2017ರ ಲೈಂಗಿಕ ದೌರ್ಜನ್ಯ ಪ್ರಕರಣ: ಮಲಯಾಳಂ ನಟ ದಿಲೀಪ್ ಖುಲಾಸೆ

2017ರ ಲೈಂಗಿಕ ದೌರ್ಜನ್ಯ ಪ್ರಕರಣ: ಮಲಯಾಳಂ ನಟ ದಿಲೀಪ್ ಖುಲಾಸೆ
Photo credit:The news minutes

ಕೊಚ್ಚಿ: ಮಲಯಾಳಂ ನಟಿಯೊಬ್ಬರ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯ ಮತ್ತು ಅಪಹರಣ ಪ್ರಕರಣದಲ್ಲಿ ನಟ ದಿಲೀಪ್ ಅವರನ್ನು ಕೇರಳ ನ್ಯಾಯಾಲಯ ಸೋಮವಾರ ಖುಲಾಸೆಗೊಳಿಸಿದೆ. ಎಂಟು ವರ್ಷಗಳ ಕಾಲ ವಿಚಾರಣೆ ನಡೆದ ಈ ಬಹುಚರ್ಚಿತ ಪ್ರಕರಣದಲ್ಲಿ, ಪಿತೂರಿ ಮತ್ತು ಸಾಕ್ಷ್ಯ ನಾಶಕ್ಕೆ ಸಹಾಯ ಮಾಡಿದರೆಂಬ ಆರೋಪಗಳನ್ನು ನ್ಯಾಯಾಲಯ ತಳ್ಳಿ ಹಾಕಿದೆ.

ಬೆಳಿಗ್ಗೆ 11 ಗಂಟೆಗೆ ತೀರ್ಪು ಪ್ರಕಟಿಸಿದ ಎರ್ನಾಕುಲಂ ಜಿಲ್ಲಾ ಮತ್ತು ಪ್ರಧಾನ ಸೆಷನ್ಸ್ ನ್ಯಾಯಾಧೀಶ ಹನಿ ಎಂ. ವರ್ಗೀಸ್ ಅವರು, “ಪ್ರಾಸಿಕ್ಯೂಷನ್‌ ಮಂಡಿಸಿದ ಸಾಕ್ಷ್ಯಾಧಾರಗಳು ಆರೋಪಗಳನ್ನು ದೃಢಪಡಿಸುವ ಮಟ್ಟಕ್ಕೆ ತಲುಪಿಲ್ಲ” ಎಂದು ಅಭಿಪ್ರಾಯಪಟ್ಟರು.

2017ರ ಫೆಬ್ರವರಿ 17ರಂದು ಕೊಚ್ಚಿಯಲ್ಲಿ ನಡೆದ ಈ ಪ್ರಕರಣದಲ್ಲಿ, ಪ್ರಮುಖ ನಟಿಯೊಬ್ಬರನ್ನು ಕಾರಿನಲ್ಲಿ ಅಪಹರಿಸಿ, ಸುಮಾರು ಎರಡು ಗಂಟೆಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎನ್ನುವ ಆರೋಪಗಳು ಹೊರಬಿದ್ದಿದ್ದವು. ಈ ಘಟನೆ ಆ ಸಂದರ್ಭದಲ್ಲಿ ದಕ್ಷಿಣ ಭಾರತದ ಸಿನಿರಂಗವನ್ನೇ ಸ್ತಂಭಗೊಳಿಸಿತ್ತು.

ಈ ಪ್ರಕರಣದಲ್ಲಿ ಪಲ್ಸರ್ ಸುನಿ, ಮಾರ್ಟಿನ್ ಆಂಟೋನಿ, ಮಣಿಕಂಡನ್ ಬಿ., ವಿಜೇಶ್ ವಿಪಿ., ಸಲೀಂ ಎಚ್., ಪ್ರದೀಪ್, ಚಾರ್ಲಿ ಥಾಮಸ್, ಸನಿಲ್ ಕುಮಾರ್ (‘ಮೇಷ್ಟ್ರಿ ಸನಿಲ್’) ಮತ್ತು ಶರತ್ ಸೇರಿದಂತೆ 10 ಮಂದಿ ಆರೋಪಿಗಳು ವಿಚಾರಣೆಯನ್ನು ಎದುರಿಸಿದ್ದರು.