ಕಗ್ಗೋಡ್ಲುವಿನಲ್ಲಿ ಆಟಿಡೊಂಜಿ ದಿನ ಕೆಸರ‍್ದ ಗೊಬ್ಬು: ಆಗಸ್ಟ್ 10ರಂದು ಕೆಸರುಗದ್ದೆ ಕ್ರೀಡಾಕೂಟ

ಕಗ್ಗೋಡ್ಲುವಿನಲ್ಲಿ ಆಟಿಡೊಂಜಿ ದಿನ ಕೆಸರ‍್ದ ಗೊಬ್ಬು: ಆಗಸ್ಟ್ 10ರಂದು  ಕೆಸರುಗದ್ದೆ ಕ್ರೀಡಾಕೂಟ

ಮಡಿಕೇರಿ: ಆಟಿ ಪ್ರಯುಕ್ತ ಕೊಡಗು ಜಿಲ್ಲಾ ಬಂಟರ ಸಂಘ, ಕೊಡಗು ಯುವ ಬಂಟ್ಸ್ ಅಸೋಸಿಯೇಷನ್ ಆಶ್ರಯದಲ್ಲಿ ಆ.10 ರಂದು ಕಗ್ಗೋಡ್ಲುವಿನಲ್ಲಿ ಆಟಿಡೊಂಜಿ ದಿನ ಕೆಸರ‍್ದ ಗೊಬ್ಬು ಕೆಸರುಗದ್ದೆ ಕ್ರೀಡಾಕೂಟ ನಡೆಯಲಿದೆ ಎಂದು ಯುವ ಬಂಟ್ಸ್ ಅಸೋಸಿಯೇಷನ್ ಸದಸ್ಯ ಶರತ್ ಕುಮಾರ್ ಶೆಟ್ಟಿ ತಿಳಿಸಿದರು.

ಮಡಿಕೇರಿ ನಗರ ಬಂಟರ ಮಹಿಳಾ ಘಟಕ, ಮಡಿಕೇರಿ ತಾಲೂಕು ಬಂಟರ ಮಹಿಳಾ ಘಟಕ, ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ಮಹಿಳಾ ಬಂಟರ ಸಂಘ, ಕಗ್ಗೊಡ್ಲು ಹೋಬಳಿ ಬಂಟರ ಸಂಘದ ಸಹಯೋಗದಲ್ಲಿ ಕಗ್ಗೋಡ್ಲುವಿನಲ್ಲಿರುವ ದಿವಂಗತ ರಾಮಣ್ಣನವರ ಪತ್ನಿ ಸುಮಲತಾ ಅವರ ಗದ್ದೆಯಲ್ಲಿ ಬೆಳಿಗ್ಗೆ 7 ಗಂಟೆಗೆ ಕ್ರೀಡಾಕೂಟಕ್ಕೆ ಚಾಲನೆ ದೊರೆಯಲಿದ್ದು, ಸಂಜೆ 6 ಗಂಟೆಗೆ ಕಗ್ಗೊಡ್ಲುವಿನ ಅಂಬಾರ ಸಭಾಂಗಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪುರುಷರಿಗೆ ಹ್ಯಾಂಡ್ ಬಾಲ್(7+2), ವಿವಿಧ ವಿಭಾಗದಲ್ಲಿ 100 ಮೀ. ಓಟ, ಹಗ್ಗಜಗ್ಗಾಟ, ದಂಪತಿ ಓಟ, ಮಹಿಳೆಯರಿಗೆ 100 ಮೀ. ಓಟ, ಹಗ್ಗಜಗ್ಗಾಟ, ನಿಂಬೆ ಚಮಚ, ಪಾಸಿಂಗ್ ಬಾಲ್ ನಡೆಯಲಿದೆ. ಮಕ್ಕಳಿಗೆ 100 ಮೀ. ಓಟ ಹಾಗೂ ಮನೋರಂಜನಾ ಸ್ಪರ್ಧೆ ಜರುಗಲಿದೆ. ಅಲ್ಲದೆ ತುಳುನಾಡಿನ ಜಾನಪದ ಕಲೆ, ಆಟಿ ಕಳೆಂಜ ಹಾಗೂ ನಗರ ಮಹಿಳಾ ಘಟಕದಿಂದ ಮಳೆಗಾಲದ ವಿಶೇಷ ಖಾದ್ಯಗಳ ಪ್ರದರ್ಶನ ಗಮನ ಸೆಳೆಯಲಿದೆ. ಹಗ್ಗಜಗ್ಗಾಟ ಮತ್ತು ಹ್ಯಾಂಡ್ ಬಾಲ್ ಸ್ಪರ್ಧೆಗೆ ಜು.25ರ ಒಳಗೆ ತಂಡಗಳು ನೊಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ನಿಖಿಲ್ ಆಳ್ವ 9972477982, ಮಿಥುನ್ ರೈ 9535946519, ಸಂಪರ್ಕಿಸುವAತೆ ಹೇಳಿದರು. ಕಾರ್ಯಕ್ರಮದಲ್ಲಿ 2023-24 ಮತ್ತು 2024-25ನೇ ಸಾಲಿನಲ್ಲಿ ಶೇ.90ರಷ್ಟು ಅಂಕ ಪಡೆದ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಗುವುದು. ಅಲ್ಲದೇ, ಜಿಲ್ಲಾ ವ್ಯಾಪ್ತಿಯಲ್ಲಿ ಬಂಟರ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದ ದ್ವಿತೀಯ ಪಿಯುಸಿಯಲ್ಲಿ ಶೇ.85 ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು ತೀರ್ಮಾನಿಸಲಾಗಿದ್ದು, ಅದಕ್ಕಾಗಿ ನೂತನ ಸಮಿತಿಯನ್ನು ರಚಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯ ಪ್ರತಿಯೊಂದಿಗೆ ಜು.30ರ ಒಳಗಾಗಿ ಅರ್ಜಿ ಸಲ್ಲಿಸುವಂತೆ ತಿಳಿಸಿದರು.

ಯುವ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಸದಾನಂದ ರೈ ಮಾತನಾಡಿ, ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ತಾಲೂಕು ಮಹಿಳಾ ಬಂಟ್ಸ್ ಘಟಕದ ಅಧ್ಯಕ್ಷೆ ಶಶಿಕಲಾ ಲೋಕೇಶ್ ರೈ, ಮಡಿಕೇರಿ ನಗರ ಘಟಕದ ಅಧ್ಯಕ್ಷೆ ಬಿ.ಜೆ.ಬೇಬಿ ಜಯರಾಂ ರೈ, ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಬಿ.ಆರ್.ನೀತು ರೈ, ಕಗ್ಗೋಡ್ಲು ಹೋಬಳಿ ಘಟಕದ ಅಧ್ಯಕ್ಷೆ ಬಿ.ಜೆ.ಕಮಲಾಕ್ಷಿ ರೈ ಉಪಸ್ಥಿತರಿದ್ದರು.