ಏರ್‌ಗನ್ ನಿಂದ ತಪ್ಪಿ ಉದ್ಯಮಿಗೆ ಗುಂಡು ತಗುಲಿದ ಪ್ರಕರಣ; ಕಾನೂನು ವಿದ್ಯಾರ್ಥಿ ಬಂಧನ
ಬೆಂಗಳೂರು: ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣರಾವ್ ಪಾರ್ಕ್ ಬಳಿ ಏರ್‌ಗನ್ ನಿಂದ ಅಚಾನಕ್‌ವಾಗಿ ಗುಂಡು ತಗುಲಿ ಉದ್ಯಮಿಯೊಬ್ಬರು ಗಾಯಗೊಂಡ ಪ್ರಕರಣದಲ್ಲಿ ಕಾನೂನು ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಡಿಸೆಂಬರ್ 10ರ ಸಂಜೆ ಸುಮಾರು 8.30ರ ವೇಳೆಗೆ ವಾಯುವಿಹಾರಕ್ಕೆಂದು ಪಾರ್ಕ್ ಬಳಿ ನಡೆದುಕೊಂಡು ಹೋಗುತ್ತಿದ್ದ ಉದ್ಯಮಿ ರಾಜಗೋಪಾಲ್ ಅವರ ಕತ್ತಿನ ಹಿಂಭಾಗಕ್ಕೆ ಏರ್‌ಗನ್‌ನಿಂದ ಹಾರಿದ ಗುಂಡು ತಗುಲಿತ್ತು. ಗಾಯಗೊಂಡ ಅವರನ್ನು ತಕ್ಷಣ ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಬಸವನಗುಡಿ ಪೊಲೀಸರು ಆರಂಭದಲ್ಲಿ ಗುಂಡು ಎಲ್ಲಿಂದ ಬಂದಿದೆ ಎಂಬುದರ ಕುರಿತು ಕೂಲಂಕಷ ತನಿಖೆ ನಡೆಸಿದರು. ಗಾಯಾಳು ರಾಜಗೋಪಾಲ್ ಅವರು ಯಾರ ಮೇಲೂ ಅನುಮಾನ ವ್ಯಕ್ತಪಡಿಸಿರಲಿಲ್ಲ; ಯಾವುದೇ ಬೆದರಿಕೆ ಕರೆಗಳೂ ಬಂದಿರಲಿಲ್ಲ ಎಂದು ತಿಳಿಸಿದ್ದಾರೆ.
ಸುತ್ತಮುತ್ತಲಿನ ಕಟ್ಟಡಗಳು ಹಾಗೂ ಫ್ಲಾಟ್‌ಗಳನ್ನು ಪರಿಶೀಲಿಸಿದಾಗ ಸಮೀಪದ ಅಪಾರ್ಟ್‌ಮೆಂಟ್‌ನೊಂದರಲ್ಲಿ ವಾಸವಿದ್ದ ಮೊಹಮ್ಮದ್ ಅಫ್ಜಲ್ ಎಂಬಾತನ ಫ್ಲಾಟ್‌ನಿಂದ ಗುಂಡು ಹಾರಿರುವುದು ಪತ್ತೆಯಾಗಿದೆ. ತನಿಖೆಯಲ್ಲಿ ಆರೋಪಿ ಕಾನೂನು ವಿದ್ಯಾರ್ಥಿಯಾಗಿದ್ದು, ತನ್ನ ಮನೆಯೊಳಗೆ ಏರ್‌ಗನ್‌ನಿಂದ ಶೂಟಿಂಗ್ ಅಭ್ಯಾಸ ಮಾಡುತ್ತಿದ್ದಾಗ ಗುಂಡು ಗುರಿ ತಪ್ಪಿ ಹೊರಗೆ ಹೋಗಿ ಕೆಳಗಡೆ ನಡೆದುಕೊಂಡು ಹೋಗುತ್ತಿದ್ದ ರಾಜಗೋಪಾಲ್ ಅವರಿಗೆ ತಗುಲಿರುವುದು ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿ, ಬಳಸಿದ್ದ ಏರ್‌ಗನ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಕುರಿತು ಮುಂದಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
