ಸೆ.14ರಂದು ಸೋಮವಾರಪೇಟೆ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಸೋಮವಾರಪೇಟೆ:ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸೆ. 14 ರಂದು ಚನ್ನಬಸಪ್ಪ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಜಿ.ಬಿ. ಸೋಮಯ್ಯ ತಿಳಿಸಿದರು. ಪ್ರಸಕ್ತ ಸಾಲಿನಲ್ಲಿ ಸಂಘ ಒಟ್ಟು 453 ಕೋಟಿ ರೂ. ವ್ಯವಹಾರ ನಡೆಸಿದ್ದು, 1.23 ಕೋಟಿ ರೂ. ಲಾಭಗಳಿಸಿದೆ. ಸಂಘದಲ್ಲಿ ಒಟ್ಟು ದುಡಿಯುವ ಬಂಡವಾಳ 89.62 ಕೋಟಿ ರೂ. ಇದೆ. 5438 ಸದಸ್ಯರಿದ್ದು, ಸದಸ್ಯರು ಹಾಗೂ ಗ್ರಾಹಕರಿಗೆ 69.87 ಕೋಟಿ ರೂ. ಸಾಲವನ್ನು ವಿತರಿಸಲಾಗಿದೆ ಎಂದು ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸಂಘದ ಸದಸ್ಯರಿಗೆ 25000ರೂ. ಮತ್ತು 10000 ರೂ. ಎರಡು ರೀತಿಯ ಮರಣ ನಿಧಿ ಯೋಜನೆ ಜಾರಿಯಲ್ಲಿದ್ದು, ಪ್ರಸಕ್ತ ಸಾಲಿನಲ್ಲಿ 47 ಮಂದಿ ಸದಸ್ಯರು ಮೃತಪಟ್ಟಿದ್ದು, 9,88,000 ರೂ. ಹಣವನ್ನು ಮೃತಪಟ್ಟ ಕುಟುಂಬಸ್ಥರಿಗೆ ನೀಡಲಾಗಿದೆ. 2 ಲಕ್ಷ ರೂ.ಗಳ ಸಾಲದ ವರೆಗೆ ಜಾಮೀನು ಸಾಲಕ್ಕೆ ವಿಮಾಯೋಜನೆ ಜಾರಿಯಲ್ಲಿದ್ದು, 15 ಸದಸ್ಯರು ಮೃತಪಟ್ಟ ಹಿನ್ನೆಲೆಯಲ್ಲಿ 11,17,289 ರೂ.ಗಳನ್ನು ಅಸಲು ಮತ್ತು ಬಡ್ಡಿಯನ್ನು ಸಂಘದಿಂದ ಭರಿಸಲಾಗಿದೆ.
ಪಿಗ್ಮಿ ಓವರ್ ಡ್ರಾಫ್ಟ್, ಸ್ವ ಸಹಾಯ ಗುಂಪುಗಳಿಗೆ ಸಾಲ ಯೋಜನೆ ಸೇರಿದಂತೆ ವಿವಿಧ ಸಾಲಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು. ಸಂಘದಿಂದ ಕೆಪಿಸಿ ಸಾಲದ ಎನ್‌ಸಿಎಲ್ ಮಿತಿಯನ್ನು ಒಂದು ಏಕರೆೆ ಕಾಫಿ ಮತ್ತು ಕಾಳು ಮೆಣಸಿಗೆ 1.02 ಲಕ್ಷ ರೂ. ಭತ್ತಕ್ಕೆ 35000 ರೂ. ಹಾಗು ಮುಸುಕಿನ ಜೋಳಕ್ಕೆ 25 ಸಾವಿರದಂತೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಈ ಭಾರಿ ಯಶಸ್ವಿನಿ ಯೋಜನೆಯಲ್ಲಿ ಒಟ್ಟು 1572 ಮಂದಿ ನೋಂದಾಯಿಸಿಕೊಂಡಿದ್ದು 2,33,250 ರೂ. ವಿಮಾ ಮೊತ್ತವನ್ನು ಯೋಜನೆಗೆ ಜಮೆ ಮಾಡಲಾಗಿದೆ ಎಂದರು. ವಾರ್ಷಿಕ ಮಹಾಸಭೆಯಲ್ಲಿ 2024-25ನೇ ಸಾಲಿನಲಿ ಏಳನೆ ತರಗತಿ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳು ಮತ್ತು ಸಂಘದ ವ್ಯಾಪ್ತಿಗೆ ಬರುವ ಸರ್ಕಾರಿ ಶಾಲೆಯಲ್ಲಿ ಹೆಚ್ಚು ಅಂಕಗಳಿಸಿದ ಸದಸ್ಯೇತರ ಮಕ್ಕಳಿಗೆ ಪ್ರೋತ್ಸಾಹಧನ ನೀಡಲಾಗುವುದು.
ಸಂಘದ ಶತಮಾನೋತ್ಸವ ವಿದ್ಯಾನಿಧಿಯಿಂದ ತಾಲ್ಲೂಕಿನ ವಸತಿ ರಹಿತ ಸರ್ಕಾರಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗೆ ಪ್ರೋತ್ಸಾಹಧನ ಮತ್ತು ಸನ್ಮಾನಿಸಲಾಗುವುದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎಚ್.ಕೆ. ಚಂದ್ರಶೇಖರ್, ನಿರ್ದೇಶಕರುಗಳಾದ ಬಿ.ಎಂ. ಸುರೇಶ್, ರೂಪಾ ಸತೀಶ್, ಸಿಇಒ ರವೀಂದ್ರ ಇದ್ದರು.