ಉಸಿರಾಟದ ಸಮಸ್ಯೆಯಿಂದ ಯುವ ಬಾಡಿ ಬಿಲ್ಡರ್ ಸಾವು

ಸಕಲೇಶಪುರ: ತಾಲೂಕಿನ ಬೆಳಗೋಡು ಗ್ರಾಮದ ಖ್ಯಾತ ಬಾಡಿ ಬಿಲ್ಡರ್ ಜಿಮ್ ಸೋಮ ಶ್ವಾಸಕೋಶದ ಸೋಂಕಿನಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ ನಿಧನರಾಗಿದ್ದಾರೆ. ಬಾಡಿ ಬಿಲ್ಡರ್ ಸೋಮಶೇಖರ್ (30) ಜಿಮ್ ಸೋಮ ಮೃತರು. 6.5 ಅಡಿ ಎತ್ತರ ಮತ್ತು 110 ಕೆ.ಜಿ. ತೂಕದ ದೃಢಕಾಯದ ಸೋಮಶೇಖರ್ ಅವರು ಬಾಡಿಬಿಲ್ಡಿಂಗ್ ಕ್ಷೇತ್ರದಲ್ಲಿ ಹಲವು ಟೈಟಲ್‌ಗಳನ್ನು ಗಳಿಸಿದ್ದರು. ರಾಷ್ಟ್ರಮಟ್ಟದ ದೇಹದಾರ್ಢ್ಯ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದ ಅವರು, ಕಳೆದ ಒಂದು ವಾರದಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಭಾನುವಾರ ಪೋಷಕರು ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು. ಸೋಮಶೇಖರ್ ಅವರ ಅಕಾಲಿಕ ನಿಧನಕ್ಕೆ ಸ್ನೇಹಿತರು, ಸಂಬಂಧಿಕರು ಮತ್ತು ಗ್ರಾಮಸ್ಥರು ಶೋಕ ವ್ಯಕ್ತಪಡಿಸಿದ್ದಾರೆ. ಅಂತಿಮ ಸಂಸ್ಕಾರ ಸೋಮವಾರ ಗ್ರಾಮದಲ್ಲಿ ನೆರವೇರಿತು.