ದಕ್ಷಿಣ ಕೊಡಗಿನಲ್ಲಿ ಮತ್ತೆ ಹಸುವಿನ ಮೇಲೆ ಹುಲಿ ದಾಳಿ, ಎರಡು ಹಸು ಬಲಿ:, ರೈತ ಸಂಘದಿಂದ ಪ್ರತಿಭಟನೆ
ಪೊನ್ನಂಪೇಟೆ : ತಾಲೂಕಿನ ಹುದಿಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೈಸೊಡ್ಲೂರು ಗ್ರಾಮದ ಕಲ್ಲುಮೊಟ್ಟೆ ಎಂಬಲ್ಲಿ ಹೊಟ್ಟೆಂಗಡ ರತೀಶ್ ಎಂಬುವರ ಮೇಯಲು ಕಟ್ಟಿದ ಹಾಕಿದ್ದ ಹಸುವಿನ ಮೇಲೆ ಶುಕ್ರವಾರ ದಿನ ಸಂಜೆ 4 ಗಂಟೆ ಸಮಯದಲ್ಲಿ ಹುಲಿ ದಾಳಿ ಮಾಡಿ ಕೊಂದು ಹಾಕಿರುವ ಘಟನೆ ನಡೆದಿದೆ. ವಿಷಯ ತಿಳಿದ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು, ಘಟನಾ ಸ್ಥಳಕ್ಕೆ ಭೇಟಿ ನೀಡಿ ಹಸುವಿನ ಮಾಲೀಕರೊಂದಿಗೆ ಚರ್ಚಿಸಿ, ಶನಿವಾರ ಬೆಳಿಗ್ಗೆಯಂದ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಘಟನಾ ಸ್ಥಳಕ್ಕೆ ಆಗಮಿಸಿದ ರಾಜ್ಯ ವನ್ಯಜೀವಿ ಸಂರಕ್ಷಣಾ ಸಮಿತಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅವರನ್ನು ರೈತ ಸಂಘದ ಮುಖಂಡರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಹಸುವಿನ ಮಾಲೀಕರಿಗೆ ಕೂಡಲೆ ಸರಕಾರದಿಂದ ಅಗತ್ಯ ಪರಿಹಾರ ಕೊಡಿಸುವಂತೆ ಹಾಗೂ ಹುಲಿಯ ಚಲನವಲನಗಳನ್ನು ಕಂಡು ಹಿಡಿಯಲು ಸಿ.ಸಿ ಕ್ಯಾಮರಾ ಅಳವಡಿಕೆಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಪಟ್ಟು ಹಿಡಿದರು. ಈ ಸಂದರ್ಭ ರೈತ ಸಂಘದ ಮುಖಂಡರು, ಅರಣ್ಯ ಇಲಾಖೆಯ ಅಧಿಕಾರಿಗಳು ಹುಲಿ ದಾಳಿ ಮಾಡಿ ಕೊಂದು ಹಾಕಿರುವ ಹಸುವಿಗೆ ಬದಲಿ ಹಸುವನ್ನು ಕೂಡಲೇ ಕೊಡಿಸಬೇಕೆಂದು ಪಟ್ಟುಹಿಡಿದರು. ಅಲ್ಲದೆ ಇನ್ನು 5 ದಿನಗಳಲ್ಲಿ ಕಾರ್ಯಾಚರಣೆ ನಡೆಸಿ ಹುಲಿಯನ್ನು ಸೆರೆ ಹಿಡಿಯಬೇಕು ತಪ್ಪಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಈ ಸಂದರ್ಭ ಸಂಕೇತ್ ಪೂವಯ್ಯ ಅವರು, ರೈತರ ಮನವೊಲಿಸಿ, ಪ್ರತಿಭಟನೆಯನ್ನು ಕೈಬಿಡುವಂತೆ ಮನವೊಲಿಸಿದರು.
ಈ ಸಂದರ್ಭ ರಾಜ್ಯ ವನ್ಯಜೀವಿ ಸಂರಕ್ಷಣಾ ಸಮಿತಿ ಸದಸ್ಯರಾದ ಸಂಕೇತ್ ಪೂವಯ್ಯ ಅವರು ಮಾತನಾಡಿ, ಹಸುವಿನ ಮೇಲೆ ಹುಲಿ ದಾಳಿ ನಡೆಸಿಕೊಂಡು ಹಾಕಿರುವ ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯವರು ಸ್ಥಳದಲ್ಲಿ ಕ್ಯಾಮೆರಾ ಅಳವಡಿಸಿ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಕ್ಷೇತ್ರದ ಶಾಸಕರಾದ ಎ. ಎಸ್ ಪೊನ್ನಣ್ಣ ಅವರು ಎರಡು ಹುಲಿಗಳನ್ನು ಸೆರೆ ಹಿಡಿದು ಪುನರ್ವಸತಿ ಕಲ್ಪಿಸಲು ಅನುಮತಿ ದೊರಕಿಸಿದ್ದು ಅದರಂತೆ ಅರಣ್ಯ ಇಲಾಖೆ ವೈಜ್ಞಾನಿಕ ಕಾರ್ಯಾಚರಣೆ ನಡೆಸುತ್ತಿದ್ದು ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ಶ್ರೀಮಂಗಲ ಹೋಬಳಿ ಘಟಕದ ಅಧ್ಯಕ್ಷ ಚಟ್ಟಂಗಡ ಕಂಬ ಕಾರ್ಯಪ್ಪ ಅವರು ಮಾತನಾಡಿ, ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರವಾಗಿ ಹುಲಿ ದಾಳಿ ನಡೆಸುತ್ತಿದ್ದು, ಅರಣ್ಯ ಇಲಾಖೆಯಿಂದ ಯಾವುದೇ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಅರಣ್ಯ ಇಲಾಖೆಯವರು ಕೇವಲ ಆಶ್ವಾಸನೆ ನೀಡುವುದು ಮಾತ್ರವಾಗಿದೆ ಹೊರತು ಯಾವುದೇ ಶಾಶ್ವತ ಪರಿಹಾರ ಕೈಗೊಂಡಿಲ್ಲ. ಮುಂದಿನ 10 ದಿನಗಳಲ್ಲಿ ಹುಲಿಯನ್ನು ಕಾರ್ಯಾಚರಣೆ ನಡೆಸಿ, ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಎ ಸಿ ಎಫ್ ಗೋಪಾಲ್ ಅವರು ಮಾತನಾಡಿ, ಶುಕ್ರವಾರ ಸಂಜೆ ಸಮಯದಲ್ಲಿ ಬೆಳೂರು ಮತ್ತು ಹೈಸೊಡ್ಲೂರು ವ್ಯಾಪ್ತಿಯಲ್ಲಿ ಹುಲಿ ದಾಳಿ ಮಾಡಿ ಎರಡು ಹಸುಗಳನ್ನು ಕೊಂದು ಹಾಕಿದ್ದು, ಮಾಹಿತಿ ತಿಳಿದ ಮೇರೆಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಕ್ಯಾಮರಾ ಅಳವಡಿಸಿ ಹುಲಿಯ ಚಲನವಲನ ಪತ್ತೆ ಹಚ್ಚಿ ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಮಾಡಲಾಗುವುದು ಎಂದರು.
ಈ ಸಂದರ್ಭ ವಿರಾಜಪೇಟೆ ತಾಲೂಕು ರೈತ ಸಂಘದ ಅಧ್ಯಕ್ಷ ಬಾಚಿಮಾಡ ಭವಿ ಕುಮಾರ್, ಹುದಿಕೇರಿ ಹೋಬಳಿ ರೈತ ಸಂಘದ ಅಧ್ಯಕ್ಷ ಬಲ್ಯಮೀದೆರೀರ ಪ್ರಕಾಶ್, ಪೊನ್ನಂಪೇಟೆ ತಾಲೂಕು ಕಾಂಗ್ರೆಸ್ ವಲಯ ಅಧ್ಯಕ್ಷ ಮೀದೇರೀರ ನವೀನ್, ಚಂಗುಲoಡ ಸೂರಜ್, ಮಾದೀರ ಅಜಿತ್, ಮಂಡoಗಡ ಯೋಗೇಶ್, ವೀಟು, ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು , ಹೊಟ್ಟೆಂಗಡ ಕುಟುಂಬಸ್ಥರು ಹಾಗೂ ಗ್ರಾಮಸ್ಥರು, ಅರಣ್ಯಾಧಿಕಾರಿಗಳಾದ ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಬಿ. ಎಂ ಶಂಕರ್, ಉಪವಲಯ ಅರಣ್ಯಾಧಿಕಾರಿ ದಿವಾಕರ್, ನಾಗೇಶ್, ಪೊನ್ನಂಪೇಟೆ, ವಿರಾಜಪೇಟೆ, ತಿತಿಮತಿ, ಆರ್ ಆರ್ ಟಿ ಸಿಬ್ಬಂದಿಗಳು, ಹಾಗೂ ಆನೆ ಕಾರ್ಯ ಪಡೆಯ ಸಿಬ್ಬಂದಿಗಳು ಇದ್ದರು.
ವರದಿ:ಚಂಪಾ ಗಗನ, ಪೊನ್ನಂಪೇಟೆ.