್ದು, ಈ ವೇಳೆ ಸತೀಶ್ ಹಾಗೂ ಮಿಟ್ಟುವಿನ ದೇಹದ ಮೇಲೆ ಗುಂಡಿನ ಚೂರುಗಳು ತಗುಲಿ ಕುಸಿದು ಬಿದ್ದಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ತನಿಖೆ ಕೈಗೊಂಡಾಗ ಅಭ್ಯತ್‌ಮಂಗಲ ಗ್ರಾಮದ ಕಾಫಿ ತೋಟದಲ್ಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿರುವ ಶಶಿ ಆರೋಪಿ ಎಂದು ತಿಳಿದು ಬಂದಿದೆ. ಹುತ್ತರಿ ಹಬ್ಬದಂದು ಬೇರೊಬ್ಬರಿಗೆ ಸೇರಿದ ಬಂದೂಕನ್ನು ಪಡೆದುಕೊಂಡು ಗುಂಡು ಹಾರಿಸಿದ ಸಂದರ್ಭ ಘಟನೆ ಸಂಭವಿಸಿದೆ ಎಂದು ತನಿಖೆಯಿಂದ ಗೊತ್ತಾಗಿದೆ. ಆರೋಪಿಯಿಂದ ಕೋವಿಯನ್ನು ವಶಪಡಿಸಿಕೊಳ್ಳಲಾಗಿದೆ.