ಭೀಮಾ ಕೋರೆಗಾಂವ್ ಎಂಬ ಸ್ವಾಭಿಮಾನಕ್ಕಾಗಿ ಮತ್ತು ಸಾಮಾಜಿಕ ಮನ್ನಣೆಗಾಗಿ ನಡೆದ ಯುದ್ಧ

ಭೀಮಾ ಕೋರೆಗಾಂವ್ ಎಂಬ ಸ್ವಾಭಿಮಾನಕ್ಕಾಗಿ ಮತ್ತು ಸಾಮಾಜಿಕ ಮನ್ನಣೆಗಾಗಿ ನಡೆದ ಯುದ್ಧ

ಇಡೀ ಪ್ರಪಂಚದಾದ್ಯಂತ ಜನರು ಜನವರಿ ಒಂದರಂದು ಹೊಸ ವರ್ಷವನ್ನು ಸಂಭ್ರಮದಲ್ಲಿ ಆಚರಿಸುತ್ತಾರೆ. ಆದರೆ ಇನ್ನೊಂದು ಕಡೆ ಜನವರಿ ಒಂದರಂದು ಅಂಬೇಡ್ಕರ್ ಅನುಯಾಯಿಗಳು, ಅಂಬೇಡ್ಕರ್ ವಾದಿಗಳು, ಶೋಷಿತರು ಹಾಗೂ ಅಸ್ಪೃಶ್ಯರು ಮಹಾರಾಷ್ಟ್ರದ ಪುಣೆಯ ಬಳಿ ಇರುವ ಭೀಮಾ ಕೋರೆಗಾಂವ್ ಗ್ರಾಮದಲ್ಲಿರುವ ವಿಜಯಸ್ತಂಭದ ಬಳಿ ಸೇರಿ ಹಾಗೂ ತಾವು ಇರುವಲ್ಲಿಯೇ ತಮ್ಮ ಸ್ವಾತಂತ್ರಕ್ಕಾಗಿ, ಸಾಮಾಜಿಕ ಮನ್ನಣೆಗಾಗಿ ಜೀವತೆತ್ತ ವೀರಯೋಧರನ್ನು ಸ್ಮರಿಸುತ್ತಾರೆ.

ಐತಿಹಾಸಿಕ ಹಿನ್ನೆಲೆ

 ಛತ್ರಪತಿ ಶಿವಾಜಿ ಮರಾಠ ಸಾಮ್ರಾಜ್ಯವನ್ನು ಸ್ಥಾಪಿಸಿ ಆಳ್ವಿಕೆ ಮಾಡುವ ಕಾಲದಲ್ಲಿ ಮಹರ್ ಸೈನಿಕರನ್ನು ಹಾಗೂ ಸೈನ್ಯದಲ್ಲಿ ಅವರ ಮಹತ್ವವನ್ನ ಅರಿತು ತನ್ನ ಸೈನ್ಯದಲ್ಲಿ ಸೇರಿಸಿಕೊಂಡು ಅವರನ್ನು ಸಮಾನವಾಗಿ ಕಾಣುತ್ತಿದ್ದ. ಕಾಲಾನಂತರ ಶಿವಾಜಿ ಮತ್ತು ಅವನ ಉತ್ತರಾಧಿಕಾರಿಗಳ ಆಡಳಿತದ ನಂತರ ಪೇಶ್ವಗಳ ಆಡಳಿತ ಕಾಲದಲ್ಲಿ ಮರಾಠರಲ್ಲಿ ಅಧಿಕಾರಕ್ಕಾಗಿ ಅಂತರ್ ಕಲಹ ಉಂಟಾಗಿ ಮರಾಠರು ಐದು ಶಕ್ತಿ ಕೇಂದ್ರಗಳಾಗಿ ವಿಭಜನೆಯಾಗುತ್ತಾರೆ. ಪುಣೆಯ ಪೇಶ್ವೇಗಳು, ನಾಗಪುರದ ಬೋನ್ಸ್ಲೆಗಳು, ಇಂದೋರ್ ನ ಹೋಳ್ಕರ್, ಗ್ವಾಲಿಯರ್ ನ ಸಿಂಧಿಯಾ ಮತ್ತು ಬರೋಡ ಗಾಯಕ್ ವಾಡ್ ಹೀಗೆ ಐದು ಶಕ್ತಿಕೇಂದ್ರ ಗಳಾಗಿ ವಿಭಜನೆಯಾಗುತ್ತಾರೆ.

 ಪುಣೆಯ ಪೇಶ್ವೇಗಳಲ್ಲಿ ಬಾಲಾಜಿ ವಿಶ್ವನಾಥ, ಒಂದನೇ ಬಾಜೀರಾಯ,ಬಾಲಾಜಿ ಬಾಜೀರಾಯ ಹೀಗೆ ಹಲವಾರು ಪ್ರಮುಖರು ಆಳ್ವಿಕೆ ಮಾಡುತ್ತಾರೆ. ಕೊನೆಯ ಹಾಗೂ 13ನೇ ಪೇಶ್ವೆಯಾಗಿ ಆಳ್ವಿಕೆ ಮಾಡಿದ್ದು ಎರಡನೇ ಬಾಜೀರಾಯ.

 ಈತ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡು 1803 ರಿಂದ 1818 ರವರೆಗೆ ಆಳ್ವಿಕೆ ಮಾಡುತ್ತಾನೆ. ಈ ಅವಧಿಯಲ್ಲಿ ಆತ ಮನುಸ್ಮೃತಿಗೆ ಅನುಗುಣವಾಗಿ ಆಳ್ವಿಕೆ ನಡೆಸುತ್ತಿದ್ದ. ಮನುಷ್ಯ ಮನುಷ್ಯರ ನಡುವೆ ತಾರತಮ್ಯ ಇತ್ತು.ಅಸ್ಪೃಶ್ಯರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿತ್ತು. ಅವರು ಬೀದಿಗಳಲ್ಲಿ ಅವರ ಉಗುಳು ನೆಲಕ್ಕೆ ಬೀಳಬಾರದು ಎನ್ನುವ ಕಾರಣಕ್ಕೆ ಕೊರಳಿಗೆ ತೆಂಗಿನ ಕರಟ ಹಾಗೂ ಅವರ ಹೆಜ್ಜೆಯ ಗುರುತುಗಳನ್ನು ಮೇಲ್ಜಾತಿಯವರು ತುಳಿಯಬಾರದು ಅನ್ನುವ ಕಾರಣಕ್ಕೆ ಸೊಂಟಕ್ಕೆ ಕಸಬರಿಗೆ ಕಟ್ಟಿಕೊಂಡು ಅವರ ಹೆಜ್ಜೆ ಗುರುತುಗಳನ್ನು ಅಳಿಸುತ್ತಾ ಹೋಗಬೇಕಿತ್ತು. ಅಲ್ಲದೆ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ನಾ ಬರುತಿದ್ದೇನೆ ಎನ್ನುವ ಶಬ್ದ ಮಾಡಬೇಕಿತ್ತು. ಹಾಗೆಯೇ ಮದ್ಯಾಹ್ನದ ಉರಿಬಿಸಿಲಿನಲ್ಲಿ ತಿರುಗಾಡಬೇಕಿತ್ತು. ಏಕೆಂದರೆ ಬೇರೆ ಸಮಯದಲ್ಲಿ ತಿರುಗಾಡಿದರೆ ಅವನ ನೆರಳು ಬೇರೆಯವರಿಗೆ ಸೋಕುತ್ತದೆ ಅನ್ನುವ ಕಾರಣಕ್ಕಾಗಿ.

ಇಷ್ಟಲ್ಲದೇ ಸೈನ್ಯದಲ್ಲೂ ಅಸ್ಪೃಶ್ಯರನ್ನು ಅವಮಾನಿಸಿ ಸೈನ್ಯದಿಂದ ತೆಗೆಯಲಾಗುತ್ತಿತ್ತು. ಆದುದರಿಂದ ಮಹರ್ ಸೈನಿಕರು ಈಸ್ಟ್ ಇಂಡಿಯಾ ಕಂಪನಿ ಸೈನ್ಯಕ್ಕೆ ಸೇರುತಿದ್ದರು.

ಒಂದು ದಿನ ಕೆಲವು ಮಹರ್ ಸೈನಿಕರು ಸಿದ್ದನಾಕನ ನೇತೃತ್ವದಲ್ಲಿ ಎರಡನೇ ಬಾಜೀರಾಯನನ್ನ ಭೇಟಿ ಮಾಡಿ ನಾವು ಬ್ರಿಟಿಷ್ ಸೈನ್ಯ ಸೇರುವುದಿಲ್ಲ ನಾವು ನಿಮ್ಮ ವಿರುದ್ಧ ಹೋರಾಟ ಮಾಡುವುದಿಲ್ಲ. ನಾವು ನಿಮ್ಮ ಸೈನ್ಯದಲ್ಲಿ ಸೇರುತ್ತೇವೆ ನಮಗೆ ಸಾಮಾಜಿಕ ಆರ್ಥಿಕ ಸ್ಥಾನಮಾನ ಕೊಡಿ ಎಂದು ಕೇಳಿಕೊಂಡರು. ಅದಕ್ಕೆ ಎರಡನೇ ಬಾಜೀರಾಯ ಯಾವುದೇ ಕಾರಣಕ್ಕೂ ನಿಮಗೆ ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನ ಕೊಡುವುದಿಲ್ಲ ನೀವು ಇರುವುದೇ ಮೇಲ್ಜಾತಿಯವರ ಸೇವೆ ಮಾಡಲಿಕ್ಕೆ ಎಂದು ಗಹಗಹಿಸಿ ನಕ್ಕು ಅವಮಾನಿಸಿ ನಿಮ್ಮನ್ನ ಯಾರು ಒಳಗೆ ಬಿಟ್ಟದ್ದು ಎಂದು ಕೇಳಿ ಒಳಗೆ ಬಿಟ್ಟ ಕಾವಲುಗಾರ ನನ್ನ ಕರೆಸಿ ಅವನಿಗೆ ಶಿಕ್ಷೆಯನ್ನ ಘೋಷಿಸಿದನು.

 ಇದರಿಂದ ಬೇಸರಗೊಂಡ ಸಿದ್ದನಾಕನ ನೇತೃತ್ವದ ಮಹರ್ ಸೈನಿಕರು ನೀವು ಹೇಳಿದ ಕೆಲಸ ನಾವು ಮಾಡುವುದಿಲ್ಲ ನಾವು ಬ್ರಿಟಿಷ್ ಸೇನೆಯ ಸೇರಿ ನಿಮ್ಮೊಂದಿಗೆ ಯುದ್ಧ ಮಾಡಿಯೇ ತೀರುತ್ತೇವೆ. ಯುದ್ಧಭೂಮಿಯಲ್ಲಿ ಭೇಟಿಯಾಗೋಣ ಎಂದು ಸವಾಲು ಹಾಕಿ ಬಂದರು. ನಮ್ಮ ಸಮುದಾಯವನ್ನ ಅವಮಾನಿಸಿದವನ ವಿರುದ್ಧ ಏನಾದರೂ ಮಾಡಿ ಸೇಡು ತೀರಿಸಿಕೊಳ್ಳಬೇಕು.ಸೇಡು ತೀರಿಸಿಕೊಂಡು ಚರಿತ್ರೆ ಸೃಷ್ಟಿಸಬೇಕು ಎಂದು ತೀರ್ಮಾನಿಸಿ ಈಸ್ಟ್ ಇಂಡಿಯಾ ಕಂಪನಿಯ ಸೇನೆ ಸೇರಿದರು.

ಯುದ್ಧದ ಆರಂಭ

 1817 ರಿಂದ 18ರವರೆಗೆ ಬ್ರಿಟಿಷರು ಮತ್ತು ಮರಾಠರ ಒಕ್ಕೂಟದ ನಡುವೆ ಮೂರನೇ ಆಂಗ್ಲೋ ಮರಾಠ ಯುದ್ಧ ನಡೆಯಿತು. ಈ ಯುದ್ಧದಲ್ಲಿ ಪೇಶ್ವೆ, ನಾಗಪುರದ ಬೋನ್ಸ್ಲೆ, ಇಂದೋರ್ ನ ಹೋಳ್ಕರ್ ಮತ್ತು ಗ್ವಾಲಿಯರ್ ನ ಸಿಂಧಿಯಾ ಭಾಗವಹಿಸಿದ್ದರು.

 ಯುದ್ಧದ ಭಾಗವಾಗಿ ಅನೇಕ ಸರಣಿ ಯುದ್ಧಗಳು ನಡೆದವು. ಆ ಸರಣಿ ಯುದ್ಧಗಳಲ್ಲಿ ಪ್ರಮುಖ ಯುದ್ಧ ಭೀಮಾ ಕೋರೆಗಾಂವ್ ಯುದ್ಧವಾಗಿತ್ತು.

 ಇದು ಬ್ರಿಟಿಷರ ಮತ್ತು ಪೇಶ್ವೇ ಎರಡನೇ ಬಾಜೀ ರಾಯನ ನಡುವೆ 1818 ಜನವರಿ 01ರಂದು ನಡೆಯಿತು. ಈ ಯುದ್ಧ ಬಾಂಬೆಯ ಎರಡನೇ ಬೆಟಾಲಿಯನ್ ಸ್ಥಳೀಯ ಕಾಲಾಳು ಪಡೆಯಾದ ಮಹರ್ ರೆಜಿಮೆಂಟ್ ಮತ್ತು ಪೇಶ್ವೆಯ ಸೈನ್ಯದ ನಡುವೆ ನಡೆಯಿತು. ಬ್ರಿಟಿಷ್ ಸೈನ್ಯದ ನೇತೃತ್ವವನ್ನು ಕ್ಯಾಪ್ಟನ್ ಫ್ರಾನ್ಸಿಸ್ ಸ್ಟಾಂಟನ್ಟ್ ವಹಿಸಿದ್ದನು. ಸಿದ್ದನಾಕ ಮಹರ್ ರೆಜಿಮೆಂಟ್ ನ ಪ್ರಮುಖ ಸೈನಿಕನಾಗಿದ್ದನು. ಮಹರ್ ರೆಜಿಮೆಂಟಿನಲ್ಲಿ 500 ಸೈನಿಕರಿದ್ದು ಬಹುತೇಕರು ಮಹರ್ ಜಾತಿಗೆ ಸೇರಿದವರಾಗಿದ್ದು ಉಳಿದವರು ಮಾಂಗ್ ಮತ್ತು ಮುಸ್ಲಿಮರಾಗಿದ್ದರು.ಆ ಕಾರಣದಿಂದ ಆ ರೆಜಿಮೆಂಟಿಗೆ ಮಹರ್ ರೆಜಿಮೆಂಟ್ ಎಂದು ಕರೆಯಲಾಗುತ್ತಿತ್ತು.ಇವರ ಸಹಾಯಕ್ಕೆ ಎರಡು ನೂರು ಅಶ್ವ ಪಡೆ ಇತ್ತು.ಎದುರಾಳಿ ಪೇಶ್ವೇ ಸೈನ್ಯದಲ್ಲಿ 20 ಸಾವಿರ ಅಶ್ವಪಡೆ 8 ಸಾವಿರ ಕಾಲಾಳು ಪಡೆಯಿದ್ದು ಒಟ್ಟು 28,000 ಸೈನಿಕರಿದ್ದರು. ಈ ಯುದ್ಧದ ಬಗ್ಗೆ ಬ್ರಿಟಿಷರಿಗಿಂತ ಮಹರ್ ಸೈನಿಕರಿಗೆ ತವಕ ಹೆಚ್ಚಿತ್ತು.ಕಾರಣ ಮಹರ್ ಸೈನಿಕರಿಗೆ ಈ ಯುದ್ಧ ಮಾಡು ಇಲ್ಲವೇ ಮಡಿ ಯುದ್ಧವಾಗಿತ್ತು.

 1817 ಡಿಸೆಂಬರ್ 31 ರಂದು ರಾತ್ರಿ 8 ಗಂಟೆಗೆ ಮಹರ್ ಸೈನಿಕರು ಪುಣೆಯ ಬಳಿಯ ಸಿರೂರಿನಿಂದ ಹೊರಟು ಸುಮಾರು 25km ಕಾಲ್ನಡಿಗೆಯಲ್ಲಿ ಸರಿಯಾದ ಊಟ, ಕುಡಿಯುವ ನೀರಿಲ್ಲದೇ ಹಾಗೂ ನಿದ್ರೆಯಿಲ್ಲದೇ ನಡೆದು ಭೀಮಾ ನದಿಯ ದಂಡೆಯ ಕೋರೆಗಾಂವ್ ಗ್ರಾಮ ತಲುಪಿ 1818 ಜನವರಿ 01 ರಂದು ಪೇಶ್ವೇ ಸೈನ್ಯದ ವಿರುದ್ಧ ಸತತವಾಗಿ 12 ಗಂಟೆ ಯುದ್ಧ ಮಾಡಿದರು.

 ಈ ಯುದ್ಧದಲ್ಲಿ 600ಕ್ಕೂ ಹೆಚ್ಚು ಪೇಶ್ವೆ ಸೈನಿಕರು ಮಡಿದರು . ಪೇಶ್ವೆ ಎರಡನೇ ಬಾಜೀರಾಯ ಉಳಿದ ಸೈನಿಕರೊಂದಿಗೆ ಯುದ್ಧ ಭೂಮಿಯಿಂದ ಪಲಾಯನ ಮಾಡಿದನು.ಇದು ಕೇವಲ ಎರಡನೇ ಬಾಜೀರಾಯನ ವಿರುದ್ಧ ಪಡೆದ ಜಯವಾಗಿರಲಿಲ್ಲ. ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಆಡಳಿತಕ್ಕೆ ಹೊಡೆದ ಕೊನೆಯ ಮೊಳೆಯಾಗಿತ್ತು.ಅದರ ಶ್ರೇಯ ಶೌರ್ಯ ಮೆರೆದ ಮಹರ್ ಸೈನಿಕರಿಗೆ ಸೇರಬೇಕು.

ಸಾಮಾನ್ಯವಾಗಿ ಚರಿತ್ರೆಯಲ್ಲಿ ಯುದ್ಧಗಳು ಹೆಣ್ಣು, ಹೊನ್ನು, ಮಣ್ಣು ಹಾಗೂ ಅಧಿಕಾರಕ್ಕಾಗಿ ನಡೆದಿವೆ. ಆದರೆ ಈ ಯುದ್ಧ ಶತ ಶತಮಾನಗಳ ಶೋಷಣೆ ವಿರುದ್ಧ ಹಾಗೂ ಸ್ವಾಭಿಮಾನಕ್ಕೆ ನಡೆದ ಯುದ್ಧವಾಗಿತ್ತು.

 ಯುದ್ಧದ ನಂತರ ಯುದ್ಧ ನಡೆದ ಸ್ಥಳದಲ್ಲಿ ಬ್ರಿಟಿಷ್ ಸರ್ಕಾರ ಅಲ್ಲೊಂದು ವಿಜಯಸ್ತಂಭವನ್ನ ನಿರ್ಮಿಸಿ ಯುದ್ಧದಲ್ಲಿ ಮಡಿದ 22 ಮಹರ್ ಸೈನಿಕರ ಹೆಸರನ್ನು ಕೆತ್ತಿಸಿತು. ಈ ಯುದ್ಧದಲ್ಲಿ ಒಟ್ಟಾರೆ ಬ್ರಿಟಿಷ್ ಸೈನ್ಯದಲ್ಲಿ 49 ಸೈನಿಕರು ಮಡಿದಿದ್ದರು.

 ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು

 ಇಂತಹ ಒಂದು ಸ್ವಾಭಿಮಾನದ ಯುದ್ಧ ನಡೆದಿದ್ದರೂ ಅದು ಭಾರತದ ಚರಿತ್ರೆಯ ಕಾಲ ಗರ್ಭದಲ್ಲಿ ಹೂತು ಹೋಗಿತ್ತು. ಆದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು 1920 ರಿಂದ 1923 ರ ವರೆಗೆ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಅಧ್ಯಯನ ಮಾಡುತ್ತಿರುವಾಗ ಲಂಡನ್ನಿನ ಗ್ರಂಥಾಲಯದಲ್ಲಿ ಓದುತ್ತಿರುವಾಗ ಒಂದು ಪುಸ್ತಕವನ್ನು ನೋಡಿ ಓದಿ ಯುದ್ಧದ ಬಗ್ಗೆ ತಿಳಿದುಕೊಂಡರು. ನಂತರ ಕಾಲ ಗರ್ಭದಲ್ಲಿ ಹೂತು ಹೋಗಿದ್ದ ಈ ಯುದ್ಧ ನಡೆದ ಸ್ಥಳಕ್ಕೆ ಬಾಬಾ ಸಾಹೇಬರು 1927 ಜನವರಿ 01 ರಂದು ಭೇಟಿ ಕೊಟ್ಟರು. ತದನಂತರ ಬಾಬಾ ಸಾಹೇಬರು ಪ್ರತಿ ವರ್ಷ ಜನವರಿ ಒಂದರಂದು ಈ ಸ್ಥಳಕ್ಕೆ ಭೇಟಿ ನೀಡುತ್ತಿದ್ದರು. ದುಂಡು ಮೇಜಿನ ಸಮ್ಮೇಳನಗಳಿಗೆ ಹೋದಾಗಲೂ ಈ ಘಟನೆ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿದ್ದರು.ಹೀಗೆ ಕಾಲ ಗರ್ಭದಲ್ಲಿ ಹೂತುಹೊಗಿದ್ದ ಈ ಸ್ವಾಭಿಮಾನದ ಯುದ್ಧದ ಬಗ್ಗೆ ಬೆಳಕು ಚೆಲ್ಲಿದ ಶ್ರೇಯ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಲ್ಲಬೇಕು.

 ನಮ್ಮ ಸೈನಿಕರ ಶೌರ್ಯವನ್ನ ಸ್ಮರಿಸೋಣ ಮತ್ತು ಅವರಿಗೆ ನಮನ ಸಲ್ಲಿಸೋಣ.ಇದು ಎಲ್ಲಾ ಅಂಬೇಡ್ಕರ್ ವಾದಿಗಳ, ಶೋಷಿತರ ಹಾಗೂ ಈ ದೇಶದ ಮೂಲ ನಿವಾಸಿಗಳ ನಿಜವಾದ ಹೊಸ ವರ್ಷದ ಆಚರಣೆಯಾಗಬೇಕಿದೆ.

ವಿಶೇಷ ಲೇಖನ:ರುದ್ರಜ ಕಾನ್ಕೆ

  ಸಹಾಯಕ ಪ್ರಾಧ್ಯಾಪಕರು,ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು

 ಜೈ ಭೀಮಾ ಕೋರೆಗಾಂವ್

 ಜೈ ಸಿದ್ಧನಾಕ...ಜೈ ಭೀಮ್