ಕನ್ನಡ ಶಾಸ್ತ್ರೀಯ ಭಾಷೆ ಸ್ವಾಯತ್ತತೆ: ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ನೀಡಲು ಯದುವೀರ್ ಪತ್ರ: ಕೇಂದ್ರ ಶಿಕ್ಷಣ ಸಚಿವಾಲಯದ ಭಾಷಾ ಸಮಿತಿಗೆ ಪತ್ರ ಬರೆದ ಮೈಸೂರು-ಕೊಡಗು ಸಂಸದರು

ಮೈಸೂರು(COORGDAILY): ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾಗಿರುವ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿ ಈಗಾಗಲೇ 17 ವರ್ಷಗಳಾಗಿದೆ. ಮೈಸೂರಿನಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತ ಸ್ಥಾನಮಾನ ನೀಡಿ, ಅಭಿವೃದ್ಧಿಗೆ ಹೆಚ್ಚಿನ ಅನುದಾನ ಹಾಗೂ ಸವಲತ್ತುಗಳನ್ನು ಕಲ್ಪಿಸಬೇಕು ಎಂದು ಕೇಂದ್ರ ಶಿಕ್ಷಣ ಸಚಿವಾಲಯಕ್ಕೆ ಮೈಸೂರು-ಕೊಡಗು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮನವಿ ಮಾಡಿದ್ದಾರೆ.
ಈ ಸಂಬಂಧ ಸಚಿವಾಲಯಕ್ಕೆ ವಿವರವಾದ ಪತ್ರ ಬರೆದಿರುವ ಸಂಸದರು, ಭಾಷೆಯ ವಿಸ್ತಾರಕ್ಕೆ ಹಾಗೂ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನೆರವು ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.ಮೈಸೂರಿನಲ್ಲಿರುವ ಭಾರತೀಯ ಭಾಷಾ ಸಂಸ್ಥಾನದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರದಲ್ಲಿ ಓರ್ವ ಯೋಜನಾ ನಿರ್ದೇಶಕರು, 11 ಶೈಕ್ಷಣಿಕ ಸಿಬ್ಬಂದಿ, 8 ಜನ ಆಡಳಿತ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಕೇಂದ್ರದ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಹಲವಾರು ಪುಸ್ತಕ, ಕೃತಿಗಳನ್ನು ಪ್ರಕಟಿಸಲಾಗಿದೆ ಎಂದು ಸಂಸದರು ವಿವರಿಸಿದ್ದಾರೆ.
ಈ ಚಟುವಟಿಕೆ ಹೆಚ್ಚಬೇಕಾದರೆ ಸ್ವಾಯತ್ತತೆ ಹೊಂದುವುದು ಅತ್ಯವಶ್ಯ. ತಮಿಳು ಭಾಷೆಗೆ 2004ರಲ್ಲಿ ಶಾಸ್ತ್ರೀಯ ಸ್ಥಾನಮಾನ ದೊರಕಿ ನಾಲ್ಕು ವರ್ಷದಲ್ಲಿ ಅಂದರೆ 2008ರಲ್ಲಿ ಸ್ವಾಯತ್ತತೆ ನೀಡಲಾಯಿತು. ಆದರೆ ಕನ್ನಡ ಭಾಷೆಗೆ 17 ವರ್ಷವಾದರೂ ಸ್ವಾಯತ್ತ ಸ್ಥಾನಮಾನ ದೊರಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಸ್ವಾಯತ್ತ ಸ್ಥಾನಮಾನ ಸಿಗಬೇಕಾದರೆ ಅಧ್ಯಯನ ಕೇಂದ್ರಕ್ಕೆ ಸ್ವಂತ ಕಟ್ಟಡ ಇರಬೇಕಾಗುತ್ತದೆ. ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಈಗಾಗಲೇ ಪಂಪ್‌ಹೌಸ್ ಬಳಿ 4 ಎಕರೆ 2 ಗುಂಟೆ (ಬಸವಪೀಠದ ಎದುರು) ಜಾಗವನ್ನು ಗುರುತಿಸಿದೆ ಎಂದು ಯದುವೀರ್ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ.
ಕರ್ನಾಟಕ ಸರ್ಕಾರ ಕೂಡ 2020ರಲ್ಲಿ ಜಾಗ ನೀಡುವ ಕುರಿತು ಆದೇಶ ಹೊರಡಿಸಿದೆ. ಈ ನಿಟ್ಟಿನಲ್ಲಿ ಮುಂದಿನ ಕ್ರಮಗಳು ಜರುಗಬೇಕಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.ನಮ್ಮ ಕನ್ನಡ ಅಧ್ಯಯನ ಕೇಂದ್ರಕ್ಕೆ ಸ್ವಂತ ಕಟ್ಟಡ ಹೊಂದಲು ಕೇಂದ್ರ ಶಿಕ್ಷಣ ಸಚಿವಾಲಯ ಮತ್ತು ಉನ್ನತ ಶಿಕ್ಷಣ ಇಲಾಖೆಯು ಅನುದಾನ ಬಿಡುಗಡೆ ಮಾಡಬೇಕು. ಹೆಚ್ಚಿನ ಸೌಲಭ್ಯವನ್ನು ಒದಗಿಸಲು ಎಲ್ಲ ರೀತಿಯ ನೆರವು ನೀಡಬೇಕು ಎಂದು ಸಂಸದ ಯದುವೀರ್ ಒಡೆಯರ್ ಪತ್ರದ ಮೂಲಕ ಆಗ್ರಹಿಸಿದ್ದಾರೆ.