ಸ್ತನ್ಯಪಾನ ಸಪ್ತಾಹ:LKG&UKG ಪ್ರಾರಂಭೋತ್ಸವ ಕಾರ್ಯಕ್ರಮ

ಮಡಿಕೇರಿ:ಎಂ.ಬಾಡಗ -1 ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ,ಕಾಂತರೂ ಮುರ್ನಾಡು ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಎಲ್.ಕೆ.ಜಿ ಹಾಗೂ ಯುಕೆಜಿಣ ಪ್ರಾರಂಭೋತ್ಸವ ಮತ್ತು ಸನ್ಮಾನ ಕಾರ್ಯಕ್ರಮ ನೆರವೇರಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಮೇಪಾದಂಡ ಸವಿತಾ ಕೀರ್ತನ್, 2025ರ ಸ್ತನ್ಯಪಾನ ಸಪ್ತಾಹದ ಘೋಷವಾಕ್ಯ "ಸ್ತನ್ಯಪಾನಕ್ಕೆ ಆದ್ಯತೆ ನೀಡಿ ಸುಸ್ಥಿರ ಬೆಂಬಲ ವ್ಯವಸ್ಥೆ ಗಳನ್ನು ರಚಿಸಿ "ಎಂಬುದನ್ನು ತಿಳಿಸಿ ಈ ಘೋಷವಾಕ್ಯವು ತಾಯಂದಿರಿಗೆ ಹಾಲುಣಿಸಲು ಬೆಂಬಲಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ. ಅದೇ ರೀತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಗಸ್ಟ್ ಒಂದರಿಂದ ಏಳರವರೆಗೆ ಸ್ತನ್ಯಾಪಾನ ಸಪ್ತಾಹವನ್ನು ಎಲ್ಲಾ ಅಂಗನವಾಡಿಗಳಲ್ಲಿ ಆಚರಿಸಿ ಫಲಾನುಭವಿಗಳಿಗೆ ಅರಿವು ಮೂಡಿಸುವ ಕಾರ್ಯ ನಡೆಯುವುದು ಎಂದು ತಿಳಿಸಿದರು. ಮಕ್ಕಳು ಹುಟ್ಟಿದ ಅರ್ಧ ಗಂಟೆಯೊಳಗೆ ರೋಗ ನಿರೋಧಕ ಶಕ್ತಿ ಹೆಚ್ಚಿರುವ ಎದೆ ಹಾಲನ್ನು ತಪ್ಪದೇ ತಾಯಂದಿರು ಮಕ್ಕಳಿಗೆ ನೀಡಬೇಕು, ಮಗುವಿಗೆ ಆರು ತಿಂಗಳವರೆಗೆ ಕೇವಲ ಎದೆಹಾಲನ್ನೇ ನೀಡಬೇಕು, ಆರು ತಿಂಗಳ ನಂತರ ಮೇಲು ಆಹಾರ ಪ್ರಾರಂಭಿಸಬೇಕು ಎಂದರು. ಎರಡು ವರ್ಷದವರೆಗೆ ಮೇಲು ಆಹಾರದೊಂದಿಗೆ ಎದೆ ಹಾಲನ್ನು ಮುಂದುವರಿಸಬೇಕು, ಇದರಿಂದ ಮಗುವಿನ ಆರೋಗ್ಯ ಮತ್ತು ಮೆದುಳಿನ ಬೆಳವಣಿಗೆ ಉತ್ತಮ ರೀತಿಯಲ್ಲಿ ಆಗುವುದು ಇದರೊಂದಿಗೆ ತಾಯಿಯ ಆರೋಗ್ಯವು ಸೌಂದರ್ಯವೂ ಕೂಡ ಹೆಚ್ಚುವುದು ಎಂದು ತಿಳಿಸಿದರು.ಆರು ತಿಂಗಳ ಒಳಗೆ ಎದೆ ಹಾಲನ್ನು ಹೊರತುಪಡಿಸಿ ನೀರಿನ ಅಗತ್ಯವೂ ಕೂಡ ಮಗುವಿಗೆ ಇರುವುದಿಲ್ಲ ಎಂದು ತಿಳಿಸಿದರು.
ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಶನ್ ರೈ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸೌಲಭ್ಯಗಳ ಸದುಪಯೋಗ ಮಕ್ಕಳು ಪಡೆಯಲು ತಂದೆ-ತಾಯಂದಿರು ಪ್ರೋತ್ಸಾಹಿಸಿ ಮಕ್ಕಳ ಅಭಿವೃದ್ಧಿಗಾಗಿ ಸರ್ಕಾರದೊಂದಿಗೆ ಕೈಜೋಡಿಸಬೇಕು.ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಕು ಎಂದು ಕರೆ ನೀಡಿದರು. ಅಭಿವೃದ್ಧಿಗೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮೇಲ್ವಿಚಾರಕರು ಪಡುತ್ತಿರುವ ಶ್ರಮಕ್ಕಾಗಿ ಅಭಿನಂದಿಸಿದರು.
ಉಪಾಧ್ಯಕ್ಷರಾದ ರೇಖಾ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಯಾವುದೇ ಫಲಾ ಪೇಕ್ಷೆ ಇಲ್ಲದೆ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ.ಇವರಿಗೆ ಗ್ರಾಮ ಪಂಚಾಯಿತಿ ಮತ್ತು ಸಮುದಾಯದಿಂದ ಮತ್ತಷ್ಟು ಪ್ರೋತ್ಸಾಹವನ್ನು ನೀಡಬೇಕು ಎಂದು ತಿಳಿಸಿದರು. ಪಂಚಾಯಿತಿಯ ಸದಸ್ಯರಾದ ಶ್ರೀಮತಿ ಸೌಮ್ಯ ಕಾವೇರಪ್ಪ, ಶ್ರೀಮತಿ ವಿಜಯಲಕ್ಷ್ಮಿ, ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕರ ಜಿಲ್ಲಾಧ್ಯಕ್ಷರಾದ ಶ್ರೀಮತಿ ಸುಮಿತ್ರ ಅವರು ಕಾರ್ಯಕ್ರಮದ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಪ್ರಸನ್ನ ಕುಮಾರ್ ಮಾತನಾಡಿ, ಎಲ್ಲಾ ಫಲಾನುಭವಿಗಳಿಗು ಇಲಾಖೆಯಿಂದ ದೊರೆಯುವ ಎಲ್ಲಾ ಯೋಜನೆಗಳ ಸೌಲಭ್ಯವನ್ನು ಸೂಕ್ತ ಸಮಯದಲ್ಲಿ ದೊರಕಿಸುವುದಾಗಿ ಭರವಸೆ ನೀಡಿದರು.