ಅಕ್ಷರದವ್ವನಿಗೆ ಅಕ್ಷರ ನಮನ
18ನೇ ಶತಮಾನ ಹಾಗೂ 19ನೇ ಶತಮಾನದ ಪೂರ್ವಾರ್ಧದಲ್ಲಿ ಯುರೋಪಿನಲ್ಲಿಯೇ ಮಹಿಳಾ ಶಿಕ್ಷಣಕ್ಕೆ ಉತ್ತಮ ವಾತಾವರಣ ಇರಲಿಲ್ಲ.ಭಾರತವಂತೂ ಮನುಸ್ಮೃತಿಯ ಕಂದಾಚಾರದಲ್ಲಿ ಹೂತು ಹೋಗಿತ್ತು. ಮಹಿಳೆಯರು ಮನೆಯ ಬಾಗಿಲ ಹೊಸ್ತಿಲು ದಾಟಿದರೆ ಜೀವಂತ ದಹನವಾಗುತಿದ್ದರು. ತಳ ಸಮುದಾಯದವರು ಬಟ್ಟೆ ತೊಡುವುದಕ್ಕೂ ನಿಷೇಧ ಹೇರಿದ್ದ ಕಾಲವದು.
ಆಗಿನ್ನು ಸ್ವಾತಂತ್ರ್ಯ ಚಳುವಳಿ ರೂಪುಗೊಂಡಿರಲಿಲ್ಲ. ಅಂಬೇಡ್ಕರ್,ಗಾಂಧಿ ಅಂತೂ ಹುಟ್ಟಿರದ ಕಾಲ.ಬಂಗಾಳ ಮತ್ತು ಉತ್ತರ ಭಾರತದ ಕೆಲಸ ಸಮಾಜ ಸುಧಾರಕರು ಇಂಗ್ಲಿಷ್ ಶಿಕ್ಷಣ ಪಡೆದು ಸಾಮಾಜಿಕ ಅನಿಷ್ಟಗಳ ಬಗ್ಗೆ ಮಾತನಾಡುವುದಕ್ಕೆ ಪ್ರಾರಂಭಿಸಿದ್ದರು. ವೃತ್ತಿಗೊಂದು ಜಾತಿ ಸೃಷ್ಟಿಯಾಗಿ ಭಾರತೀಯ ಸಮಾಜ ನೂರಾರು ತುಂಡುಗಳಾಗಿ ಒಡೆದು ಹೋಗಿತ್ತು.
ಜಾತಿ ವ್ಯವಸ್ಥೆ ಸೃಷ್ಟಿಸಿದವರು ಪರಮೋಚ್ಚ ಸ್ಥಾನದಲ್ಲಿ ಕುಳಿತು ಜ್ಞಾನ ಮತ್ತು ಅಧಿಕಾರವೆಂಬ ಎರಡು ಸಂಪನ್ಮೂಲಗಳ ಮೇಲೆ ಏಕಾಧಿಪತ್ಯ ಸಾಧಿಸಿದ್ದರು. ಹೆಣ್ಣು ಮಕ್ಕಳಂತೂ ಬಾಲ್ಯದಲ್ಲಿ ತಂದೆ, ಯೌವ್ವನದಲ್ಲಿ ಗಂಡ, ವೃದ್ಧಾಪ್ಯದಲ್ಲಿ ಗಂಡು ಮಕ್ಕಳ ಅಧೀನದಲ್ಲಿರಬೇಕಿತ್ತು. ಹಾಗೂ ಜ್ಞಾನ ಮತ್ತು ಅಧಿಕಾರ ಅವರಿಗೆ ದೂರದ ಮಾತಾಗಿತ್ತು.
ಇಂತಹ ಕಾಲಘಟ್ಟದಲ್ಲಿ ಮಾತೆ ಸಾವಿತ್ರಿಬಾಯಿ ಫುಲೆಯವರು ಪತಿ ಜ್ಯೋತಿಬಾಫುಲೆ ಅವರೊಂದಿಗೆ ಸೇರಿ ಜಾತಿ ವ್ಯವಸ್ಥೆಯನ್ನ ಎದುರು ಹಾಕಿಕೊಂಡು ಮೂಢನಂಬಿಕೆಗಳಿಗೆ ಅಂದ ಆಚರಣೆಗಳಿಗೆ ಸವಾಲು ಹಾಕಿದರು. ಅನೇಕ ಶಾಲೆಗಳನ್ನ ಆರಂಭಿಸಿದರು. ಪುರೋಹಿತರಿಲ್ಲದೆ ಮದುವೆ ಮಾಡಿಸಿದರು.ಬಹು ಪತ್ನಿತ್ವ ವಿರೋಧಿಸಿದರು.ವಿಧವಾ ವಿವಾಹ ಪ್ರತಿಪಾದಿಸಿದರು. ಅಸ್ಪೃಶ್ಯತೆ ವಿರುದ್ಧ ಹೋರಾಡಿದರು. ಹೊಸ ಪುಸ್ತಕಗಳನ್ನು ಬರೆದರು. ಸತ್ಯಶೋಧಕ ಸಮಾಜ ಸ್ಥಾಪಿಸಿದರು. ಕವಿತೆ ಬರೆದರು, ಭಾಷಣ ಮಾಡಿದರು.
ಎಲ್ಲಕ್ಕಿಂತ ಮಿಗಿಲಾಗಿ ಪಾರಂಪರಿಕ ಜ್ಞಾನ ಈ ನೆಲದ ಶೂದ್ರಾತಿ -ಶೂದ್ರರಿಗೆ ಹಾಗೂ ಮಹಿಳೆಯರಿಗೆ ತನ್ನ ಬಾಗಿಲು ಮುಚ್ಚಿಕೊಂಡಿದ್ದಾಗ ಅವರಿಗೆ ಶಾಲೆ ತೆರೆದು ಜ್ಞಾನದ ಅನ್ನವ ಉಣಪಡಿಸಿದ್ದು ಫುಲೆ ದಂಪತಿಗಳು.
ಧರ್ಮ ಕೊಡ ಮಾಡುವ ಪಾಪ- ಪುಣ್ಯ,ಸ್ವರ್ಗ -ನರಕಗಳ ಲೆಕ್ಕಾಚಾರವನ್ನು ಧಿಕ್ಕರಿಸಿ ನಿಂತು ಅಕ್ಷರ ಕಲಿಯಬಾರದವರಿಗೆ ಓದು ಬರಹ ಕಲಿಸಿದ ಸಾವಿತ್ರಿಬಾಯಿ ಫುಲೆ ಮಹಾನ್ ಶಿಕ್ಷಕಿಯಲ್ಲದೆ ಹೃದಯವಂತ ತಾಯಿ.
ಭಾರತೀಯ ಸಮಾಜದ ಕೆಡುಕುಗಳ ಮೂಲವನ್ನು ಅರ್ಥ ಮಾಡಿಕೊಂಡು ಬದಲಾವಣೆಗಾಗಿ ಹೋರಾಡಿದ ಹಾಗೂ ಹಲವು ಅಡೆತಡೆಗಳ ನಡುವೆ ಬಾಲಕಿಯರ ನಾಲಿಗೆ ಮೇಲೆ ಅಕ್ಷರ ಬರೆದ ಮೊದಲ ಶಿಕ್ಷಕಿ ಮಾತೆ ಸಾವಿತ್ರಿಬಾಯಿ ಫುಲೆ.
ಇಂತಹ ತಾಯ್ತನದ ಚೇತನದ ಶಿಸ್ತು,ಬದ್ಧತೆ,ತ್ಯಾಗ ಮತ್ತು ಸಹನೆಯ ಜೀವನ ಪಾಠಗಳನ್ನು ಓದಿಕೊಳ್ಳಬೇಕಾದ ಹಾಗೂ ಅವರ ವ್ಯಕ್ತಿತ್ವವನ್ನ ವಿಶ್ವದ ಎಲ್ಲೆಡೆ ಹರಡಬೇಕಾದ ತುರ್ತು ಬಂದಿದೆ.
ಸಾವಿತ್ರಿಬಾಯಿ ಅವರದು ಈಗ ಇಡೀ ದೇಶದಲ್ಲಿ ಸ್ಮರಿಸಲ್ಪಡುತ್ತಿರುವ ಹೆಸರು ಸಮಾಜದಿಂದ ಯಾವ ಪ್ರೋತ್ಸಾಹ ದೊರಕದಿದ್ದ ಕಾಲದಲ್ಲಿ ಧೃತಿಗೆಡದೆ ತಮ್ಮ ಕಾಯಕದಲ್ಲಿ ನಿರತರಾದ ಈ ಚೇತನ ಕೇವಲ ಪುಣೆಗೆ, ಮಹಾರಾಷ್ಟ್ರಕ್ಕೆ, ಮರಾಠಿ ಭಾಷಿಕರಿಗೆ, ಸೀಮಿತವಾಗಿರದೆ ಭಾರತದಲ್ಲೇ ಹೆಸರುವಾಸಿಯಾಗಿದ್ದಾರೆ.ಕರುನಾಡಲ್ಲಂತೂ ಮನೆ ಮಾತಾಗಿದ್ದಾರೆ.
ಅವಕಾಶ ವಂಚಿತ ಸಮುದಾಯಗಳಿಗೆ ಮತ್ತು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಅವರ ನಡೆ ಕ್ರಾಂತಿಕಾರಿ ನಡೆಯಾಗಿದ್ದು, ಬೆಳಕಿಗೆ ಅಡ್ಡ ನಿಂತ ಗೋಡೆಯನ್ನು ಒಡೆಯುವ ಪ್ರಯತ್ನ ಮಾಡಿದ್ದರು.
ನಿಜವಾಗಿಯೂ ಶಿಕ್ಷಕರ ದಿನಾಚರಣೆಯನ್ನು ಈ ಚೇತನಗಳ ಹೆಸರಿನಲ್ಲಿ ಆಚರಿಸಬೇಕಿತ್ತು.ಎಂದೋ ಈ ದಂಪತಿಗಳಿಗೆ ಭಾರತರತ್ನ ಕೊಡಬೇಕಿತ್ತು.ಈಗಲಾದರೂ ಸರ್ಕಾರಗಳು ಅದರ ಬಗ್ಗೆ ಗಮನಹರಿಸಲಿ.
ಅಕ್ಷರದವ್ವನ ಜನ್ಮದಿನದಂದು ಮಾತೆಗೆ ಶರಣು (ಜನವರಿ 03,1831)
💐🙏💐
ವಿಶೇಷ ಲೇಖನ:ರುದ್ರಜ ಕಾನ್ಕೆ,ಸಹಾಯಕ ಪ್ರಾಧ್ಯಾಪಕರು,ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು