ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಆಡಳಿತಮಾತ್ಮಕವಾಗಿ ಕಾರ್ಯನಿರ್ವಹಿಸದೆ ಮೈಮರೆತಿದೆ; ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸಿ.ಕೆ ಬೋಪಣ್ಣ ಆರೋಪ
ಗೋಣಿಕೊಪ್ಪ: ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಆಡಳಿತಮಾತ್ಮಕವಾಗಿ ಕಾರ್ಯನಿರ್ವಹಿಸದೆ ಮೈಮರೆತಿದೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸಿ.ಕೆ ಬೋಪಣ್ಣ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಣಿಕೊಪ್ಪ ವ್ಯಾಪ್ತಿಗೆ ಒಳಪಟ್ಟ ಪ್ರದೇಶಗಳಲ್ಲಿ ಶುಚಿತ್ವದ ಕೊರತೆ ಕಾಡುತ್ತಿದೆ. ಈ ಬಗ್ಗೆ ಪಂಚಾಯಿತಿ ನಿರ್ಲಕ್ಷ ನಡೆಯನ್ನು ಅನುಸರಿಸುತ್ತಿರುವುದು ಬೇಜವಾಬ್ದಾರಿತನ ವರ್ತನೆ ಎಂದು ಆರೋಪಿಸಿದ್ದಾರೆ.
ಪಟ್ಟಣದಲ್ಲಿರುವ ಚರಡಿಗಳ ತುಂಬಾ ತ್ಯಾಜ್ಯಗಳು ತುಂಬಿಕೊಂಡು ದುರ್ವಾಸನೆ ಬೀರುತ್ತಿದೆ. ಸೊಳ್ಳೆ, ನೊಣಗಳ ವಾಸಸ್ಥಾನವಾಗಿ ಸ್ಥಳೀಯ ನಿವಾಸಿಗಳಿಗೆ ರೋಗ ಹರಡುವ ಆತಂಕವನ್ನು ಸೃಷ್ಟಿಸಿದೆ.
ಆದರೂ, ಈ ವಿಚಾರವಾಗಿ ಪಂಚಾಯಿತಿ ಗಮನ ಹರಿಸದೆ ಇರುವುದು ಪಂಚಾಯಿತಿ ವ್ಯಾಪ್ತಿಯ ಜನರ ಮೇಲೆ ಕಾಳಜಿ ಹೊಂದಿಲ್ಲ ಎಂಬುದನ್ನ ತೋರಿಸುತ್ತಿದೆ. ಅಧ್ಯಕ್ಷರಾದವರು ನಿಭಾಯಿಸಬೇಕಾದ ತನ್ನ ಕರ್ತವ್ಯಗಳನ್ನು ಮರೆತು ಅಭಿವೃದ್ಧಿ ಅಧಿಕಾರಿಯ ಮೇಲೆ ಗೂಬೆ ಕೂರಿಸುತ್ತಾ ಸಮಯ ವ್ಯರ್ಥ ಮಾಡುತ್ತಿರುವುದರಿಂದ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ದೂರಿದ್ದಾರೆ.
ಬೈಪಾಸ್ ರಸ್ತೆಗಳಲ್ಲಿ ವಾಹನ ಸಂಚಾರವೆ ಅಸಾಧ್ಯವಾಗಿದೆ. ರಸ್ತೆಗಳಲ್ಲಿ ಡಾಂಬರೀಕರಣ ಕಿತ್ತುಹೋಗಿ ವಾಹನ ಸಂಚಾರ ದುಸ್ತರವಾಗಿದೆ. ಕೊಪ್ಪ ರಸ್ತೆಗೆ ಹೋಗುವ ಮಾರ್ಗದಲ್ಲಿ ಕೀರೆ ಹೊಳೆ ದಡದಲ್ಲಿ ಅಪಾರ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯಗಳನ್ನ ಸಂಗ್ರಹಿಸಿಟ್ಟು ಅನಾರೋಗ್ಯಕರ ವಾತಾವರಣವನ್ನು ಸೃಷ್ಟಿಸಲು ಪಂಚಾಯಿತಿ ಕಾರಣವಾಗುತ್ತಿದೆ.
ಮೈಸೂರಿಗೆ ತೆರಳುವ ಮಾರ್ಗದ ಹರಿಶ್ಚಚಂದ್ರಪುರದಲ್ಲಿಯೂ ರಸ್ತೆ ಬದಿಯಲ್ಲಿಯೇ ಸಮಗ್ರವಾಗಿ ಕಸದ ರಾಶಿಯನ್ನು ಇಡಲಾಗಿದೆ. ಪಂಚಾಯತ್ ವ್ಯಾಪ್ತಿಗೆ ಸಂಬಂಧಪಟ್ಟಂತೆ ಎಂಟು ವಿಭಾಗಗಳಲ್ಲಿಯೂ ಸಂಚರಿಸಿ ಪ್ರತಿ ಕಡೆಯಲ್ಲೂ ಕಣ್ಣು ಹಾಯಿಸಿದರೆ ಪ್ಲಾಸ್ಟಿಕ್ ತ್ಯಾಜ್ಯಗಳೆ ತುಂಬಿಕೊಂಡಿದೆ.
ಪಂಚಾಯಿತಿ ತನ್ನ ಜವಾಬ್ದಾರಿತನವನ್ನು ಮರೆತು ಮೈಗಳ್ಳತನವನ್ನು ಅನುಸರಿಸುತ್ತಿದೆ ಎಂದು ಆರಪಿಸಿದ್ದಾರೆ.
ಗೋಣಿಕೊಪ್ಪ ವ್ಯಾಪ್ತಿಯಲ್ಲಿ ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡುತ್ತಿಲ್ಲ. ಹೋಟೆಲ್‌ಗಳಲ್ಲಿ ಸರಿಯಾದ ಕುಡಿಯುವ ನೀರು ವಿತರಣೆಯಾಗುತ್ತಿಲ್ಲ. ಮಾಂಸ ಮತ್ತು ಮೀನಿನ ತ್ಯಾಜ್ಯಗಳನ್ನು ಕೀರೆ ಹೊಳಗೆ ನೇರವಾಗಿ ಬಿಡಲಾಗುತ್ತಿದೆ. ಶೌಚ ನೀರುಗಳನ್ನು ಮತ್ತು ತ್ಯಾಜ್ಯಗಳನ್ನ ನೇರವಾಗಿ ಚರಂಡಿಗಳಿಗೆ ಸುರಿಯಲಾಗುತ್ತಿದೆ. ಇದರಿಂದಾಗಿ ಕಲುಷಿತ ವಾತಾವರಣ ನಿರ್ಮಾಣವಾಗಿ ಜನರಿಗೆ ರೋಗ ಹರಡುವ ಭೀತಿ ಎದುರಾಗಿದೆ.
ತಕ್ಷಣವೇ ಈ ವಿಚಾರವಾಗಿ ಕ್ರಮ ಕೈಗೊಳ್ಳದೆ ಇದ್ದರೆ ಪಂಚಾಯಿತಿ ವಿರುದ್ಧ ಬೃಹತ್ ಮಟ್ಟದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.