ರಾತ್ರಿ ಹೊತ್ತಲ್ಲಿ ವೈದ್ಯೆಗೆ ಬೆಡ್ ರೂಮ್ ಬಳಿ ಇಣುಕು ನೋಡುವ ʼಸೈಕೋʼ ಕಾಟ!
ಬೆಂಗಳೂರು, ಡಿ.14: ನಗರದ ನಿವಾಸಿ ವೈದ್ಯೆಯೊಬ್ಬರು ಅಪರಿಚಿತ ವ್ಯಕ್ತಿಯ ಕಾಟದಿಂದ ಕಳೆದ ಮೂರು ತಿಂಗಳಿಂದ ತೀವ್ರ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ರಾತ್ರಿ ವೇಳೆ ಮನೆ ಗೇಟ್ ಬಳಿ ನಿಂತುಕೊಳ್ಳುವುದು, ಮಲಗಿರುವಾಗ ಇಣುಕಿ ನೋಡುವುದು ಹಾಗೂ ಕೆಲ ಸಂದರ್ಭಗಳಲ್ಲಿ ಬೆಡ್‌ರೂಂ ಸಮೀಪ ನಿಶ್ಶಬ್ದವಾಗಿ ಪ್ರತ್ಯಕ್ಷವಾಗುವುದು ಆತನ ವರ್ತನೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ವೈದ್ಯೆ ಪ್ರಶ್ನಿಸಿದರೂ ಆತ ಯಾವುದೇ ಪ್ರತಿಕ್ರಿಯೆ ನೀಡದೆ ದಿಟ್ಟಿಸಿ ನೋಡುತ್ತಾ ನಿಲ್ಲುತ್ತಾನೆ ಎನ್ನಲಾಗಿದೆ. ಕಾಟ ಮಿತಿಮೀರಿದ ಹಿನ್ನೆಲೆಯಲ್ಲಿ ವೈದ್ಯೆ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಅಪರಿಚಿತ ವ್ಯಕ್ತಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯ ಪತ್ತೆಗೆ ಶೋಧ ಕಾರ್ಯ ನಡೆಸಲಾಗುತ್ತಿದೆ. ಘಟನೆ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
