ದೇಗುಲಕ್ಕೆ ತೆರಳಿದ್ದ ಬಾಲಕ ಮರಳಿ ಬರಲೇ ಇಲ್ಲ!! ಮಂಗಳೂರಿನ 15 ವರ್ಷದ ಬಾಲಕನಿಗೆ ಆಗಿದ್ದೇನು‌ ಗೊತ್ತಾ!

ದೇಗುಲಕ್ಕೆ ತೆರಳಿದ್ದ ಬಾಲಕ  ಮರಳಿ ಬರಲೇ ಇಲ್ಲ!!  ಮಂಗಳೂರಿನ 15 ವರ್ಷದ ಬಾಲಕನಿಗೆ ಆಗಿದ್ದೇನು‌ ಗೊತ್ತಾ!
Photo credit: TV09(ಮೃತ ಬಾಲಕ)

ಮಂಗಳೂರು, ಜ. 14: ಧನುರ್ಮಾಸದ ಹಿನ್ನೆಲೆ ದೇಗುಲಕ್ಕೆ ತೆರಳಿದ್ದ 15 ವರ್ಷದ ಬಾಲಕನೊಬ್ಬ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮ ಸಮೀಪದ ಕೆರೆಯಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಆರಂಭದಲ್ಲಿ ಪ್ರಾಣಿ ದಾಳಿ ಶಂಕಿಸಲಾಗಿದ್ದರೂ, ತಲೆಯ ಮೇಲಿನ ಗಾಯಗಳು ಕೊಲೆ ಶಂಕೆ ವ್ಯಕ್ತವಾಗಿದೆ.

ಮೃತ ಬಾಲಕ ಸುಮಂತ್ (15) ಕುವೆಟ್ಟು ಗ್ರಾಮದ ನಿವಾಸಿ ಸುಬ್ರಹ್ಮಣ್ಯ ನಾಯಕ್ ಅವರ ಪುತ್ರ. ಧನುರ್ಮಾಸದ ಸಂದರ್ಭದಲ್ಲಿ ನಿತ್ಯ ಮುಂಜಾನೆ ದೇವಸ್ಥಾನಕ್ಕೆ ತೆರಳುತ್ತಿದ್ದ ಬಾಲಕ, ಮಂಗಳವಾರವೂ ಬೆಳಗ್ಗೆ ಸುಮಾರು 4 ಗಂಟೆಗೆ ಮನೆಯಿಂದ ಹೊರಟಿದ್ದ. ಆದರೆ ಬೆಳಗ್ಗೆ 6.30ರ ಸುಮಾರಿಗೆ ದೇವಸ್ಥಾನಕ್ಕೆ ಬಂದಿಲ್ಲ ಎಂಬ ಮಾಹಿತಿ ಸ್ನೇಹಿತರಿಂದ ತಿಳಿದು ಬಂದ ನಂತರ ಕುಟುಂಬಸ್ಥರು ಆತಂಕಗೊಂಡರು.

ಮನೆಯಿಂದ ನಡೆದುಕೊಂಡು ರಸ್ತೆ ಸಮೀಪ ನಿಲ್ಲಿಸಿದ್ದ ಸೈಕಲ್ ಮೂಲಕ ಬಾಲಕ ದೇವಸ್ಥಾನಕ್ಕೆ ಹೋಗುತ್ತಿದ್ದ. ದೇವಸ್ಥಾನದ ಬಳಿ ಸೈಕಲ್ ನಿಂತಿರುವುದು ಕಂಡುಬಂದಿದ್ದು, ಅನುಮಾನಗೊಂಡು ಸುತ್ತಮುತ್ತ ಹುಡುಕಾಟ ನಡೆಸಲಾಯಿತು. ಈ ವೇಳೆ ಕಾಲುದಾರಿಯಲ್ಲಿ ರಕ್ತದ ಹನಿಗಳು ಪತ್ತೆಯಾಗಿದ್ದು, ಅವನ್ನು ಹಿಂಬಾಲಿಸಿದಾಗ ಸಮೀಪದ ಕೆರೆ ಪಕ್ಕದ ಕಲ್ಲಿನ ಮೇಲೆ ರಕ್ತದ ಗುರುತುಗಳು ಕಂಡುಬಂದವು.

ತಕ್ಷಣ ಅಗ್ನಿಶಾಮಕ ದಳದ ಸಹಾಯದಿಂದ ಕೆರೆಯಲ್ಲಿ ಶೋಧ ಕಾರ್ಯ ನಡೆಸಿದಾಗ ಬಾಲಕನ ಮೃತದೇಹ ಪತ್ತೆಯಾಯಿತು. ಆರಂಭದಲ್ಲಿ ನಾಯಿ ಅಥವಾ ಚಿರತೆ ದಾಳಿಯಿಂದ ಬಾಲಕ ಓಡಿ ಹೋಗಿ ಕೆರೆಗೆ ಬಿದ್ದಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು. ಆದರೆ ಬಾಲಕನ ತಲೆಯ ಮೇಲ್ಭಾಗದಲ್ಲಿ ಮಚ್ಚಿನಿಂದ ಹೊಡೆದಂತಿರುವ ಎರಡು ಗಾಯಗಳು ಕಂಡುಬಂದಿರುವುದರಿಂದ, ಇದು ಕೊಲೆ ಆಗಿರುವ ಸಾಧ್ಯತೆಯತ್ತ ತನಿಖೆ ಮುಂದುವರಿದಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳದ ಸಹಾಯದಿಂದಲೂ ತಪಾಸಣೆ ನಡೆದಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ. ಪ್ರಕರಣದ ಕುರಿತು ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.