ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ವತಿಯಿಂದ ಸುಜ್ಞಾನನಿಧಿಶಿಷ್ಯ ವೇತನ ಮಂಜೂರಾತಿ ಪತ್ರ ವಿತರಣೆ

ಸೋಮವಾರಪೇಟೆ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್(ರಿ) ಸೋಮವಾರಪೇಟೆ ಇದರ ವತಿಯಿಂದ ಸುಜ್ಞಾನನಿಧಿ ಶಿಷ್ಯವೇತನ ಮಂಜೂರಾತಿಗೊಂಡಿರುವ ವಿದ್ಯಾರ್ಥಿಗಳಿಗೆ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮವನ್ನು ಯೋಜನಾಕಛೇರಿಯಲ್ಲಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ವಿಧಾನಪರಿ಼ಷತ್ ಸದಸ್ಯರಾದ ಶ್ರೀ ಎಸ್ ಜಿ ಮೇದಪ್ಪರವರು ದೀಪಾ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಶ್ರದ್ಧೆ, ಭಕ್ತಿ, ಹಠ ಛಲದಿಂದ ವಿದ್ಯಾಭ್ಯಾಸವನ್ನು ಮಾಡಬೇಕು, ಇಲ್ಲಿ ಬಂದಿರುವ ಪ್ರತಿಯೊಬ್ಬವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡುವವರಾಗಿದ್ದು, ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಉತ್ತಮ ಹುದ್ದೆಯನ್ನು ಅಲಂಕರಿಸಿ, ಜನರ ಸೇವೆಯನ್ನು ಮಾಡುವಂತಾಗಬೇಕು ಎಂದು ತಿಳಿಸಿದರು.
ಪರಮ ಪೂಜ್ಯ ಹೆಗ್ಗಡೆಯವರು ಸಮಾಜದ ಬಡ ವಿದ್ಯಾರ್ಥಿಗಳು ಕೂಡ ಉನ್ನತ ವ್ಯಾಸಂಗ ಮಾಡುವಂತಾಗಬೇಕು ಎಂದು ಈ ಸುಜ್ಞಾನನಿಧಿ ಶಿಷ್ಯವೇತನ ಕಾರ್ಯಕ್ರಮವನ್ನು ರೂಪಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಶ್ರೀಮತಿ ಲೀಲಾವತಿರವರು ಮಾತನಾಡುತ್ತಾ ಬಡವರು ಬಡವರಾಗಿಯೇ ಇರಬಾರದು, ತನ್ನ ಹುಟ್ಟು-ಸಾವಿನ ಮಧ್ಯದಲ್ಲಿ ಇರುವ ಸಮಯದಲ್ಲಿ ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕಬೇಕೆನ್ನುವ ಕನಸನ್ನು ಕಟ್ಟಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪರಮ ಪೂಜ್ಯ ಖಾವಂದರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಗ್ರಾಮಗಳ ಅಭಿವೃದ್ದಿಗೆ ರೂಪಿಸಿರುವ ಹಲವು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಜಿಲ್ಲಾ ಜನ ಜಾಗೃತಿ ವೇದಿಕೆ ಸಂಸ್ಥಾಪಕ ಅದ್ಯಕ್ಷರಾದ ಶ್ರೀ ಅಭಿಮನ್ಯುಕುಮಾರ್ ರವರು ಮಾತನಾಡಿ,ಪ್ರತಿಯೊಬ್ಬ ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸದೊಂದಿಗೆ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು, ಇಲ್ಲದಿದ್ದಲ್ಲಿ ನೀವು ಕಲಿತ ಶಿಕ್ಷಣಕ್ಕೆ ಮೌಲ್ಯವಿರುವುದಿಲ್ಲ. ಎಂದು ತಿಳಿಸಿದರು. ಈ ಸಂದರ್ಭ ಜಿಲ್ಲಾ ಜನ ಜಾಗೃತಿ ಸದಸ್ಯರಾದ ಶ್ರೀ ಸುರೇಶ್ ಮಸಗೋಡುರವರು ಉಪಸ್ಥಿತರಿದ್ದರು. ಯೋಜನಾಧಿಕಾರಿಯವರಾದ ಶ್ರೀ ಹನುಮಂತಪ್ಪ ಅಂಗಡಿ ಸ್ವಾಗತಿಸಿ,ಕೃಷಿ ಮೇಲ್ವಿಚಾರಕರಾದ ಶ್ರೀ ಹರೀಶ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು .