ಮಳೆಗಾಲದಲ್ಲೂ ಕುಡಿಯುವ ನೀರಿನ ಸಮಸ್ಯೆ : ಗ್ರಾಮ ಪಂಚಾಯಿತಿ ವಿರುದ್ಧ ಆಕ್ರೋಶ

ಸಿದ್ದಾಪುರ : ಇಲ್ಲಿನ ಗುಹ್ಯ ಗ್ರಾಮದ ಕೂಡುಗದ್ದೆ ವ್ಯಾಪ್ತಿಯ ನಿವಾಸಿಗಳಿಗೆ ಮಳೆಗಾಲದಲ್ಲೂ ಕುಡಿಯುವ ನೀರಿಗೆ ಪರದಾಡುವಂತ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ನೂರಾರು ಕಾರ್ಮಿಕ ಮನೆಗಳಿರುವ ಈ ವ್ಯಾಪ್ತಿಗೆ ಸರಿಯಾಗಿ ಕುಡಿಯುವ ನೀರು ಪೂರೈಕೆ ಆಗದಿದ್ದು, ಕೂಲಿ ಕಾರ್ಮಿಕರು ಪ್ರತಿನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ. ಗ್ರಾಮ ಪಂಚಾಯಿತಿಯಿಂದ ಕೇಂದ್ರ ಸರ್ಕಾರದ ಪ್ರತಿಷ್ಠಿತ ಯೋಜನೆಗಳಲ್ಲೊಂದಾದ ಮನೆ ಮನೆಗೆ ಗಂಗೆ ಯೋಜನೆಯಡಿ ಮನೆ ಮನೆಗೆ ನಲ್ಲಿ ಹಾಕಲಾಗಿದೆ. ಆದರೆ ನಲ್ಲಿಯಲ್ಲಿ ಕುಡಿಯುವ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ವಾರಕ್ಕೆ ಎರಡು ಮೂರು ಬಾರಿಯಾದರೂ ನೀರು ಬಂದರೆ ಜನತೆಗೆ ಅನುಕೂಲ ಆಗುತ್ತಿತ್ತು. ಆದರೆ ಸ್ಥಳೀಯ ಗ್ರಾಮ ಪಂಚಾಯತಿಯವರು ಕೆಲವೆಡೆ ವಾರಕ್ಕೊಮ್ಮೆ , ಕೆಲವು ಭಾಗದಲ್ಲಿ 10 ದಿನಕ್ಕೊಮ್ಮೆ ನೀರು ಬಿಡುತ್ತಿದ್ದಾರೆ. ಈ ವ್ಯಾಪ್ತಿಯಲ್ಲಿ ಎರಡು ವಾರ ಕಳೆದರೂ ನೀರು ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಸ್ಥಳೀಯರು, ವಾಟರ್ ಮ್ಯಾನ್ ಹಾಗೂ ಪಂಚಾಯತಿಗೆ ಈ ಬಗ್ಗೆ ಕೇಳಿದರೆ ಉಡಾಫೆ ಮಾತುಗಳನ್ನಾಡುತ್ತಾರೆ ಎಂದು ಆರೋಪಿಸಿದ್ದಾರೆ. ಕೂಡಲೇ ಸಂಬಂಧಪಟ್ಟವರು, ಸ್ಥಳೀಯ ಪ್ರತಿನಿಧಿಗಳು ಗಮನ ಹರಿಸಿ ಕುಡಿಯುವ ನೀರಿನ ಪೂರೈಕೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುವುದೇ ಸಾರ್ವಜನಿಕರ ಆಗ್ರಹವಾಗಿದೆ .
ಇಲ್ಲಿನ ಜನ ಪಂಚಾಯತಿ ನೀರನ್ನೇ ಅವಲಂಬಿಸಿದ್ದಾರೆ ಆದರೆ ಸ್ಥಳೀಯ ಪಂಚಾಯತಿ ಸಕಾಲಕ್ಕೆ ಕುಡಿಯುವ ನೀರು ಪೂರೈಕೆ ಮಾಡುತ್ತಿಲ್ಲ, ಇದರಿಂದಾಗಿ ಮಳೆಗಾಲದಲ್ಲೂ ನಾವು ಕುಡಿಯುವ ನೀರಿಗೆ ಪರದಾಡುವಂತ ಸ್ಥಿತಿ ಎದುರಾಗಿದೆ ಕೂಡಲೇ ಸ್ಥಳೀಯ ಶಾಸಕರು ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಅಶ್ರಫ್, ಸ್ಥಳೀಯ ನಿವಾಸಿ