ಬೆಳೆ ಹಾನಿ ಸಮೀಕ್ಷೆ; ತಂಡ ರಚನೆ

ಮಡಿಕೇರಿ:-ಕೊಡಗು ಜಿಲ್ಲೆಯಲ್ಲಿ 2025-26ನೇ ಸಾಲಿನಲ್ಲಿ ಅತೀವೃಷ್ಟಿ, ಬರ, ಪ್ರಾಕೃತಿಕ ವಿಕೋಪ, ಹವಾಮಾನ ವೈಪರೀತ್ಯ ಮತ್ತಿತರ ಕಾರಣಗಳಿಂದಾಗಿ ಹಾನಿಯಾಗಿರುವ ಬೆಳೆಗಳ ಸಮೀಕ್ಷೆ ನಡೆಸಿ, ಗ್ರಾಮವಾರು, ಹೋಬಳಿವಾರು ಎಷ್ಟೆಷ್ಟು ಹಾನಿಯಾಗಿರುತ್ತದೆ ಎಂಬುದನ್ನು ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಹಾಗೂ ಈ ಸಂಬಂಧ ಸಂಬಂಧಪಟ್ಟ ಸಂತ್ರಸ್ತರಿಗೆ ಪರಿಹಾರ ಪಾವತಿಸುವ ಸಲುವಾಗಿ ತಂಡ ರಚಿಸಿ ಜಿಲ್ಲಾಧಿಕಾರಿ ಅವರು ಆದೇಶಿಸಿದ್ದಾರೆ.
ಕೃಷಿ ಇಲಾಖೆ ಜಂಟಿ ನಿರ್ದೇಶಕರು, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು, ವಿರಾಜಪೇಟೆಯ ಕಾಫಿ ಮಂಡಳಿ ಉಪ ನಿರ್ದೇಶಕರು ಹಾಗೂ ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ, ಕುಶಾಲನಗರ ಮತ್ತು ಪೊನ್ನಂಪೇಟೆ ಈ ತಾಲ್ಲೂಕುಗಳ ತಹಶೀಲ್ದಾರರು ತಂಡದಲ್ಲಿದ್ದಾರೆ. ಈ ತಂಡವು ಬೆಳೆಹಾನಿಯಾದ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸ್ಥಳ ಪರಿಶೀಲನೆ ನಡೆಸಿ ಛಾಯಾಚಿತ್ರದೊಂದಿಗೆ ಬೆಳೆ ಹಾನಿಯ ಬಗ್ಗೆ ಖಚಿತ ವರದಿ ಸಲ್ಲಿಸುವುದು. ತಾಲ್ಲೂಕುವಾರು ತಂಡಗಳನ್ನು ಇಲಾಖೆಗಳ ಸಹಯೋಗದೊಂದಿಗೆ ರಚಿಸಿಕೊಂಡು ವರದಿಯನ್ನು ಕ್ರೋಢೀಕರಿಸಿ ಅಕ್ಟೋಬರ್, 06 ರೊಳಗೆ ಸಂಬಂಧಿಸಿದ ತಹಶೀಲ್ದಾರರು ಕಚೇರಿಗೆ ಸಲ್ಲಿಸುವುದು. ಉಪ ನಿರ್ದೇಶಕರು, ತೋಟಗಾರಿಕಾ ಇಲಾಖೆ, ಕೊಡಗು ಜಿಲ್ಲೆ, ಮಡಿಕೇರಿ ಇವರು ಕಾಫಿ ಬೆಳೆ ಹಾನಿ ಸಮೀಕ್ಷೆಯೊಂದಿಗೆ ಕರಿಮೆಣಸು ಬೆಳೆ ಹಾನಿಯನ್ನು ಸಹ ಅಂದಾಜಿಸಿ ವರದಿ ಸಲ್ಲಿಸುವಚಿತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.