ಗಣೇಶ ಮೆರವಣಿಗೆ ವೇಳೆ‌ ನುಗ್ಗಿದ ಟ್ರಕ್: ಮೃತರ ಸಂಖ್ಯೆ 08ಕ್ಕೇರಿಕೆ

ಗಣೇಶ ಮೆರವಣಿಗೆ ವೇಳೆ‌ ನುಗ್ಗಿದ ಟ್ರಕ್: ಮೃತರ ಸಂಖ್ಯೆ 08ಕ್ಕೇರಿಕೆ

ಹಾಸನ: ತಾಲೂಕಿನ ಮೊಸಳೆ ಹೊಸಹಳ್ಳಿ ಗ್ರಾಮದಲ್ಲಿ ಗಣಪತಿ ಮೆರವಣಿಗೆ ವೇಳೆ ಮರಣದ ಆಕ್ರಂದನ ಮರ್ಮರಿಸಿದೆ. ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲು ಗ್ರಾಮದ ನೂರಾರು ಮಂದಿ ರಾಷ್ಟ್ರೀಯ ಹೆದ್ದಾರಿ ೩೭೩ ರ ಒಂದು ಬದಿಯ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಬೃಹತ್ ಟ್ರಕ್‌ವೊಂದು ಹರಿದು ಸಂಭವಿಸಿದ ಭೀಕರ ಅಪಘಾತದಲ್ಲಿ 8ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಐವರು ಸ್ಥಳದಲ್ಲೇ ಅಸು ನೀಗಿದರೆ ಉಳಿದ ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ದುರಂತದಲ್ಲಿ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಗಾಯಾಳುಗಳನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಹಾಸನದ ಹಿಮ್ಸ್ ಆಸ್ಪತ್ರೆ ಮತ್ತು ವಿವಿಧ ಖಾಸಗಿ ಆಸ್ಪತ್ರೆಗಳಿಗೆ ರವಾನೆ ಮಾಡಲಾಗಿದೆ. ಹಿಮ್ಸ್ ಆಸ್ಪತ್ರೆಗೆ ಸ್ಥಳೀಯ ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್, ಎಂಎಲ್‌ಸಿ ಡಾ.ಸೂರಜ್ ರೇವಣ್ಣ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಡರಾತ್ರಿ ಆಸ್ಪತ್ರೆಗೆ ಭೇಟಿ ನೀಡಿದ್ದರು.

ನಡೆದಿದ್ದೇನು:

ಶುಕ್ರವಾರ ರಾತ್ರಿ ಗಣೇಶ ವಿಸರ್ಜನೆ ಮೆರವಣಿಗೆ ನಡೆಯುತ್ತಿತ್ತು. ಸಾವಿರಾರು ಮಂದಿ ಭಾಗಿಯಾಗಿದ್ದರು. ಡಿಜೆ ಹಾಡಿಗೆ ಎಲ್ಲರೂ ಕುಣಿದು ಕುಪ್ಪಳಿಸುತ್ತಿದ್ದರು. ಮಕ್ಕಳು-ಯುವಕರ ಸಂತಸಕ್ಕೆ ಪಾರವೇ ಇರಲಿಲ್ಲ. ರಾತ್ರಿ ೭.೪೫ ರಿಂದ ೮ ಗಂಟೆ ಸುಮಾರಿಗೆ ಹಾಸನದಿಂದ ಹೊಳೆನರಸೀಪುರ ಕಡೆಗೆ ವೇಗವಾಗಿ ಬಂದ ಟ್ರಕ್, ಎಡಬದಿಯ ರಸ್ತೆ ಡಿವೈಡರ್ ದಾಟಿ, ಇನ್ನೊಂದು ಬದಿಯ ರಸ್ತೆಯಲ್ಲಿ ಗಣೇಶನ ಹಿಂದೆ ಸಾಗಿ ಬರುತ್ತಿದ್ದವರ ಮೇಲೆ ನುಗ್ಗಿ ಹಲವು ಮಂದಿಯನ್ನು ಬಲಿ ಪಡೆದು, ೨೫ಕ್ಕೂ ಹೆಚ್ಚು ಮಂದಿಯ ನೋವು, ಕಣ್ಣೀರಿಗೆ ಕಾರಣವಾಗಿದೆ. ತಮ್ಮ ಕಡೆಯವರನ್ನು ಕಳೆದುಕೊಂಡವರು ಹಾಗೂ ಗಾಯಾಳುಗಳ ಕಡೆಯವರ ಆಕ್ರಂದನ ಮುಗಿಲು ಮುಟ್ಟಿತ್ತು. ಎಲ್ಲರೂ ಸಂಭ್ರಮದಲ್ಲಿದ್ದ ವಾತಾವರಣ ಕೆಲವೇ ಕ್ಷಣಗಳಲ್ಲಿ ಕಣ್ಣೀರಿನ ಕಣವಾಯಿತು. ಸುದ್ದಿ ತಿಳಿದ ಕೂಡಲೇ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಸಂಸದ ಶ್ರೇಯಸ್ ಪಟೇಲ್, ಜಿಲ್ಲಾಧಿಕಾರಿ ಲತಾಕುಮಾರಿ ಕೆ.ಎಸ್., ಎಸ್ಪಿ ಮೊಹಮ್ಮದ್ ಸುಜೀತಾ ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಟ್ರಕ್ ವೇಗವಾಗಿ ಮೈಸೂರು ಕಡೆಗೆ ಹೋಗುತ್ತಿದ್ದ ವೇಳೆ ಎದುರಿಗೆ ಬೈಕೊಂದು ಅಡ್ಡ ಬಂದಿತು ಎನ್ನಲಾಗಿದೆ. ಅದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಟ್ರಕ್ ಚಾಲಕ, ಬಲಕ್ಕೆ ತಿರುಗಿಸಿದಾಗ ದೊಡ್ಡ ವಾಹನ ಮೆರವಣಿಗೆಯತ್ತ ಯಮ ಸ್ವರೂಪಿಯಾಗಿ ನುಗ್ಗಿತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮತ್ತೆ ಕೆಲವರು ಚಾಲಕನ ನಿರ್ಲಕ್ಷ್ಯವೂ ಸಾವು-ನೋವಿಗೆ ಕಾರಣ ಎಂದು ದೂರಿದ್ದಾರೆ.

ಪೊಲೀಸ್ ವೈಫಲ್ಯ ಕಾರಣ:

ದುರಂತಕ್ಕೆ ಪೊಲೀಸ್ ವೈಫಲ್ಯ ಕಾರಣ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆರೋಪಿಸಿದರು. ಘಟನಾ ಸ್ಥಳಕ್ಕೆ ಆಗಮಿಸಿ ಸ್ಥಳೀಯರಿಂದ ಮಾಹಿತಿ ಪಡೆದು ಮಾತನಾಡಿದ ಅವರು, ಮೆರವಣಿಗೆ ಹಿನ್ನೆಲೆಯಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ಮುನ್ನೆಚ್ಚರಿಕೆ ವಹಿಸಬೇಕಿತ್ತು. ಎರಡೂ ಕಡೆ ಚಲಿಸುವ ವಾಹನಗಳಿಗೆ ಸೂಚನೆ ಕೊಡಬೇಕಿತ್ತು. ಅದಾವುದನ್ನೂ ಮಾಡದೇ ಇರುವುದರಿಂದ ದುರಂತ ಸಂಭವಿಸಿದೆ. ರಾಜ್ಯ ಸರ್ಕಾರ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಮೃತರ ಕುಟುಂಬಕ್ಕೆ ೧೦ ರಿಂದ ೨೦ ಪರಿಹಾರ ಕೊಡಬೇಕು. ಗಾಯಾಗಳು ಚಿಕಿತ್ಸಾ ವೆಚ್ಚವನ್ನು ಸಂಪೂರ್ಣವಾಗಿ ಭರಿಸಬೇಕು ಎಂದು ಒತ್ತಾಯಿಸಿದರು.

ಈ ರೀತಿಯ ದುರಂತ ನಡೆಯಬಾರದಿತ್ತು. ಇದಕ್ಕೆ ಕಾರಣ ಏನು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದಾರೆ. ತನಿಖೆ ನಡೆಸಲು ಎಸ್ಪಿ ಅವರಿಗೆ ಸೂಚನೆ ನೀಡಿದ್ದೇನೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಜನರು ಸಹಕರಿಸಬೇಕು. -ಶ್ರೇಯಸ್ ಪಟೇಲ್, ಸಂಸದ