ನವೆಂಬರ್ 06 ಮತ್ತು 07ರಂದು ಬೇಳೂರು ಸರ್ಕಾರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ

ಸೋಮವಾರಪೇಟೆ:ಬೇಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜೂ. 25ಕ್ಕೆ ನೂರು ವರ್ಷಗಳು ತುಂಬಿದ್ದು, ಅದರ ನೆನಪಿಗಾಗಿ ನವೆಂಬರ್ ತಿಂಗಳಿನಲ್ಲಿ ಅದ್ಧೂರಿ ಶತಮಾನೋತ್ಸವ ಕಾರ್ಯಕ್ರಮ ನಡೆಸಲಾಗುವುದು ಎಂದು ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕೆ.ಪಿ. ಕುಮಾರ್ ತಿಳಿಸಿದರು.
1925ರ ಜೂ.24 ರಂದು ಶಾಲೆ ಪ್ರಾರಂಭಗೊಂಡಿದೆ. ನೂರು ವರ್ಷಗಳ ಅವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಕಲಿತು, ದೇಶ ವಿದೇಶಗಳಲ್ಲಿ ಸಾಧನೆ ಮಾಡಿದ್ದಾರೆ. ಶತಮಾನೋತ್ಸವದ ನೆನಪಿಗಾಗಿ ಶಾಲಾ ಆವರಣದಲ್ಲಿ ನ. 6 ಮತ್ತು 7ರಂದು ಎರಡು ದಿನಗಳ ಕಾಲ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ, ಗುರುವಂದನ ಕಾರ್ಯಕ್ರಮ, ಶಾಲೆಯಲ್ಲಿ ಕಲಿತು ಸಾಧನೆಗೈದವರಿಗೆ ಸನ್ಮಾನ, ನೂರು ವರ್ಷಗಳಲ್ಲಿ ಶಾಲೆಯಲ್ಲಿ ಕೆಲಸ ಮಾಡಿದ ಸುಮಾರು 100ಕ್ಕೂ ಹೆಚ್ಚಿನ ಶಿಕ್ಷಕರು ಹಾಗು ಮರಣ ಹೊಂದಿದ ಶಿಕ್ಷಕರ ಕುಟುಂಬಸ್ಥರಿಗೆ ಸನ್ಮಾನ ಮಾಡಲಾಗುವುದು. ನೂರು ವರ್ಷಗಳನ್ನು ನೆನಪಿಸುವ ಸ್ಮರಣ ಸಂಚಿಕೆಯನ್ನು ಹೊರತರಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮಕ್ಕೆ ಶಿಕ್ಷಣ ಸಚಿವರು, ಹಾಲಿ ಶಾಸಕರು, ಮಾಜಿ ಶಾಸಕರು, ಸಂಸದರು ಸೇರಿದಂತೆ ಹಲವಾರು ಗಣ್ಯರನ್ನು ಆಹ್ವಾನಿಸಲಾಗುವುದು ಎಂದರು. ಕಾರ್ಯಕ್ರಮಕ್ಕೂ ಮುನ್ನ ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ಈ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು, ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು. ಹೆಚ್ಚಿನ ಮಾಹಿತಿಗಾಗಿ 8762696154 ಅಥವಾ 9632609421 ಸಂಪರ್ಕಿಸಲು ಮನವಿ ಮಾಡಿದರು.
ಗೋಷ್ಠಿಯಲ್ಲಿ ಸಂಘದ ಕಾರ್ಯಾಧ್ಯಕ್ಷ ಬಿ.ಎಸ್. ಆನಂದ, ಪ್ರಧಾನ ಕಾರ್ಯದರ್ಶಿ ಕೆ.ಪಿ. ಸುದರ್ಶನ್, ಸದಸ್ಯರಾದ ಬಿ.ಎನ್. ಬಸವರಾಜು, ಡಿ.ಕೆ. ಲತನ್ ಇದ್ದರು.