ದಕ್ಷಿಣ ಕೊಡಗಿನಲ್ಲಿ ನಿರಂತರ ಕಾಡಾನೆಗಳ ಉಪಟಳ:ಮಾಯಮುಡಿಯಲ್ಲಿ ಅರಣ್ಯಾಧಿಕಾರಿಗಳು, ರೈತರು ಹಾಗೂ ಬೆಳೆಗಾರರ ಮಹತ್ವದ ಸಭೆ

ದಕ್ಷಿಣ ಕೊಡಗಿನಲ್ಲಿ ನಿರಂತರ ಕಾಡಾನೆಗಳ ಉಪಟಳ:ಮಾಯಮುಡಿಯಲ್ಲಿ ಅರಣ್ಯಾಧಿಕಾರಿಗಳು, ರೈತರು ಹಾಗೂ ಬೆಳೆಗಾರರ ಮಹತ್ವದ ಸಭೆ

ಗೋಣಿಕೊಪ್ಪ:ಕಾಡಾನೆಗಳ ಹಾವಳಿ ನಿಯಂತ್ರಣ ಕುರಿತು ಗೋಣಿಕೊಪ್ಪದ ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಸಣ್ಣುವಂಡ ರಮೇಶ್ ಅವರ ಅಧ್ಯಕ್ಷತೆಯಲ್ಲಿ ಮಾಯಮುಡಿಯ ಕಮಟೆ ಈಶ್ವರ ದೇವಾಲಯದ ಆವರಣದಲ್ಲಿ ಅರಣ್ಯಾಧಿಕಾರಿಗಳು, ಸ್ಥಳೀಯ ರೈತರು ಹಾಗೂ ಬೆಳೆಗಾರರ ಸಮ್ಮುಖದಲ್ಲಿ ಮಹತ್ವದ ಸಭೆ ನಡೆಯಿತು. ದಕ್ಷಿಣ ಕೊಡಗಿನ ಮಾಯಮುಡಿ, ತಿತಿಮತಿ, ದೇವರಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆಗಳ ಉಪಟಳದಿಂದ ಬೇಸತ್ತ ಕಾಫಿ ಬೆಳೆಗಾರರು ಹಾಗೂ ರೈತರು ಕಾಡಾನೆ ಉಪಟಳ ಕುರಿತು ಅರಣ್ಯ ಇಲಾಖೆ ವಿರುದ್ದ ತೀವ್ರ ಆಕ್ರೋಷ ವ್ಯಕ್ತಪಡಿಸಿದರು. 

ಕಮಟೆ ಈಶ್ವರ ದೇವಸ್ಥಾನದ ಅಧ್ಯಕ್ಷ ಸಣ್ಣುವಂಡ ರಮೇಶ್ ಅವರು ಮಾತನಾಡಿ, ಕಾಡಾನೆ ಸಮಸ್ಯೆಗಳನ್ನು ಈ ಹಿಂದೆ ಹಲವು ಬಾರಿ ಲಿಖಿತ ರೂಪದಲ್ಲಿ ಅಧಿಕಾರಿಗಳಿಗೆ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಾಡಾನೆಗಳು ಕಾಫಿ ತೋಟದಲ್ಲಿ ಬೀಡು ಬಿಟ್ಟಿವೆ. ಇದರಿಂದ ಬೆಳೆಗಾರರು ಮತ್ತು ಕಾರ್ಮಿಕರು ಕಾಫಿ ತೋಟಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ರೈತರು ಭತ್ತದ ಗದ್ದೆಗಳಲ್ಲಿ ನಾಟಿ ಮಾಡಲು ಮುಂದಾಗುತ್ತಿಲ್ಲ. ಕಾಡಾನೆಯಿಂದ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ಗಮನ ಸೆಳೆದರು.

ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್.ಅರುಣ್ ಮಾಚಯ್ಯ ಅವರು ಮಾತನಾಡಿ, ಸರ್ಕಾರದ ವತಿಯಿಂದ ಅರಣ್ಯ ಇಲಾಖೆಗೆ ಕೋಟ್ಯಾಂತರ ಅನುದಾನ ಮಂಜೂರಾಗಿದ್ದರು ಅರಣ್ಯ ಇಲಾಖೆ ಅಳವಡಿಸುವ ಸೋಲಾರ್ ಬೇಲಿ ನಿರ್ವಹಣೆ ಇಲ್ಲದೆ ಪ್ರಯೋಜನಕ್ಕೆ ಬರುತ್ತಿಲ್ಲ. ಗ್ರಾಮದಲ್ಲಿರುವ 20ಕ್ಕೂ ಹೆಚ್ಚು ಆನೆಗಳನ್ನು ಸ್ಥಳಾಂತರ ಮಾಡುವುದೇ ಉತ್ತಮ. ಮರಪಾಲದ ಬಳಿ ಅರಣ್ಯಕ್ಕೆ ಹೋಗುವ ಜಾಗದಲ್ಲಿ ವಸತಿ ಗೃಹ ನಿರ್ಮಿಸಿ ಅಲ್ಲಿ ಸಿಬ್ಬಂದಿಗಳನ್ನು ನೇಮಕಗೊಳಿಸಿದಲ್ಲಿ ರಾತ್ರಿ ವೇಳೆ ಅರಣ್ಯದಿಂದ ಬರುವ ಕಾಡಾನೆಗಳನ್ನು ಅಲ್ಲಿಯೇ ನಿಯಂತ್ರಿಸಬಹುದು. ತಕ್ಷಣ ಈ ಭಾಗದಲ್ಲಿ ಪಹರೆ ಕಾರ್ಯ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲು ಸಲಹೆ ನೀಡಿದರು.

ಡಾ.ಚೆಪ್ಪುಡಿರ ಕುಶಾಲಪ್ಪ ಅವರು ಮಾತನಾಡಿ, ವೈಜ್ಞಾನಿಕ ರೀತಿಯಲ್ಲಿ ಕಾಡಾನೆಗಳನ್ನು ನಿಯಂತ್ರಿಸಲು ಇಲಾಖೆ ಕ್ರಮ ಕೈಗೊಳ್ಳಬೇಕು. ಗುಂಪಿನೊಂದಿಗೆ ಬರುವ ಕಾಡಾನೆಗಳು ಕೆಲ ದಿನಗಳ ನಂತರ ವಿವಿಧ ಗುಂಪುಗಳಾಗಿ ಬೇರೆ ಬೇರೆ ಕಡೆಗೆ ತೆರಳುತ್ತಿವೆ. ಇದರಿಂದ ಎಲ್ಲೆಡೆ ಸಮಸ್ಯೆ ಎದುರಾಗಿದೆ. ವೈಜ್ಞಾನಿಕ ರೀತಿಯಲ್ಲಿ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕೆಲಸ ಆಗಬೇಕು. ಇದರಿಂದ ಮಾತ್ರ ಸಮಸ್ಯೆಗೆ ಪರಿಹಾರ ಸಿಗಬಹುದು ಎಂದರು.

ಚೆಪ್ಪುಡಿರ ಕಾರ್ಯಪ್ಪ ಅವರು ಮಾತನಾಡಿ, ಇಲಾಖೆಯ ಹಿರಿಯ ಅಧಿಕಾರಿಗಳ ನಿರ್ವಹಣೆಯಲ್ಲಿ ನೂತನ ವ್ಯಾಟ್ಸಾಪ್ ಗ್ರೂಪ್ ರಚನೆಯಾಗಬೇಕು. ಅದರಲ್ಲಿ ಗ್ರಾಮಗಳ ಸದಸ್ಯರು ತಮ್ಮ ಭಾಗದಲ್ಲಿ ಕಾಡಾನೆಗಳಿಂದ ಆಗುವ ಸಮಸ್ಯೆಗಳನ್ನು ತಿಳಿಸಬಹುದು. ಹಿರಿಯ ಅಧಿಕಾರಿಗಳು ಈ ಬಗ್ಗೆ ಕುಳಿತಲ್ಲಿಯೇ ಸಮಸ್ಯೆಗಳನ್ನು ತಿಳಿದುಕೊಳ್ಳಬಹುದು. ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ನೂತನ ವ್ಯಾಟ್ಸಾಪ್ ಗ್ರೂಪ್ ರಚನೆ ಮಾಡಿ ಇಲ್ಲಿಯ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾನಂಡ ಪೃಥ್ಯು ಅವರು ಮಾತನಾಡಿ, ಕೆಲವು ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸದೆ ಇರುವುದರಿಂದ ಜನರು ಕಷ್ಟದಲ್ಲಿ ಸಿಲುಕಿದ್ದಾರೆ. ಬೇರೆ ಜಿಲ್ಲೆಗಳಲ್ಲಿ ಆನೆ ಕಂದಕಗಳು ಉತ್ತಮ ರೀತಿಯಲ್ಲಿವೆ. ನಮ್ಮ ಭಾಗದಲ್ಲಿ ನಿರಂತರವಾಗಿ ಸಮಸ್ಯೆಯಾಗುತ್ತಿದೆ ಎಂದು ತಮ್ಮ ಅಸಮಾಧಾನ ಹೊರಹಾಕಿದರು. 

ತಿತಿಮತಿ ವಲಯದ ಎಸಿಎಫ್ ಗೋಪಾಲ್ ಅವರು ಮಾತನಾಡಿ, ಈಗಾಗಲೇ ಕಾಡಾನೆಗಳ ನಿಯಂತ್ರಣಕ್ಕೆ ಹಲವೆಡೆ ರೈಲ್ವೆ ಬ್ಯಾರಿಕೇಡ್ ನಿರ್ಮಿಸಿರುವ ಜಾಗದಲ್ಲಿ ಕೆಲವು ಕಾಮಗಾರಿಗಳು ಪೂರ್ಣಗೊಳ್ಳದಿರುವುದರಿಂದ ಈ ಭಾಗದಿಂದ ಕಾಡಾನೆಗಳು ಗ್ರಾಮಕ್ಕೆ ಆಗಮಿಸುತ್ತಿವೆ. ಮುಂದುವರೆದ ಕಾಮಗಾರಿಗೆ ಸದ್ಯದಲ್ಲಿಯೇ ಚಾಲನೆ ದೊರೆಯಲಿದೆ. ಕಾಡಾನೆಗಳು ಬರುವ ಜಾಗವನ್ನು ಸೋಲಾರ್ ಬೇಲಿ, ಕಂದಕಗಳಿಂದ ನಿಯಂತ್ರಿಸುವ ಕಾರ್ಯಗಳು ನಡೆಯುತ್ತಿವೆ ಎಂದು ಸಭೆಗೆ ಮಾಹಿತಿ ನೀಡಿದರು.

ವನ್ಯಜೀವಿ ವಿಭಾಗದ ಆರ್‌ಎಫ್‌ಒ ದೇವರಾಜ್ ಅವರು ಮಾತನಾಡಿ, ಕೆಲವು ಭಾಗದಲ್ಲಿ ಕಂದಕ ನಿರ್ಮಾಣಗೊಂಡಿದ್ದರೂ ಮಣ್ಣಿನ ಸಮಸ್ಯೆಯಿಂದಾಗಿ ಅವುಗಳು ಕುಸಿದು ಬೀಳುತ್ತಿವೆ. ಸೋಲಾರ್ ಬೇಲಿಗಳ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು. 

ಸಭೆಯಲ್ಲಿ ಹಲವು ಹಿರಿಯ ರೈತರು ಹಾಗೂ ಬೆಳೆಗಾರರು ಕಾಡಾನೆಗಳ ಉಪಟಳದಿಂದ ತಮಗಾದ ನಷ್ಟವನ್ನು ಅಧಿಕಾರಿಗಳ ಮುಂದೆ ತೋಡಿಕೊಂಡರು. ಗ್ರಾಮಸ್ಥರು ಸಭೆಯಲ್ಲಿ ಕಾಡಾನೆ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದರು. ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಅವರು, ಅರಣ್ಯ ಇಲಾಖೆಯಲ್ಲಿ ಕೆಲವು ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ನಿರುತ್ಸಾಹದಿಂದ ಗ್ರಾಮದಲ್ಲಿ ಕಾಡಾನೆ ಸಮಸ್ಯೆ ಗಂಭೀರವಾಗಲು ಕಾರಣವಾಗಿದೆ. ಕೊಡಗು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದನೆ ನೀಡುತ್ತಿಲ್ಲ. ಈ ಬಗ್ಗೆ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ವಿವರ ನೀಡಲಾಗಿದೆ ಎಂದರು. ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಲು ನಿರ್ಲಕ್ಷ್ಯ ತೋರುವ ಯಾವುದೇ ಅಧಿಕಾರಿಗಳು ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸದೆ ತಮಗೆ ಬೇಕಾದ ಊರುಗಳಿಗೆ ವರ್ಗಾವಣೆ ತೆಗೆದುಕೊಳ್ಳಬಹುದು ಎಂದು ಅಧಿಕಾರಿಗಳ ವಿರುದ್ದ ಅಸಮಾಧಾನ ಹೊರಹಾಕಿದರು.

ಕಾಡಾನೆಗಳನ್ನು ಏಕ ಕಾಲದಲ್ಲಿ ಗ್ರಾಮದಿಂದ ಅರಣ್ಯಕ್ಕೆ ಅಟ್ಟುವುದು, ಹಿರಿಯ ಅರಣ್ಯಾಧಿಕಾರಿ ಹಾಗೂ ಕ್ಷೇತ್ರದ ಶಾಸಕರ ಸಮ್ಮುಖದಲ್ಲಿ ಸಭೆ ನಡೆಸುವುದು, ಕಾಡಾನೆಗಳು ಅರಣ್ಯದಿಂದ ಬರುವ ಕುಂಞರಾಮನಕಟ್ಟೆ ಬಳಿ ಇರುವ ಬ್ಯಾರಿಕೇಡ್ ಬಂದ್ ಮಾಡುವುದು, ಕೆಲವು ಭಾಗದಲ್ಲಿ ಗಸ್ತು ಹೆಚ್ಚಿಸುವ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ತಿತಿಮತಿ ವಲಯದ ಆರ್‌ಎಫ್‌ಒ ಗಂಗಾಧರ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

ವರದಿ: ಚೆಪ್ಪುಡಿರ ರೋಷನ್, ಪೊನ್ನಂಪೇಟೆ