ನಿರಂತರ ಮಳೆ ಹಿನ್ನಲೆ ಕೊಡಗಿನ ಕಾಫಿ ಬೆಳೆಗಾರರು ಕಂಗಾಲು; ಬಿಜೆಪಿಯಿಂದ ಕಾಫಿ ತೋಟಗಳಲ್ಲಿ ಬೆಳೆ ಸಮೀಕ್ಷೆ

ನಿರಂತರ ಮಳೆ ಹಿನ್ನಲೆ ಕೊಡಗಿನ ಕಾಫಿ ಬೆಳೆಗಾರರು ಕಂಗಾಲು; ಬಿಜೆಪಿಯಿಂದ ಕಾಫಿ ತೋಟಗಳಲ್ಲಿ ಬೆಳೆ ಸಮೀಕ್ಷೆ

ಮಡಿಕೇರಿ:-ಈ ಬಾರಿ ಕೊಡಗು ಜಿಲ್ಲೆಯಲ್ಲಿ ಮೇ ತಿಂಗಳಿನಿಂದಲ್ಲೇ ನಿರಂತರವಾಗಿ ಮಳೆ‌ಯಾಗಿರುವುದರಿಂದ ನಾನಾ ರೀತಿಯ ಅವಾಂತರಗಳು ಮುಂದುವರೆದಿದೆ.ಈ ನಡುವೆ ಸೋಮವಾರಪೇಟೆ ಹಾಗೂ ಮಡಿಕೇರಿ ತಾಲೂಕಿನ ಹಲವಾರು ಭಾಗದಲ್ಲಿ ನಿರಂತರವಾಗಿ ಮಳೆ ಬಿದ್ದ ಪರಿಣಾಮದಿಂದ ಕಾಫಿ ಬೆಳೆಗಳು ನೆಲಕಚ್ಚಿದೆ.ಕಾಫಿ ತೋಟಗಳಿ ಸಂಪೂರ್ಣವಾಗಿ ಹಾಳಾಗಿದ್ದು, ಈ ವರ್ಷ ಹಾಗೂ ಮುಂದಿನ ವರ್ಷಕ್ಕೆ ಬೆಳೆಯೇ ಇಲ್ಲದೇ ಕಾಫಿ ಬೆಳೆಗಾರರು ಕಂಗಾಲು ಆಗಿದ್ದಾರೆ. ಈ ನಡುವೆ ಕೊಡಗಿನ ಬಿಜೆಪಿ ನಾಯಕರು ಕಾಫಿ ತೋಟಗಳಲ್ಲಿ ಸರ್ವೆ ಕಾರ್ಯವನ್ನು ನಡೆಸಿ ಕೇಂದ್ರ ಹಾಗೂ ರಾಜ್ಯ ‌ಸರ್ಕಾರಕ್ಕೆ ವರದಿ ನೀಡಲು ಮುಂದಾಗಿದ್ದಾರೆ. ಕಾಫಿ ತೋಟಗಳಲ್ಲಿ ಎಲೆಗಳು ಇಲ್ಲದೇ ಉದುರಿ ಹೋಗಿರುವ ಕಾಫಿ ಗಿಡಗಳು. ಅತ್ತ ಕಾಫಿಯೂ ಇಲ್ಲದೇ ಮುಂದಿನ ವರ್ಷಕ್ಕೆ ಬೆಳೆಯು ಇಲ್ಲದೇ ಕಂಗಾಲು ಆಗಿರುವ ಕಾಫಿ ಬೆಳೆಗಾರರು.

ಈ ವರ್ಷ ಕೊಡಗು ಜಿಲ್ಲೆಯಲ್ಲಿ ಕಂಡು ಬರುತ್ತಿರುವ ಚಿತ್ರಣ. ಜಿಲ್ಲೆಯಲ್ಲಿ ಈ ಬಾರಿ ದೀರ್ಘಾವಧಿ ಮಳೆ ಯಾಗಿರುವುದರಿಂದ ಪ್ರಮುಖ ಬೆಳೆ ಕಾಫಿ ಸೇರಿದಂತೆ ಇತರ ತೋಟಗಾರಿಕಾ ಬೆಳೆಗಳಿಗೂ ಕೊಳೆ ರೋಗದ ಸಮಸ್ಯೆ ಎದುರಾಗಿದ್ದು, ಅತೀ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಈಗಾಗಲೇ ಕಾಫಿ ಉದುರಲಾ ರಂಭಿಸಿದೆ. ಇದರಿಂದ ಈ ಬಾರಿ ಜಿಲ್ಲೆಯಲ್ಲಿ ಕಾಫಿ ಉತ್ಪಾದನೆದು ಮೇಲೆ ಪರಿಣಾಮ ಬೀರಲಿದೆ. ಜಿಲ್ಲೆಯಲ್ಲಿ ಈ ಬಾರಿ ಮೇ ಅಂತ್ಯದಿಂದ ಇಂದಿನವರೆಗೂ ಮಳೆ - ಶೀತಗಾಳಿ ವಾತಾವರಣ ಕಂಡುಬಂದಿದೆ. ಇದು ಜಿಲ್ಲೆಯ ತೋಟಗಾರಿಕಾ ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡಿದ್ದು, ಮುಖ್ಯವಾಗಿ ಕಾಫಿ ಬೆಳೆಗಾರರಿಗೆ ಬೆಳೆ ನಷ್ಟದ ಭೀತಿ ಎದುರಾಗಿದೆ. ಇದಲ್ಲದೆ ಕಾಳು ಮೆಣಸು, ಅಡಕೆ ಸೇರಿದಂತೆ ಎಲ್ಲಾ ರೀತಿಯ ತೋಟಗಾರಿಕಾ ಬೆಳೆಗಳಿಗೆ ಸಮಸ್ಯೆ ಉಂಟಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಕೊಡಗಿನ ನಿರಂತರವಾಗಿ ಮಳೆ ಬಂದರೆ ಬೆಂಗಳೂರು ಮೈಸೂರು ಮಂಡ್ಯ ಜಿಲ್ಲೆಗಳಿಗೆ ಕುಡಿಯುವ ನೀರು ಬಂತು ಎಂದು ನಿಟ್ಟುಸಿರು ಬೀಡುತ್ತಾರೆ‌.ಆದರೆ ಇಲ್ಲಿನ ಜನರ ಪರಿಸ್ಥಿತಿಯ ಬಗ್ಗೆ ಯಾರಿಗೂ ಅರಿವು ಆಗೋಲ್ಲ ಮೇ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳ ವರೆಗೂ ನಿರಂತರವಾಗಿ 200 ಮೀ ಮಿ ನಷ್ಟ ಮಳೆಯಾಗಿರುವುದರಿಂದ ಇದೀಗ ಉದ್ಯಮಕ್ಕೆ ಹಾಗೂ ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ. ಮುಂದಿನ ವರ್ಷಕ್ಕೂ ಬೆಳೆ ಇಲ್ಲದಂತೆ ಆಗಿದ್ದು, ಕಾಫಿ ಕೃಷಿಕರು ಕಂಗಾಲು ಆಗಿದ್ದಾರೆ.ಹೀಗಾಗಿ ಸರ್ಕಾರ ತಕ್ಷಣವೇ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಇನ್ನೂ ಅತೀ ಹೆಚ್ಚು ಮಳೆಯಾಗಿ ಕಾಫಿ ಬೆಳೆಗಾರರು ಕಂಗಾಲು‌ ಅಗಿರುವ ಹಿನ್ನಲೆಯಲ್ಲಿ ನಿನ್ನೆ ದಿನ ಕೊಡಗಿನ ಬಿಜೆಪಿ ನಾಯಕರು ಸೋಮವಾರಪೇಟೆ ತಾಲ್ಲೂಕಿನ ಹಾಗೂ ಮಡಿಕೇರಿ ತಾಲೂಕಿನ ಹಲವಾರು ಗ್ರಾಮೀಣ ಭಾಗದ ಕಾಫಿ ತೋಟಗಳಿಗೆ ತೆರಳಿ ಕಾಫಿ ತೋಟಗಳ ಸರ್ವೆ ಕಾರ್ಯ ನಡೆಸಿದರು.

ಈ ಸಂದರ್ಭ ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ ಹಾಗೂ ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತಾನಾಡಿ ‘ಅತೀ ಹೆಚ್ಚು ಮಳೆಯಾಗಿರುವ ತೋಳೂರು ಶೆಟ್ಟಳ್ಳಿ, ಶಾಂತಳ್ಳಿ, ಬೆಟ್ಟದಳ್ಳಿ, ಹಮ್ಮಿಯಾಲ, ಮುಟ್ಟು, ಮುಕ್ಕೋಡ್ಲು, ಕಾಲೂರು, ಗಾಳಿಬೀಡು, ಬೆಟ್ಟಗೇರಿ, ಚೇರಂಬಾಣೆ, ಚೆಟ್ಟಿಮಾನಿ, ಭಾಗಮಂಡಲ, ಬಲ್ಲಮಾವಟಿ, ಕಕ್ಕಬ್ಬೆ ವಿಭಾಗಗಳಿಗೆ ಪಕ್ಷದ ಸಮೀಕ್ಷಾ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಭಾರೀ ಮಳೆಯಿಂದ ಜಿಲ್ಲೆಯ ಪ್ರಮುಖ ಕೃಷಿಯಾದ ಕಾಫಿಗೆ ಅಪಾರ ಹಾನಿಯಾಗಿದೆ. ಅರೇಬಿಕಾ ಕಾಫಿ ಫಸಲು ಅಧಿಕ ಮಳೆಯಿಂದ ಕೊಳೆತು ಉದುರಿದ್ದರೆ, ರೋಬಸ್ಟಾ ಕಾಫಿಯೂ ಕೊಳೆ ರೋಗದ ಸಮಸ್ಯೆಗೆ ತುತ್ತಾಗಿದ್ದು, ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಹೀಗಿದ್ದೂ ಈ ಬಗ್ಗೆ ಜಿಲ್ಲೆಯ ಶಾಸಕರಾಗಲಿ, ಉಸ್ತುವಾರಿ ಸಚಿವರಾಗಲಿ ಹೆಚ್ಚಿನ ಕಾಳಜಿ ವಹಿಸಿಲ್ಲವೆಂದು ಆರೋಪಿಸಿ, ಪ್ರಸ್ತುತ ಪರಿಸ್ಥಿಗಳ ನಡುವೆ ಬೆಳೆಗಾರಿಗೆ ತಲಾ 2 ಲಕ್ಷ ಪರಿಹಾರವನ್ನಾದರು ನೀಡಬೇಕೆಂದು ಆಗ್ರಹಿಸಿದರು. ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಸತತ ಮೂರು ವರ್ಷ ಬೆಳೆಗಾರರಿಗೆ ಪರಿಹಾರವನ್ನು ವಿತರಿಸಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಪರಿಹಾರವನ್ನು ನೀಡಿಲ್ಲ. ಇದೀಗ ಬೆಳೆಹಾನಿ ಸಮೀಕ್ಷಾ ತಂಡವನ್ನು ಜಿಲ್ಲಾಡಳಿತ ರಚಿಸಿದೆ. ಇದು ಸಮೀಕ್ಷೆ ಮಾಡುವುದರ ಒಳಗಾಗಿ ಕೊಳೆತು ಉದುರಿ ಹೋಗಿರುವ ಕಾಫಿ ಕರಗಿ ಹೋಗಿರುತ್ತದೆ, ಬೆಳೆಹಾನಿಯ ನಿಖರ ಮಾಹಿತಿ ದೊರೆಯುವುದಿಲ್ಲ ಎಂದರು..ಹೀಗಾಗಿ ಇಂದು ಕಾಫಿ ತೋಟಗಳ ವಾಸ್ತವವನ್ನು ಅರಿತು ಸಂಸದರ ಮೂಲಕ ಹಾಗು ರಾಜ್ಯ ಸರ್ಕಾರಕ್ಕೆ ಸಮೀಕ್ಷೆ ವರದಿ ನೀಡಲಾಗುತ್ತದೆ ಎಂದು ತಿಳಿಸಿದರು.

 ಒಟ್ಟಿನಲ್ಲಿ ಪ್ರಸ್ತುತ ವರ್ಷ ಜಿಲ್ಲೆಯಲ್ಲಿ ಸುರಿದ ಅತಿವೃಷ್ಟಿಯಿಂದ ಮುಂದಿನ ದಿನಗಳಲ್ಲಿ ಕಾಫಿ ಕ್ಷೇತ್ರ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿರುವುದರಿಂದ ಸರಕಾರ ಹಾಗೂ ಕಾಫಿ ಮಂಡಳಿ ಬೆಳೆಗಾರರ ನೆರವಿಗೆ ಬರಬೇಕೆಂದು ಎಂಬುವುದು ಕಾಫಿ ಬೆಳೆಗಾರರ ಆಗ್ರಹವಾಗಿದೆ.