ಧ್ವಜವೀರ ಪೂಜಾರಿರ ರಾಮಪ್ಪ ರಸ್ತೆ ನಾಮಕರಣಕ್ಕೆ ಸಮ್ಮತಿ ನೀಡಿದ ಎ.ಎಸ್.ಪೊನ್ನಣ್ಣ

ಧ್ವಜವೀರ ಪೂಜಾರಿರ ರಾಮಪ್ಪ ರಸ್ತೆ ನಾಮಕರಣಕ್ಕೆ ಸಮ್ಮತಿ ನೀಡಿದ ಎ.ಎಸ್.ಪೊನ್ನಣ್ಣ

ಮಡಿಕೇರಿ:ಅಪ್ಪಟ ಗಾಂಧಿವಾದಿ ,ಸ್ವಾತಂತ್ರ್ಯ ಹೋರಾಟಗಾರ, ಪ್ರಥಮ ಬಾರಿಗೆ ಮಡಿಕೇರಿ ಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಸೇನಾನಿ ಪೂಜಾರಿರ ರಾಮಪ್ಪ ನವರ ಹೆಸರನ್ನು ಮೇಕೇರಿ ಅರ್ವತ್ತೋಕ್ಲು ಸಂಪರ್ಕ ರಸ್ತೆಗೆ ನಾಮಕರಣ ಮಾಡಲು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ನವರು ಒಪ್ಪಿಗೆ ನೀಡಿ ಸರ್ಕಾರದಿಂದ ಅನುಮತಿ ಪಡೆದು ಶೀಘ್ರದಲ್ಲಿಯೇ ಕಾರ್ಯಕ್ರಮ ನಡೆಸುವ ಭರವಸೆ ನೀಡಿದ್ದಾರೆ.

ಶಾಸಕರ ಗೃಹ ಕಛೇರಿಗೆ ಅರ್ವತ್ತೋಕ್ಲು ಗ್ರಾಮದ ಪೂಜಾರಿರ ಕುಟುಂಬದ ಪ್ರಮುಖರು ಮತ್ತು ಗ್ರಾಮಸ್ಥರನ್ನು ಒಳಗೊಂಡ ನಿಯೋಗ ಭೇಟಿಯಾಗಿ ಪೊನ್ನಣ್ಣ ನವರಿಗೆ ರಸ್ತೆ ನಾಮಕರಣ ಕುರಿತು ಮನವಿ ಮಾಡಿಕೊಂಡ ಹಿನ್ನಲೆ ಅವರು ಒಪ್ಪಿಗೆ ಸೂಚಿಸಿದ್ದಾರೆ. ಪೂಜಾರಿರ ರಾಮಪ್ಪನವರು ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರಾದ ಪಂದ್ಯಂಡ ಬೆಳ್ಯಪ್ಪ,ಕೊಳ್ಳಿಮಾಡ ಕರುಂಬಯ್ಯ, ಪುಲಿಯಂಡ ಸುಬ್ಬಯ್ಯ,ಚೆಪ್ಪುಡಿರ ಪೂಣಚ್ಚ ರಂತಹ ಮಹಾನ್ ವ್ಯಕ್ತಿಗಳ ಸಹವರ್ತಿಗಳಾಗಿ ದೇಶದ ಸ್ವಾತಂತ್ರ್ಯ ಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದವರು.ಜೀವದ ಹಂಗು ತೊರೆದು 1932 ರಲ್ಲಿ ಬ್ರಿಟೀಷರ ಯೂನಿಯನ್ ಜಾಕ್ ಧ್ವಜ ಹಾರುತ್ತಿದ್ದ ಮಡಿಕೇರಿ ಕೋಟೆಯ ಧ್ವಜ ಸ್ತಂಭದಲ್ಲಿ ತ್ರಿವರ್ಣ ಧ್ವಜ ಹಾರಿಸಿ ಕಣ್ಣನೂರು ಜೈಲಿನಲ್ಲಿ ಶಿಕ್ಷೆಗೆ ಒಳಗಾದವರು. ಇಂತಹ ಮಹಾನ್ ವ್ಯಕ್ತಿಗಳ ಹೆಸರನ್ನು ಮುಂದಿನ ಪೀಳಗೆಯವರು ಶಾಶ್ವತವಾಗಿ ಸ್ಮರಣಿಸುವ ಸತ್ಕಾರ್ಯ ಕ್ಕೆ ತಾವು ಎಲ್ಲಾ ರೀತಿಯಿಂದಲೂ ಸಹಕಾರ ನೀಡುವುದು ತಮಗೆ ಹೆಮ್ಮೆಯ ವಿಚಾರವಾಗಿದೆ ಎಂದು ಎ.ಎಸ್.ಪೊನ್ನಣ್ಣ ನವರು ಅಭಿಮತ ವ್ಯಕ್ತಪಡಿಸಿದರು.

 ಈ ಸಂಧರ್ಭದಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ,ಮೇಕೇರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪೂಜಾರಿರ ರಕ್ಷಿತ್,ಬೂತ್ ಅಧ್ಯಕ್ಷರಾದ ಪೂಜಾರಿರ ಪ್ರದೀಪ್ ಕುಮಾರ್, ಪ್ರಮುಖರಾದ ಬಾಳಾಡಿ ಪ್ರತಾಪ್ ಕುಮಾರ್,ಪೂಜಾರಿರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಪೂಜಾರಿರ ಜಗದೀಶ್,ಪ್ರೊಫೆಸರ್ ಪದ್ಮನಾಭ,ಮಾಜಿ ಸೈನಿಕರಾದ ಬೆಳ್ಯಪ್ಪ,ಸುರೇಶ್, ಕುಟುಂಬದ ಇತರಸದಸ್ಯರಾದ ಪೂಜಾರಿರ ಧ್ರುವ,ಹರ್ಷ ಕೇಶವ, ನಂದಕುಮಾರ್,ಜಯ, ಕುಶಾಲಪ್ಪ,ದಿವಿನ್ ದೇವಯ್ಯ ನವರು ಶಾಸಕರ ಬಳಿ ತೆರಳಿದ ನಿಯೋಗದಲ್ಲಿ ಉಪಸ್ಥಿತರಿದ್ದರು.