ಸೈನಿಕ ಶಾಲೆ ಕೊಡಗಿನಲ್ಲಿ 29ನೇ ಸ್ಥಳೀಯ ಆಡಳಿತ ಮಂಡಳಿ ಸಭೆ ಹಾಗೂ ಧ್ವಜಸ್ತಂಭದ ಉದ್ಘಾಟನೆ

ಸೈನಿಕ ಶಾಲೆ ಕೊಡಗಿನಲ್ಲಿ 29ನೇ ಸ್ಥಳೀಯ ಆಡಳಿತ ಮಂಡಳಿ ಸಭೆ ಹಾಗೂ  ಧ್ವಜಸ್ತಂಭದ ಉದ್ಘಾಟನೆ

ಕುಶಾಲನಗರ: ಸೈನಿಕ ಶಾಲೆ ಕೊಡಗಿನಲ್ಲಿ 29ನೇ ಸ್ಥಳೀಯ ಆಡಳಿತ ಮಂಡಳಿ(ಎಲ್ ಬಿ ಎ) ಸಭೆಯು ಸೆಪ್ಟೆಂಬರ್ 04ರಂದು ಜರುಗಿತು. ಪ್ರಸ್ತುತ ಸಭೆಗೆ ಭಾರತೀಯ ವಾಯು ಸೇನೆಯ ಹಿರಿಯ ಅಧಿಕಾರಿ, ಹೆಚ್ ಕ್ಯೂ ಟಿ ಸಿ, ಬೆಂಗಳೂರು ಹಾಗೂ ಸೈನಿಕ ಶಾಲೆ ಕೊಡಗಿನ ಸ್ಥಳೀಯ ಆಡಳಿತ ಮಂಡಳಿಯ ಆಧ್ಯಕ್ಷರಾದ ಏರ್ ವೈಸ್ ಮಾರ್ಷಲ್ ಬಿಜೊ ಜಾನ್ ಮೆಮನ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮೊದಲಿಗೆ ಮುಖ್ಯ ಅತಿಥಿಗಳನ್ನು ಶಾಲೆಯ ಅಶ್ವದಳವು ಶಾಲೆಯಲ್ಲಿರುವ ಯುದ್ಧ ವೀರರ ಸ್ಮಾರಕಕ್ಕೆ ಕರೆತಂದರು.

 ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್, ಆಡಳಿತಾಧಿಕಾರಿಗಳಾದ ವಿಂಗ್ ಕಮಾಂಡರ್ ಪಿ ಪ್ರಕಾಶ್ ರಾವ್ ರವರು ಮುಖ್ಯ ಅತಿಥಿಗಳನ್ನು ಸ್ವಾಗತಿಸಿದರು. ನಂತರ ಮುಖ್ಯ ಅತಿಥಿಗಳು ಯುದ್ಧ ವೀರರ ಸ್ಮಾರಕಕ್ಕೆ ಪುಷ್ಪಗುಚ್ಛವನ್ನು ಸಲ್ಲಿಸುವುದರ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಹಾಗೆಯೇ ಯುದ್ಧವೀರರ ಸ್ಮಾರಕದ ಆವರಣದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ಧ್ವಜ ಸ್ತಂಭವನ್ನು ಉದ್ಘಾಟಿಸಿದರು. ಇದರೊಂದಿಗೆ ಶಾಲೆಯ ಪರೇಡ್ ಮೈದಾನದಲ್ಲಿ ವಿದ್ಯಾರ್ಥಿಗಳು ನೀಡಿದ ಗಾರ್ಡ್ ಆಫ್ ಹಾನರ್ ನ ಗೌರವ ವಂದನೆ ಸ್ವೀಕರಿಸಿದರು. ಮುಖ್ಯ ಅತಿಥಿಗಳ ಶಾಲಾ ಭೇಟಿಯ ಶಾಲೆಯ ಕುವೆಂಪು ವಿವಿದೊದ್ದೇಶ ಸಭಾಂಗಣದಲ್ಲಿ ವಿಶೇಷ ಸಭೆಯನ್ನು ಆಯೋಜಿಸಲಾಗಿದ್ದು, ಶಾಲಾ ವಿದ್ಯಾರ್ಥಿನಿಯರ ಸ್ವಾಗತ ನೃತ್ಯದೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ವಾರ್ಷಿಕ ಸಂಚಿಕೆಯಾದ ‘ಕೊಡಗಿಯನ್’ ನ್ನು ಬಿಡುಗಡೆಗೊಳಿಸಲಾಯಿತು.

 ಹಾಗೆಯೇ ಶಾಲೆಯಲ್ಲಿ 2024-25ನೇ ಸಾಲಿನಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ವಿಜ್ಞಾನ ವಿಷಯ ಶಿಕ್ಷಕರಾದ ಶ್ರೀ ಎನ್ ಸುಬ್ಬರಂಗಯ್ಯ ಹಾಗೂ ಶ್ರೀ ದಾದಾ ಧರೆಪ್ಪ ಕುಸನಾಳೆಯವರನ್ನು ಸನ್ಮಾನಿಸುವುದರೊಂದಿಗೆ, ಅಖಿಲ ಭಾರತ ಸೈನಿಕ ಶಾಲೆಗಳ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಮೂವರು ವಿದ್ಯಾರ್ಥಿನಿಯರಿಗೆ ಪದಕ ಹಾಗೂ ಪ್ರಮಾಣಪತ್ರಗಳನ್ನು ಪ್ರಧಾನ ಮಾಡಿದರು.

 ನಂತರ ಮಾತನಾಡಿದ ಮುಖ್ಯ ಅತಿಥಿಗಳು ಸೈನಿಕ ಶಾಲೆ ಕೊಡಗು ಹದಿನೇಳು ವರ್ಷಗಳ ಹಿಂದೆ ಭವಿಷ್ಯದ ಸೈನಿಕ ಅಧಿಕಾರಿಗಳನ್ನು ನಿರ್ಮಿಸುವ ಮಹೋನ್ನತ ದೃಷ್ಟಿಕೋನದೊಂದಿಗೆ ಸ್ಥಾಪಿತವಾಗಿದ್ದು, ಇಂದು ತನ್ನ ಸಾಮರ್ಥ್ಯ ಮತ್ತು ಗೌರವವನ್ನು ವೃದ್ಧಿಸಿಕೊಂಡು ಗಣನೀಯ ಬೆಳವಣಿಗೆಯನ್ನು ಕಂಡಿದೆ. ಕಾಲದ ಪರೀಕ್ಷೆಗೆ ತಕ್ಕಂತೆ ದೃಢವಾಗಿ ನಿಂತು, ಕಾಲಾನುಕ್ರಮವಾಗಿ ಆಧುನಿಕ ಶಿಕ್ಷಣ ಹಾಗೂ ತರಬೇತಿಯ ಬೇಡಿಕೆಗಳನ್ನು ಪೂರೈಸುವ ನಿಟ್ಟಿನಲ್ಲಿ ಬೆಳೆದು ನಿಂತಿದೆ. ವಿದ್ಯಾರ್ಥಿಗಳ ಶೈಕ್ಷಣಿಕ, ದೈಹಿಕ, ನೈತಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗೆ ಅಗತ್ಯವಾದ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಈ ಸಂಸ್ಥೆ ಬೆಳೆದು ಬಂದಿರುವುದನ್ನು ಅವಲೋಕಿಸಿದರೆ ಹರ್ಷವೆನಿಸುತ್ತದೆ ಎಂದರು. ಕಳೆದ ಎರಡು ವರ್ಷಗಳಲ್ಲಿ ವಿಶೇಷವಾಗಿ ಶಾಲೆಯು ಮೂಲಸೌಕರ್ಯ, ಶೈಕ್ಷಣಿಕ ಫಲಿತಾಂಶ, ಪೂರಕ ಚಟುವಟಿಕೆಗಳು ಹಾಗೂ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನದಲ್ಲಿ ಅಪಾರ ಪ್ರಗತಿ ಸಾಧಿಸಿದೆ. ಯು ಪಿ ಎಸ್ ಸಿ – ಎನ್ ಡಿ ಎ ಪರೀಕ್ಷೆಯಲ್ಲಿ ಶಾಲೆಯ ಅತ್ಯುತ್ತಮ ಸಾಧನೆ ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ. 19 ವಿದ್ಯಾರ್ಥಿಗಳು ಎನ್ ಡಿ ಎ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಅವರಲ್ಲಿ 4 ಮಂದಿ ಪ್ರತಿಷ್ಠಿತ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಗೆ ಸೇರ್ಪಡೆಗೊಂಡಿರುತ್ತಾರೆ. ಇದು ಸಾಧಾರಣ ಸಾಧನೆಯಲ್ಲ — ಇದಕ್ಕಾಗಿ ವಿದ್ಯಾರ್ಥಿಗಳ ಪರಿಶ್ರಮ, ಅಧಿಕಾರಿಗಳ ಹಾಗೂ ಶಿಕ್ಷಕರ ಸಮರ್ಪಿತ ಹಾಗೂ ಅವಿರತ ಮಾರ್ಗದರ್ಶನವೇ ಕಾರಣವಾಗಿದೆ ಎಂದರು. ಕ್ರೀಡಾ ವಿಭಾಗದ ಸಾಧನೆಗಳ ಕ್ಷೇತ್ರದಲ್ಲಿಯೂ ಶಾಲೆಯ ವಿದ್ಯಾರ್ಥಿಗಳು ತಮ್ಮ ನೈಜ ಸಾಮರ್ಥ್ಯವನ್ನು ರಾಷ್ಟ್ರೀಯ ಮಟ್ಟದಲ್ಲಿ ತೋರಿಸಿದ್ದಾರೆ. ಇದಕ್ಕೆ ಸಾಕ್ಷಿಯಾಗಿ 2025–26ನೇ ಸಾಲಿನಲ್ಲಿ ಒರಿಸ್ಸಾದ ಭುವನೇಶ್ವರದಲ್ಲಿ ನಡೆದ ಅಖಿಲ ಭಾರತ ಸೈನಿಕ ಶಾಲೆಗಳ ಅಂತರ ವಲಯ ಫುಟ್ಬಾಲ್ ಸ್ಪರ್ಧೆಯಲ್ಲಿ ಶಾಲೆಯು ಸಾಧಿಸಿದ ಸಾಧನೆ ಪೂರಕವಾಗಿದೆ. ಜೊತೆಗೆ, ಮಹಾರಾಷ್ಟ್ರದ ಚಂದ್ರಪುರದಲ್ಲಿ ನಡೆದ ಅಖಿಲ ಭಾರತ ಸೈನಿಕ ಶಾಲೆಗಳ ಅಥ್ಲೆಟಿಕ್‌ ಕ್ರೀಡಾಕೂಟದಲ್ಲಿ ವಿದ್ಯಾರ್ಥಿನಿಯರಾದ ದೀಪ್ತಿ ದೇವಿ, ಸಾನಿಕಾ ಉದಯ್ ಹಾಗೂ ದೀಪ್ತಿ ಬಿ.ಯು. ರವರ ಸಾಧನೆ ಶಾಲೆಯ ಕೀರ್ತಿಗೆ ನೂತನ ಮೈಲಿಗಲ್ಲನ್ನು ನಿರ್ಮಿಸಿದೆ ಇದರೊಂದಿಗೆ ಶೈಕ್ಷಣಿಕ ಹೊಣೆಗಾರಿಕೆಯೊಂದಿಗೆ ಶಿಕ್ಷಕರ ನಿರಂತರ ವೃತ್ತಿಪರ ಅಭಿವೃದ್ಧಿಗೆ ಶಾಲೆ ಹೆಚ್ಚಿನ ಆದ್ಯತೆ ನೀಡಿದ್ದು, ಶಿಕ್ಷಕರಿಗೆ ಆಧುನಿಕ ಬೋಧನಾ ತಂತ್ರಗಳು ಹಾಗೂ ತರಬೇತಿಗಳನ್ನು ಒದಗಿಸಲಾಗುತ್ತಿದ್ದು, ಅವರು ಗುಜರಾತಿನ ಗಾಂಧಿನಗರದ ಐ ಐ ಟಿ ಇ, ಮುಂತಾದ ಪ್ರತಿಷ್ಠಿತ ಸಂಸ್ಥೆಗಳ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ವೇದವ್ಯಾಸ ಶೈಕ್ಷಣಿಕ ವಿಭಾಗದ ಆಧುನೀಕರಣ ಹಾಗೂ ‘ಶಿಖರ್’ ತರಗತಿಯ ನಿರ್ಮಾಣ, ಶಾಲೆಯ ಶೈಕ್ಷಣಿಕ ಉನ್ನತಿಯ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಗಳಾಗಿವೆ. ಇವು ಕೇವಲ ಕಟ್ಟಡದ ಬದಲಾವಣೆಗಳಲ್ಲ, ಶಾಲೆಯನ್ನು ರಾಷ್ಟ್ರಮಟ್ಟದ ಮಾದರಿ ಸಂಸ್ಥೆಯನ್ನಾಗಿ ರೂಪಿಸುವ ದೃಷ್ಟಿಯ ಭಾಗವಾಗಿವೆ ಎಂದರು. ಇದರೊಂದಿಗೆ ವಿದ್ಯಾರ್ಥಿಗಳ ಪ್ರದರ್ಶಿಸಿದ ಡೊಳ್ಳು ಕುಣಿತ, ಇನ್ಕ್ರಿಡಿಬಲ್ ಇಂಡಿಯಾ ನೃತ್ಯ ಹಾಗೂ ಯಕ್ಷಗಾನದ ನೃತ್ಯಗಳಲ್ಲಿ ಕಾಣಿಸಿದ ಸಾಂಸ್ಕೃತಿಕ ವೈವಿಧ್ಯತೆ ಮನೋಜ್ಞವಾಗಿತ್ತು ಎನ್ನುದರೊಂದಿಗೆ ವಿದ್ಯಾರ್ಥಿಗಳನ್ನು ಪ್ರಶಂಸಿಸಿದರು. ಹಾಗೆಯೇ ಎಲ್ಲಾ ವಿದ್ಯಾರ್ಥಿಗಳಿಗೆ ಭವಿಷ್ಯದ ಬದುಕಲ್ಲಿ ಯಶಸ್ಸನ್ನು ಸಾಧಿಸುವ ಜವಾಬ್ದಾರಿ ನಿಮ್ಮದಾಗಿದೆ. ಶಾಲೆಯು ಎಲ್ಲಾ ಸೌಲಭ್ಯಗಳನ್ನು ಹೊಂದುವುದರೊಂದಿಗೆ ಅತ್ಯುತ್ತಮ ಮಾರ್ಗದರ್ಶನವನ್ನೂ ಸಹ ಹೊಂದಿದೆ. ಇದರೊಂದಿಗೆ ನಿಮ್ಮ ಬದ್ಧತೆ, ಕೇಂದ್ರೀಕೃತ ಪರಿಶ್ರಮ ನಿಮ್ಮದಾಗಿದೆ. ಭವಿಷ್ಯದ ಸೇನಾ ಆಧಿಕಾರಿಗಳಾಗಿ ನೀವು ಕೇವಲ ಶಸ್ತ್ರಾಸ್ತ್ರಗಳನ್ನು ಮಾತ್ರವಲ್ಲ, ಮೌಲ್ಯಗಳನ್ನು, ದೃಷ್ಟಿಕೋನವನ್ನು ಹಾಗೂ ಅಂತರಂಗದಲ್ಲಿ ನೈತಿಕತೆಯನ್ನು ಕೂಡ ಹೊತ್ತು ಸಾಗಬೇಕು ಎಂದು ಕಿವಿ ಮಾತು ಹೇಳಿದರು.

 ತಾವು ಶಾಲೆಯಲ್ಲಿ ಇರುವವರೆಗಿನ ತಮ್ಮ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ. ನಿಮ್ಮ ಶಿಕ್ಷಕರಿಂದ ಕಲಿಯಿರಿ, ನಿಮ್ಮ ಸಹಪಾಠಿಗಳಿಗೆ ಸಹಕಾರ ನೀಡುವುದರೊಂದಿಗೆ ಪರಿಶ್ರಮದಿಂದ ತರಬೇತಿಯನ್ನು ಪಡೆಯಿರಿ. ಜೊತೆಗೆ ನಿಮ್ಮ ಶಾಲೆಯ, ನಿಮ್ಮ ಕುಟುಂಬದ ಅದಕ್ಕಿಂತಲೂ ಮುಖ್ಯವಾಗಿ ನಮ್ಮ ದೇಶದ ಕೀರ್ತಿಯನ್ನು ಸದಾ ಎತ್ತಿ ಹಿಡಿಯಿರಿ. ದೇಶಭಕ್ತಿಯ ಪ್ರೇರಣೆ ನಿಮ್ಮೆಲ್ಲರಿಗೂ ದಾರಿ ತೋರಿಸಲಿ ಎಂದರು. ವಿಶೇಷ ಸಭೆಯ ನಂತರ ಆಸಕ್ತ ಎನ್ ಡಿ ಎ ವಿದ್ಯಾರ್ಥಿಗಳಿಗೆ ಸಂಪನ್ಮೂಲ ಕೇಂದ್ರವಾಗಿ ಕುವೆಂಪು ವಿವಿದೊದ್ಧೇಶ ಸಭಾಂಗಣದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟಿರುವ "ಶಿಖರ್" ಎಂಬ ಹೆಸರಿನ ಹೊಸ ತರಗತಿ ಕೊಠಡಿಯನ್ನು ಹಾಗೂ ಆಡಳಿತ ಮಂಡಳಿಯ ಕಟ್ಟಡದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ರೋಬೋಟಿಕ್ ಪ್ರಯೋಗಾಲಯವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ರೇರ್ ಆಡ್ಮಿರಲ್ ಆರ್ ಎಂ ಪುರಂದರೆ ವಿ ಎಸ್ ಎಂ (ನಿವೃತ್ತ), ಶ್ರೀಮತಿ ಎಲಿಜಾ ಮೆಮನ್ ಹಾಗೂ ಶ್ರೀಮತಿ ದಿವ್ಯಾಸಿಂಗ್ ರವರು ಹಾಜರಿದ್ದರು. ಇದರೊಂದಿಗೆ ಮುಖ್ಯ ಅತಿಥಿಗಳು ಶಾಲೆಯಲ್ಲಿ ಆಯೋಜಿಸಿದ್ದ 29ನೇ ಸ್ಥಳೀಯ ಆಡಳಿತ ಮಂಡಳಿಯ ಸಭೆಗೆ ಆಗಮಿಸಿದರು. ಈ ಸಭೆಯಲ್ಲಿ ಸ್ಥಳೀಯ ಆಡಳಿತ ಮಂಡಳಿಯ ಸದಸ್ಯರಾದ ಕೊಡಗು ಜಿಲ್ಲಾಧಿಕಾರಿ ಶ್ರೀ ವೆಂಕಟ ರಾಜಾ, ಐಎಎಸ್ ಇವರ ಪ್ರತಿನಿಧಿನಿಧಿಯಾಗಿ ಸಹಾಯಕ ಆಯುಕ್ತರಾದ ಶ್ರೀ ನಿತಿನ್ ಚಕ್ಕಿ, ಮೈಸೂರು ವಿಶ್ವವಿದ್ಯಾನಿಲಯದ ಶಿಕ್ಷಣ ತಜ್ಞರಾದ ಡಾ. ಎಂ ಪಿ ಸದಾಶಿವ, ಕೊಡಗು ಜಿಲ್ಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಪ್ರತಿನಿಧಿಯಾಗಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕಿ ಶ್ರೀಮತಿ ಬಿ ಎನ್ ಪುಷ್ಟ, ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಯುತ ಪ್ರದ್ಯುಮ್ನ ಕುಮಾರ್ ಸೇಥಿ, ಮೈಸೂರಿನ ಸಿ ಪಿ ಡಬ್ಲ್ಯೂ ಡಿ ಯ ಅಂಭಿಯಂತರರಾದ ಶ್ರೀ ಅಮೋಲ್ ನಾಮ್ ದೇವ್, ಪೋಷಕ ಪ್ರತಿನಿಧಿಯಾದ ಶ್ರೀ ಸಂಪತ್ ಕುಮಾರ್ ಶರ್ಮಾ, ಶಾಲೆಯ ಆಡಳಿತಾಧಿಕಾರಿಗಳಾದ ವಿಂಗ್ ಕಮಾಂಡರ್ ಪಿ ಪ್ರಕಾಶ್ ರಾವ್ ಉಪಸ್ಥಿತರಿದ್ದರು.

ಈ ಸಭೆಯಲ್ಲಿ ಶಾಲೆಯ ಪ್ರಾಂಶುಪಾಲರು ಹಾಗೂ ಪ್ರಸ್ತುತ ಸಭೆಯ ಕಾರ್ಯದರ್ಶಿಗಳಾದ ಕರ್ನಲ್ ಅಮರ್ ಜೀತ್ ಸಿಂಗ್ ರವರು ಕಳೆದ ಆರು ತಿಂಗಳಲ್ಲಿ ಶಾಲೆಯ ತರಬೇತಿ ಮತ್ತು ಆಡಳಿತಾತ್ಮಕ ಪ್ರಗತಿಯನ್ನು ಕುರಿತು ವಿವರಿಸುವುದರೊಂದಿಗೆ ಶಾಲೆಯು ಸಾಧಿಸಿದ ಸಾಧನೆಗಳ ಕುರಿತು ವಿವರಿಸಿದರು. ಹಾಗೆಯೇ ಭವಿಷ್ಯದ ದಿನಗಳಲ್ಲಿ ಶಾಲೆಯು ಹಮ್ಮಿಕೊಂಡಿರುವ ಶೈಕ್ಷಣಿಕ ಹಾಗೂ ಆಡಳಿತ ಕ್ರಮವನ್ನು ವಿವರಿಸಿದರು. ಈ ಸಭೆಯು ವಿವಿಧ ಅಂಶಗಳ ಕುರಿತು ವಿವರವಾದ ಚರ್ಚೆಗಳೊಂದಿಗೆ ಪೂರ್ಣಗೊಂಡಿತು. ಜೊತೆಗೆ ಶಾಲೆಯು ಮುಂದಿನ ದಿನಗಳಲ್ಲಿ ಹೊಂದಬೇಕಾದ ಬೆಳವಣಿಗೆ ಮತ್ತು ಅಭಿವೃದ್ಧಿಯ ಗುರಿಯನ್ನು ನಿರ್ಧರಿಸಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಮಧ್ಯಾಹ್ನದ ಅವಧಿಯಲ್ಲಿ ಮುಖ್ಯ ಅಥಿತಿಗಳು 12ನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ತಮಟೆ ಕಲಾ ಪ್ರದರ್ಶನ, ಲೇಝಿಂ ನೃತ್ಯ ಕೌಶಲ್ಯ ಹಾಗೂ ಕೇರಳದ ಪ್ರಸಿದ್ಧ ಯುದ್ಧ ಕಲೆ ಕಳರಿಪಾಯಟ್ಟು ಪ್ರದರ್ಶನಗಳನ್ನು ವೀಕ್ಷಿಸಿದರು. ಇವು ಪರಂಪರೆ ಹಾಗೂ ಆಧುನಿಕ ಕೌಶಲ್ಯದ ಸಮಾಗಮವಾಗಿದ್ದಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳು ವಿದ್ಯಾರ್ಥಿಗಳ ಶಿಸ್ತು, ಸಂಸ್ಕೃತಿಯ ಕುರಿತಾದ ಹಮ್ಮೆ ಹಾಗೂ ನವೀನತೆಯನ್ನು ಮೆಚ್ಚಿ, ಎಲ್ಲ ಕ್ಷೇತ್ರಗಳಲ್ಲಿಯೂ ಶ್ರೇಷ್ಠತೆಯನ್ನು ಸಾಧಿಸಲು ಅವರನ್ನು ಪ್ರೋತ್ಸಾಹಿಸಿದರು.