ಪ್ರೇಮಿಗಳಿಗೆ ಬೆಂಬಲ ನೀಡಿದರೆಂದು ಇಬ್ಬರನ್ನು ಇರಿದು ಹತ್ಯೆ ; ಐವರ ಬಂಧನ
ಶಿವಮೊಗ್ಗ: ಪ್ರೇಮಿಗಳಿಬ್ಬರಿಗೆ ಸಹಕಾರ ನೀಡಿದರೆಂದು ತಪ್ಪು ಅನುಮಾನದಿಂದ ಚಾಕುವಿನಿಂದ ಇರಿದು ಇಬ್ಬರನ್ನು ಹತ್ಯೆ ಮಾಡಿದ ಘಟನೆ ಭದ್ರಾವತಿಯ ಜೈ ಭೀಮ್ ನಗರದಲ್ಲಿ ತಡರಾತ್ರಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಹತ್ಯೆಯಾದವರು ಜೈ ಭೀಮ್ ನಗರದ ಕಿರಣ್ (25) ಹಾಗೂ ಪೌರ ಕಾರ್ಮಿಕ ಮಂಜುನಾಥ್ (45). ಆರೋಪಿಗಳಾದ ಸಂಜಯ್, ಶಶಿ, ವೆಂಕಟೇಶ್, ಭರತ್ ಮತ್ತು ಸುರೇಶ್ ಅವರನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆ:
ಹಳೆನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರೇಮಿಗಳಿಬ್ಬರು ಕೆಲ ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದರು. ಈ ಸಂಬಂಧ ಹುಡುಗ ಹಾಗೂ ಹುಡುಗಿಯ ಕುಟುಂಬದವರು ಠಾಣೆಗೆ ದೂರು ನೀಡಿದ್ದರು. ನಂತರ ಪ್ರೇಮಿಗಳಿಬ್ಬರು ಜೀವಕ್ಕೆ ಅಪಾಯವಿದೆ ಎಂದು ಹೇಳಿ ಠಾಣೆಗೆ ಹಾಜರಾದರು.
ಈ ವೇಳೆ ಕಿರಣ್ ಹಾಗೂ ಮಂಜುನಾಥ್ ಸೇರಿದಂತೆ ಕೆಲವರು ಠಾಣೆಗೆ ಬಂದು ಪ್ರೇಮಿಗಳೊಂದಿಗೆ ಮಾತನಾಡುತ್ತಿದ್ದಾಗ, ಹುಡುಗಿಯ ಸಹೋದರ ಗಲಾಟೆ ನಡೆಸಿ, ತಮ್ಮ ತಂಗಿಯ ಪ್ರೇಮಕ್ಕೆ ಇವರು ಬೆಂಬಲ ನೀಡಿದ್ದಾರೆ ಎಂದು ಆರೋಪಿಸಿದನು. ಪರಿಸ್ಥಿತಿಯನ್ನು ಪೊಲೀಸರು ಮತ್ತು ಸ್ಥಳದಲ್ಲಿದ್ದವರು ಶಮನಗೊಳಿಸಿ ಎಲ್ಲರನ್ನೂ ಮನೆಗೆ ಕಳುಹಿಸಿದ್ದರು.
ಆದರೆ ರಾತ್ರಿ ವೇಳೆ ಆರೋಪಿ ಕಿರಣ್ ಮತ್ತು ಮಂಜುನಾಥ್ ಮನೆ ಬಳಿ ಮತ್ತೆ ಗಲಾಟೆ ನಡೆಸಿದ್ದು, ಜಗಳ ತೀವ್ರಗೊಂಡ ಸಂದರ್ಭದಲ್ಲಿ ತಂದಿದ್ದ ಚಾಕುವಿನಿಂದ ಇಬ್ಬರ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡ ಮಂಜುನಾಥ್ ಸ್ಥಳದಲ್ಲೇ ಮೃತಪಟ್ಟರೆ, ಕಿರಣ್ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ.
ಪ್ರಕರಣ ಸಂಬಂಧ ಹಳೆನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಐವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಇನ್ನೂ ಕೆಲವರು ಭಾಗಿಯಾಗಿರುವ ಶಂಕೆ ಇದ್ದು, ಅವರನ್ನು ಪತ್ತೆಹಚ್ಚಲು ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.
