ಭಟ್ಕಳ | ಡಿಸ್ಕೌಂಟ್ ಆಮಿಷವೊಡ್ಡಿದ್ದ ನೂರಾರು ಮಂದಿಗೆ ವಂಚನೆ; ತಮಿಳುನಾಡಿನ ಮೂವರ ಬಂಧನ

ಭಟ್ಕಳ | ಡಿಸ್ಕೌಂಟ್ ಆಮಿಷವೊಡ್ಡಿದ್ದ ನೂರಾರು ಮಂದಿಗೆ ವಂಚನೆ; ತಮಿಳುನಾಡಿನ ಮೂವರ ಬಂಧನ

ಕಾರವಾರ: ಭಟ್ಕಳದಲ್ಲಿ ‘ಗ್ಲೋಬಲ್ ಎಂಟರ್‌ಪ್ರೈಸಸ್’ ಹೆಸರಿನಲ್ಲಿ ಆಕರ್ಷಕ ಡಿಸ್ಕೌಂಟ್ ಆಮಿಷ ತೋರಿಸಿ ನೂರಾರು ಗ್ರಾಹಕರಿಂದ ಲಕ್ಷಾಂತರ ರೂಪಾಯಿ ಕಲೆಹಾಕಿ ಪರಾರಿಯಾಗಿದ್ದ ತಮಿಳುನಾಡು ಮೂಲದ ಮೂವರು ಆರೋಪಿಗಳನ್ನು ಭಟ್ಕಳ ನಗರ ಠಾಣೆ ಪೊಲೀಸರು ಒಂದು ವಾರದೊಳಗೆ ಬಂಧಿಸಿದ್ದಾರೆ.

ಬಂಧಿತರನ್ನು ಎಂ. ಗಣೇಶನ್ (52), ರಾಜಾಮಡಂ ಸೌತ್ ಸ್ಟ್ರೀಟ್‌ನ ತ್ಯಾಗರಾಜನ್ (65) ಹಾಗೂ ಅನಸಾಲ ಸ್ಟ್ರೀಟ್‌ನ ಮೈಯನಾದನ್ (42) ಎಂದು ಗುರುತಿಸಲಾಗಿದೆ. ಮೂವರೂ ತಮಿಳುನಾಡಿನ ನಿವಾಸಿಗಳು.

ಭಟ್ಕಳ ನಗರದಲ್ಲಿ ‘ಗ್ಲೋಬಲ್ ಎಂಟರ್‌ಪ್ರೈಸಸ್’ ಎಂಬ ಮಳಿಗೆಯನ್ನು ತೆರೆಯಲಾಗಿತ್ತು. ಗೃಹೋಪಯೋಗಿ ಸಾಮಗ್ರಿಗಳ ಮೇಲೆ 10ರಿಂದ 40ರಷ್ಟು ಡಿಸ್ಕೌಂಟ್ ನೀಡುವುದಾಗಿ ಘೋಷಿಸಿ ಜನರನ್ನು ಆಕರ್ಷಿಸಲಾಗಿತ್ತು. ಈ ಆಫರ್‌ ನಂಬಿ 300ಕ್ಕೂ ಹೆಚ್ಚು ಗ್ರಾಹಕರು ಮುಂಗಡವಾಗಿ ಲಕ್ಷಾಂತರ ರೂಪಾಯಿ ಪಾವತಿಸಿದ್ದರು. ಬಳಿಕ ಮಳಿಗೆಗೆ ಬೀಗ ಹಾಕಿ ಗ್ಯಾಂಗ್ ಪರಾರಿಯಾಗಿದೆ.

ಪ್ರಕರಣದ ಸಂಬಂಧ ಪಟ್ಟಣದ ಮಹ್ಮದ್ ಸವೂದ್ ಅವರು ದೂರು ನೀಡಿದ ಬಳಿಕ ಭಟ್ಕಳ ನಗರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ವಿಶೇಷ ತಂಡ ರಚಿಸಿ ಆರೋಪಿಗಳ ಸುಳಿವು ಹುಡುಕಿದ ಪೊಲೀಸರು, ತಮಿಳುನಾಡಿಗೆ ವಿಸ್ತರಿಸಿದ ಕಾರ್ಯಾಚರಣೆಯಲ್ಲಿ ಮೂವರನ್ನೂ ಪತ್ತೆಹಚ್ಚಿ ಬಂಧಿಸಿದ್ದಾರೆ.