ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲಿ ಅಪರೂಪದ ದಾಖಲೆ | ಮೂರು ಇನಿಂಗ್ಸ್‌ಗಳಲ್ಲೂ ಓಪನರ್ ಗಳು ಶೂನ್ಯಕ್ಕೆ ಔಟ್

ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲಿ ಅಪರೂಪದ ದಾಖಲೆ |  ಮೂರು ಇನಿಂಗ್ಸ್‌ಗಳಲ್ಲೂ ಓಪನರ್ ಗಳು ಶೂನ್ಯಕ್ಕೆ ಔಟ್
Photo credit: TV09

ಪರ್ತ್: 148 ವರ್ಷಗಳ ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಮೂರು ಇನಿಂಗ್ಸ್‌ಗಳಲ್ಲೂ ಆರಂಭಿಕರು ಶೂನ್ಯಕ್ಕೆ ಔಟಾಗಿರುವ ಅಪರೂಪದ ದಾಖಲೆ ಸೃಷ್ಟಿಯಾಗಿದೆ.

ಆಸ್ಟ್ರೇಲಿಯಾ–ಇಂಗ್ಲೆಂಡ್‌ ಮೊದಲ ಆ್ಯಶಸ್‌ ಟೆಸ್ಟ್‌ನಲ್ಲಿ ಮೊದಲ ಮೂರು ಇನಿಂಗ್ಸ್‌ಗಳಲ್ಲೂ ಆರಂಭಿಕ ದಾಂಡಿಗರಲ್ಲಿ ಓರ್ವರು ರನ್‌ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್‌ಗೆ ಮರಳಿದ ಪರಿಣಾಮ, ಆರಂಭಿಕ ಜೊತೆಯಾಟವೇ ಮೂಡದೆ ಹೊಸ ದಾಖಲೆ ಬರೆದಿದೆ.

ಮೊದಲು ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್‌ಗೆ ಮಿಚೆಲ್ ಸ್ಟಾರ್ಕ್ ಮೊದಲ ಓವರ್‌ನ ಆರನೇ ಎಸೆತದಲ್ಲೇ ಝಾಕ್ ಕ್ರಾಲಿ (0) ಅವರ ವಿಕೆಟ್ ಪಡೆದು ಪ್ರಾರಂಭಿಕ ಹೊಡೆತ ನೀಡಿದರು. ಬಳಿಕ ಆಸ್ಟ್ರೇಲಿಯಾದ ಇನಿಂಗ್ಸ್‌ ಆರಂಭವಾಗುತ್ತಿದ್ದಂತೆಯೇ ಜೋಫ್ರಾ ಆರ್ಚರ್ ಮೊದಲ ಓವರ್‌ನ ಎರಡನೇ ಎಸೆತದಲ್ಲೇ ಜೇಕ್ ವೆದರಾಲ್ಡ್ (0) ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು.

ದ್ವಿತೀಯ ಇನಿಂಗ್ಸ್‌ನಲ್ಲೂ ಅದೇ ಕಥೆ ಮರುಕಳಿಸಿತು. ಸ್ಟಾರ್ಕ್ ಮತ್ತೊಮ್ಮೆ ಕ್ರಾಲಿಯನ್ನು ಮೊದಲ ಓವ ರ್‌ನ ಐದನೇ ಎಸೆತದಲ್ಲೇ ಎಲ್‌ಬಿಡಬ್ಲ್ಯೂ ಮಾಡುವ ಮೂಲಕ ಆಂಗ್ಲರ ತಂಡಕ್ಕೆ ತೀವ್ರ ಆಘಾತ ತಂದರು. ಇದರಿಂದ ಮೂರು ಇನಿಂಗ್ಸ್‌ಗಳಲ್ಲೂ ಆರಂಭಿಕ ಜೋಡಿ ರನ್‌ ದಾಖಲಿಸುವ ಮುನ್ನವೇ ಒಬ್ಬ ದಾಂಡಿಗನ ಔಟಾಗುವ ಅಪರೂಪದ ಸ್ಥಿತಿ ನಿರ್ಮಾಣವಾಯಿತು.

ಟೆಸ್ಟ್ ಕ್ರಿಕೆಟ್‌ ಆರಂಭವಾದ ನಂತರ ಇಂತಹ ಉದಾಹರಣೆ ಯಾವತ್ತೂ ದಾಖಲಾಗಿರಲಿಲ್ಲ. ಕ್ರಾಲಿ (ಎರಡು ಬಾರಿ) ಮತ್ತು ವೆದರಾಲ್ಡ್‌ ಶೂನ್ಯಕ್ಕೆ ಔಟಾಗಿರುವುದು ಈ ದಾಖಲೆಗೆ ಕಾರಣ.