ಇಬ್ಬರು ಗಂಡಂದಿರ ಹೆಂಡತಿ ಪೊಲೀಸ್ ಕಾನ್ಸ್‌ಟೇಬಲ್ ಜತೆ ಪರಾರಿ!
ಬೆಂಗಳೂರು, ಡಿ.13: 12 ವರ್ಷದ ಮಗನಿರುವ ಗೃಹಿಣಿಯೊಬ್ಬಳು ಪೊಲೀಸ್ ಕಾನ್ಸ್‌ಟೇಬಲ್ ಜತೆ ಪರಾರಿಯಾಗಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಮಹಿಳೆ ಮನೆಯಿಂದ 1.80 ಲಕ್ಷ ರೂ. ನಗದು ಹಾಗೂ ಸುಮಾರು 160 ಗ್ರಾಂ ಚಿನ್ನಾಭರಣವನ್ನು ತೆಗೆದುಕೊಂಡು ಹೋಗಿದ್ದಾಳೆ ಎಂದು ಪತಿ ದೂರು ನೀಡಿದ್ದಾರೆ. ಪ್ರಕರಣದ ಹಿನ್ನೆಲೆಯಲ್ಲಿ ಸಂಬಂಧಿಸಿದ ಪೊಲೀಸ್ ಕಾನ್ಸ್‌ಟೇಬಲ್‌ರನ್ನು ಅಮಾನತುಗೊಳಿಸಲಾಗಿದೆ.
ಮೈಸೂರು ಮೂಲದ ಮೋನಿಕಾ ಎಂಬ ಮಹಿಳೆ ಉತ್ತರ ಕರ್ನಾಟಕ ಮೂಲದ ಪೊಲೀಸ್ ಕಾನ್ಸ್‌ಟೇಬಲ್ ರಾಘವೇಂದ್ರನೊಂದಿಗೆ ಪರಾರಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಮೋನಿಕಾ ಈ ಹಿಂದೆ ಎರಡು ಮದುವೆಯಾಗಿದ್ದು, ಎರಡನೇ ಗಂಡನೊಂದಿಗೆ ಕೆಲಕಾಲ ಸಂಸಾರ ನಡೆಸಿದ ಬಳಿಕ ಮನೆ ಬಿಟ್ಟು ತೆರಳಿದ್ದಾಳೆ ಎನ್ನಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಜೂನ್ ತಿಂಗಳಲ್ಲಿ ಎಚ್‌ಎಸ್‌ಆರ್ ಠಾಣೆಗೆ ಸಂಬಂಧಿಸಿದ ಹೊಯ್ಸಳ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದ ರಾಘವೇಂದ್ರ ಮತ್ತು ಮೋನಿಕಾ ಸಾಮಾಜಿಕ ಜಾಲತಾಣದ ಮೂಲಕ ಪರಿಚಯಗೊಂಡಿದ್ದರು. ಬಳಿಕ ದೂರವಾಣಿ ಸಂಪರ್ಕ ಬೆಳೆದು ಇಬ್ಬರು ಹತ್ತಿರವಾಗಿದ್ದಾರೆ ಎಂದು ಹೇಳಲಾಗಿದೆ. ಕೆಲವು ತಿಂಗಳ ನಂತರ ಮೋನಿಕಾ ತನ್ನ ಎರಡನೇ ಗಂಡನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನ್ನ ಜೀವನವನ್ನು ತಾನು ರೂಪಿಸಿಕೊಳ್ಳಲು ಹೊರಡುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ ಎನ್ನಲಾಗಿದೆ.
ಈ ದೂರಿನ ಹಿನ್ನೆಲೆಯಲ್ಲಿ ಚಂದ್ರಲೇಔಟ್ ಪೊಲೀಸರು ಗಂಡನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು. ಅದೇ ಸಮಯದಲ್ಲಿ ಮೋನಿಕಾ ಮನೆಯಿಂದ ಚಿನ್ನಾಭರಣ ಹಾಗೂ ನಗದು ತೆಗೆದುಕೊಂಡು ತೆರಳಿದ್ದಾಳೆ ಎಂದು ಆರೋಪಿಸಲಾಗಿದೆ. ಗಂಡನು ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದರೂ ಮಹಿಳೆ ಪ್ರತಿಕ್ರಿಯಿಸದ ಕಾರಣ ಅನುಮಾನಗೊಂಡು ಚಂದ್ರಲೇಔಟ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ತನಿಖೆಯ ವೇಳೆ ಮೋನಿಕಾ ಪೊಲೀಸ್ ಕಾನ್ಸ್‌ಟೇಬಲ್ ರಾಘವೇಂದ್ರನೊಂದಿಗೆ ಪರಾರಿಯಾಗಿರುವುದು ದೃಢಪಟ್ಟಿದ್ದು, ಹಿರಿಯ ಅಧಿಕಾರಿಗಳು ರಾಘವೇಂದ್ರನನ್ನು ತಕ್ಷಣವೇ ಅಮಾನತುಗೊಳಿಸಿದ್ದಾರೆ. ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
