ಅನೀಮಿಯ ತಪಾಸಣಾ ಶಿಬಿರ

ಅನೀಮಿಯ ತಪಾಸಣಾ ಶಿಬಿರ

ಮಡಿಕೇರಿ :-ಪೋಷಣ್ ಮಾಸಾಚರಣೆ ಮತ್ತು ಸ್ವಾಸ್ಥನಾರಿ ಸಶಕ್ತ ಕುಟುಂಬ ಅಭಿಯಾನದಡಿ ಗರ್ಭಿಣಿ ಬಾಣಂತಿ ಮಕ್ಕಳು ಅಂಗನವಾಡಿ ಕಾರ್ಯಕತೆಯರು ಮತ್ತು ಸಹಾಯಕರಿಗೆ ಆರೋಗ್ಯ ತಪಾಸಣೆ ನಡೆಸಿ ಅನೀಮಿಯ, ಎಚ್‍ಬಿ, ಬಿಪಿ, ಶುಗರ್, ಪರಿಶೀಲನೆಯು ಸ್ಟೋನ್ ಹಿಲ್ ಅಂಗನವಾಡಿ ಕೇಂದ್ರದಲ್ಲಿ ನಡೆಸಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಪ್ರಸನ್ನ ಕುಮಾರ್ ಅವರು ಮಾತನಾಡಿ ಶಿಶು ಮತ್ತು ಬಾಲ್ಯ ಪೋಷಣ್ ಅಭ್ಯಾಸಗಳ ಬಗ್ಗೆ ಪ್ರಾಥಮಿಕ ಬಾಲ್ಯ ಆರೈಕೆ ಮತ್ತು ಶಿಕ್ಷಣದ ಬಗ್ಗೆ, ಪೋಷಣ್ ಬಿ ಪಡಾಯಿ ಬಿ ಕುರಿತು ಮಾಹಿತಿ ನೀಡಿದರು. ಅಪೌಷ್ಟಿಕತೆ ಹೋಗಲಾಡಿಸುವಲ್ಲಿ ಕಾರ್ಯಕರ್ತೆಯರು ಹೆಚ್ಚಿನ ಜಾಗೃತಿ ಮೂಡಿಸಬೇಕು. ಕಾರ್ಯಕರ್ತೆಯರು ಮನೆ ಮನೆ ಭೇಟಿ ನೀಡುವ ಮೂಲಕ ಪರಿಶೀಲನೆ ನಡೆಸಬೇಕು ಎಂದು ತಿಳಿಸಿದರು.

ಇಲಾಖೆಯ ಮೇಲ್ವಿಚಾರಕರು ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಮೇಪಾಡಂಡ ಸವಿತಾ ಕೀರ್ತನ್ ಅವರು ನೆರೆದಿದ್ದ ಮಹಿಳೆಯರಿಗೆ ಆರೋಗ್ಯಕರ ಜೀವನ ಶೈಲಿ ಅಭ್ಯಾಸಗಳ ಕುರಿತು ಮಾರ್ಗದರ್ಶನ ನೀಡಿದರು. ಪ್ರಸವ ಪೂರ್ವ ಆರೈಕೆ, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಆಹಾರದ ಬಳಕೆ, ಮುಟ್ಟಿನ ನೈರ್ಮಲ್ಯ, ಮಾನಸಿಕ ಆರೋಗ್ಯದ ಕುರಿತು ಮಾಹಿತಿ ನೀಡಿದರು.

ಹಿರಿಯ ಆರೋಗ್ಯ ಸಹಾಯಕರಾದ ರೇವತಿ ಅವರು ಮಹಿಳೆಯರು ಮತ್ತು ಮಕ್ಕಳಿಗೆ ಒದಗಿಸುವ ಸೇವೆಗಳು ಮಹಿಳೆಯರಿಗೆ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಕ್ಯಾನ್ಸರ್ ಕಾಯಿಲೆಗಳ ಮಾಹಿತಿ, ರಕ್ತಹೀನತೆ ಪರೀಕ್ಷೆ, ಗರ್ಭಿಣಿಯರಿಗೆ ಪ್ರಸವಪೂರ್ವ ತಪಾಸಣೆ, ಮಕ್ಕಳಿಗೆ ಲಸಿಕಾ ಸೌಲಭ್ಯ, ಸ್ತನ ಕ್ಯಾನ್ಸರ್ ಅನ್ನು ಹೇಗೆ ಮನೆಯಲ್ಲಿ ಸ್ವಯಂ ಪರೀಕ್ಷೆಯ ಮೂಲಕ ಕಂಡು ಹಿಡಿಯುವುದು ಮತ್ತು ಮೊದಲನೇ ಹಂತದಲ್ಲಿ ಇದನ್ನು ಚಿಕಿತ್ಸೆ ನೀಡಿ ಸರಿಪಡಿಸಬಹುದು ಎಂಬ ಮಾಹಿತಿಯನ್ನು ನೀಡಿದರು.

 ಎಎಂಪಿಕೆ ಕಾರ್ಯಕ್ರಮದಡಿಯಲ್ಲಿ ಮಕ್ಕಳಿಗೆ ಡಬ್ಲ್ಯುಐಎಫ್‍ಎಸ್ ಮಾತ್ರೆಯನ್ನು ಯಾವ ರೀತಿ ನೀಡಲಾಗುವುದು ಎಂಬ ಬಗ್ಗೆ ವಿವರಿಸಿದರು. ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ, ಆರು ತಿಂಗಳು ತುಂಬಿದ ಮಗುವಿಗೆ ಅನ್ನ ಪ್ರಸನ್ನ ಕಾರ್ಯಕ್ರಮವು ನೆರವೇರಿತು. ಸ್ಟೋನ್‍ಹಿಲ್ ಅಂಗನವಾಡಿ ಕಾರ್ಯಕರ್ತೆ ನಾಗರತ್ನ ಅವರು ಸ್ವಾಗತಿಸಿ, ನಿರೂಪಿಸಿದರು. ರಾಜೇಶ್ವರಿ ನಗರ ಅಂಗನವಾಡಿ ಕಾರ್ಯಕರ್ತೆ ಇಂದಿರಾ ಅವರು ವಂದಿಸಿದರು. ಕಸಬ ವೃತ್ತದ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.